ಗಮನಿಸಿ, ಬೈಕ್ ಸವಾರರು ನೀರಿನಲ್ಲಿ ಕೊಚ್ಚಿ ಹೋದ ವಿಡಿಯೋ ಕೊಡಗಿನದ್ದಲ್ಲ

Public TV
1 Min Read

ಬೆಂಗಳೂರು: “ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕೊರಂಗಾಲದಲ್ಲಿ ಬೈಕ್ ಸವಾರರಿಬ್ಬರು ಮಣ್ಣಿನ ಸೇತುವೆಯೊಂದಿಗೆ ಕೊಚ್ಚಿ ಹೋಗಿದ್ದಾರೆ. ಸವಾರರ ಮಾಹಿತಿ ಲಭ್ಯವಾಗಿಲ್ಲ” ಎಂಬ ಸಾಲುಗಳೊಂದಿಗೆ ಒಂದು ವಿಡಿಯೋ ಸಾಮಾಜಿಕ ಜಾಲತಾಣ, ವಾಟ್ಸಪ್ ನಲ್ಲಿ ಹರಿದಾಡುತ್ತಿದೆ. ಆದರೆ ಈ ವಿಡಿಯೋ ಮಡಿಕೇರಿಗೆ ಸಂಬಂಧಿಸಿಲ್ಲ. ಇದೊಂದು ಸುಳ್ಳು ಸುದ್ದಿಯಾಗಿದ್ದು, ಈ ವಿಡಿಯೋ ಶೇರ್ ಮಾಡುವುದನ್ನು ನಿಲ್ಲಿಸಿ.

ಸಾಮಾಜಿಕ ಜಾಲತಾಣ ಮಾತ್ರವಲ್ಲದೇ ಕೆಲ ಸುದ್ದಿ ಮಾಧ್ಯಮಗಳಲ್ಲಿ ಕೂಡ ಈ ವಿಡಿಯೋವನ್ನು ಪ್ರಸಾರ ಮಾಡಿದ್ದು ಕೊಡಗು ಜಿಲ್ಲೆಯ ಕೊರಂಗಾಲದಲ್ಲಿ ಘಟನೆ ನಡೆದಿದೆ ಎಂದು ತಿಳಿಸಲಾಗಿದೆ.

ವಿಡಿಯೋ ಎಲ್ಲಿಯದ್ದು?
ಸದ್ಯ ವೈರಲ್ ಆಗುತ್ತಿರುವ ಈ ವಿಡಿಯೋ ಕಾಂಬೋಡಿಯಾಗೆ ಸೇರಿದ್ದು, ದುರ್ಘಟನೆಯೊಂದರಲ್ಲಿ ಇಬ್ಬರು ಬೈಕ್ ಸವಾರರು ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಈ ಬೈಕ್ ಸವಾರರು ಕಾಂಬೋಡಿಯಾದ ಸೈನ್ಯಕ್ಕೆ ಸೇರಿದವರು.

ಸೈನಿಕರಾದ ಕಿನಾಕ್ ಡಾಲಿ ಮತ್ತು ಸಿಕ್ ವಾಂಡಿ ಎಂಬವರು ನದಿಗೆ ಅಡ್ಡಲಾಗಿ ಮಣ್ಣು ಮತ್ತು ಮರದಿಂದ ನಿರ್ಮಿಸಲಾಗಿದ್ದ ಸೇತುವೆಯನ್ನು ಬೈಕಿನಲ್ಲಿ ದಾಟುತ್ತಿದ್ದರು. ಈ ಸಂದರ್ಭದಲ್ಲಿ ಮಣ್ಣಿನ ಸೇತುವೆ ನೀರಿನ ರಭಸಕ್ಕೆ ಸಿಕ್ಕಿ ಕೊಚ್ಚಿ ಹೋಗಿತ್ತು. ಇಬ್ಬರು ಸೈನಿಕರು ಘಟನೆಯಲ್ಲಿ ನಾಪತ್ತೆಯಾಗಿದ್ದರು. ಈ ವಿಡಿಯೋವನ್ನು 2019 ಜುಲೈ 25 ರಂದು ಯೂಟ್ಯೂಬ್ ನಲ್ಲಿ ಅಪ್‍ಲೋಡ್ ಮಾಡಲಾಗಿದೆ. ಜುಲೈ 24 ರಂದು ಘಟನೆ ನಡೆದಿರುವುದಾಗಿ ಮಾಹಿತಿ ನೀಡಲಾಗಿದೆ.

ಕರ್ನಾಟಕದ ಕರಾವಳಿ ಸೇರಿದಂತೆ ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವು ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಹಾಗೂ ಗುಡ್ಡ ಕುಸಿತ ಘಟನೆಗಳು ನಡೆದಿದೆ. ಪ್ರವಾಹದಲ್ಲಿ ಸಿಲುಕಿರುವ ಜನರನ್ನು ರಕ್ಷಣೆ ಮಾಡಿ ಸುರಕ್ಷಿತ ಸ್ಥಳಗಳಿಗೆ ಕರೆತರುವ ಕಾರ್ಯವನ್ನು ರಾಜ್ಯ ಆಯಾ ಜಿಲ್ಲಾಡಳಿತಗಳು ಎನ್‍ಡಿಆರ್ ಎಫ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ನಡೆಸುತ್ತಿವೆ.

https://www.youtube.com/watch?v=S9z1OcVXNdg&feature=youtu.be

Share This Article
Leave a Comment

Leave a Reply

Your email address will not be published. Required fields are marked *