ಸೆ.5 ರಿಂದ ಜಿಯೋ ಬ್ರಾಡ್‍ಬ್ಯಾಂಡ್ ಕಮಾಲ್ – ಬೆಲೆ ಎಷ್ಟು? ವಿಶೇಷತೆ ಏನು?

Public TV
2 Min Read

ಮುಂಬೈ: ಬ್ರಾಡ್‍ಬ್ಯಾಂಡ್ ಕ್ಷೇತ್ರದಲ್ಲಿ ಕ್ರಾಂತಿ ಮಾಡಲಿರುವ ಜಿಯೋ ಫೈಬರ್ ಸೆಪ್ಟೆಂಬರ್ 5 ರಂದು ಅಧಿಕೃತವಾಗಿ ಆರಂಭವಾಗಲಿದೆ.

ರಿಲಯನ್ಸ್ ಕಂಪನಿಯ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು ಈ ವಿಚಾರವನ್ನು ತಿಳಿಸಿದ್ದು ಅಮೆರಿಕದಲ್ಲಿರುವ ವೇಗದ ಡೇಟಾಕ್ಕಿಂತಲೂ ನಾವು ವೇಗದ ಡೇಟಾ ಸೇವೆ ನೀಡುತ್ತೇವೆ ಎಂದು ತಿಳಿಸಿದ್ದಾರೆ.

ಅಮೆರಿಕದಲ್ಲಿ ಸಾಧಾರಾಣ ಡೇಟಾ ಸ್ಪೀಡ್ 90 ಎಂಬಿಪಿಎಸ್(ಮೆಗಾ ಬೈಟ್ಸ್ ಪರ್ ಸೆಕೆಂಡ್) ಇದ್ದರೆ, ಜಿಯೋದ ಕಡಿಮೆ ಸ್ಪೀಡ್ 100 ಎಂಬಿಪಿಎಸ್ ಇರಲಿದೆ. ಮುಂದೆ 1 ಜಿಬಿಪಿಎಸ್(ಗಿಗಾ ಬೈಟ್ಸ್ ಪರ್ ಸೆಕೆಂಡ್) ವೇಗದಲ್ಲಿ ಸೇವೆ ನೀಡಲಾಗುವುದು ಎಂದು ಮುಕೇಶ್ ಅಂಬಾನಿ ವಿವರಿಸಿದರು.

1600 ನಗರಗಳಲ್ಲಿ ಆರಂಭದಲ್ಲಿ ಆರಂಭಿಸಿ 2 ಕೋಟಿ ಜನ, 1.5 ವ್ಯಾಪಾರ ಸಂಸ್ಥೆಗಳನ್ನು ತಲುಪುವ ಗುರಿಯನ್ನು ಜಿಯೋ ಹಾಕಿಕೊಂಡಿದೆ. ಈಗಾಗಲೇ ಜಿಯೋ ಫೈಬರ್ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದ್ದು, 5 ಲಕ್ಷ ಮನೆಗೆ ಸಂಪರ್ಕ ನೀಡಲಾಗಿದೆ. ಒಟ್ಟು 34 ಕೋಟಿ ಗ್ರಾಹಕರನ್ನು ತಲುಪುವ ಮೂಲಕ ದೇಶದ ನಂಬರ್ ಒನ್ ಟೆಲಿಕಾಂ ಕಂಪನಿಯಾಗಿರುವ ಜಿಯೋ ಈಗ ವಿಶ್ವದ ನಂಬರ್ 2 ಟೆಲಿಕಾಂ ಕಂಪನಿಯಾಗಿ ಹೊರಹೊಮ್ಮಿದೆ.

ಬೆಲೆ ಎಷ್ಟು? ವಿಶೇಷತೆ ಏನು?
ತಿಂಗಳಿಗೆ 700 ರೂ. ಕನಿಷ್ಟ ಪ್ಯಾಕ್ ಇರಲಿದ್ದು 10 ಸಾವಿರ ರೂ. ಗರಿಷ್ಟ ಪ್ಯಾಕ್ ಇರಲಿದೆ. ದೇಶದ ಒಳಗಡೆಯ ಕರೆಗೆ ಸಂಪೂರ್ಣ ಉಚಿತವಾಗಿದ್ದು, ವಿದೇಶದ ಕರೆಗಳೂ ಕಡಿಮೆ ದರದಲ್ಲಿ ಇರಲಿದೆ. ಅದರಲ್ಲೂ ಅಮೆರಿಕ ಮತ್ತು ಕೆನಡಾ ದೇಶಗಳಿಗೆ ತಿಂಗಳಿಗೆ 500 ರೂ. ಪಾವತಿಸಿದ್ರೆ ಅನ್‍ಲಿಮಿಟೆಡ್ ಕರೆ ಮಾಡಬಹುದು.

2016ರಲ್ಲಿ ಜಿಯೋ ತನ್ನ ಮೊಬೈಲ್ ಸೇವೆಗೆ ಎಂಟ್ರಿ ಕೊಟ್ಟಾಗ ಮೂರು ತಿಂಗಳು ವೆಲಕಂ ಆಫರ್ ಬಿಡುಗಡೆ ಮಾಡಿತ್ತು. ಮೂರು ತಿಂಗಳು ಉಚಿತವಾಗಿ ಡೇಟಾ ನೀಡುವ ಆಫರ್ ಭರ್ಜರಿ ಯಶಸ್ವಿ ಕಂಡಿತ್ತು. ಈಗ ಇದೇ ರೀತಿಯ ಉಚಿತ ಆಫರ್ ಬಿಡುಗಡೆ ಮಾಡಿದೆ. ಒಂದು ವರ್ಷದ ವಾರ್ಷಿಕ ಪ್ಲಾನ್ ಖರೀದಿ ಮಾಡಿದವರಿಗೆ ಉಚಿತವಾಗಿ 4ಕೆ ಎಲ್‍ಇಡಿ ಟಿವಿ ಮತ್ತು 4ಕೆ ಸೆಟ್ ಟಾಪ್ ಬಾಕ್ಸ್ ನೀಡಲಿದೆ. ಟಿವಿ ಯಾವ ಕಂಪನಿಯದ್ದು ಗಾತ್ರ ಎಷ್ಟು? ಒಂದು ವರ್ಷದ ಪ್ಲಾನ್ ಗೆ ಎಷ್ಟು ರೂ. ಶುಲ್ಕ ಎನ್ನುವ ವಿವರ ಸೆಪ್ಟೆಂಬರ್ 5 ರಂದು ಗೊತ್ತಾಗಲಿದೆ.

ಗ್ರಾಹಕರನ್ನು ಸೆಳೆಯಲು ಜಿಯೋ ಮತ್ತೊಂದು ಆಫರ್ ಬಿಡುಗಡೆ ಮಾಡಿದ್ದು ಇನ್ನು ಮುಂದೆ ಬಿಡುಗಡೆಯಾದ ದಿನವೇ ಮನೆಯಲ್ಲಿ ಕುಳಿತು ಚಿತ್ರವನ್ನು ವೀಕ್ಷಿಸಬಹುದು. 2020ರ ಮಧ್ಯಂತರಲ್ಲಿ ಇದು ಜಾರಿಯಾಗಲಿದೆ, ಇದಕ್ಕೆ ‘ಜಿಯೋ ಫಸ್ಟ್ ಡೇ ಫಸ್ಟ್ ಶೋ‘ ಹೆಸರನ್ನು ಇರಿಸಿದೆ.

Share This Article
Leave a Comment

Leave a Reply

Your email address will not be published. Required fields are marked *