ಪ್ರವಾಹ ಪೀಡಿತರ ರಕ್ಷಣೆಗೆ ಸರ್ಕಾರ ಬದ್ಧ: ಸಿಎಂ

Public TV
1 Min Read

ಬೆಳಗಾವಿ: ರಾಜ್ಯದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಅಗತ್ಯ ಕ್ರಮ ಕೈಗೊಳ್ಳಲಿದೆ. ತಾವು ಕೂಡ ಪ್ರವಾಹದ ಪ್ರದೇಶಗಳಿಗೆ ಭೇಟಿ ನೀಡುತ್ತಿರುವುದಾಗಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

ಇಂದು ಇಡೀ ದಿನ ಈ ಭಾಗದಲ್ಲೇ ಪ್ರವಾಸ ಮಾಡುತ್ತಿದ್ದು, ಮುಂದಿನ 3 ದಿನಗಳಲ್ಲಿ ಇಲ್ಲೇ ಇರುತ್ತೇವೆ. ಸುಮಾರು 4 ತಂಡಗಳಲ್ಲಿ ಭೇಟಿ ನೀಡಲಿದ್ದೇವೆ. ನಾಯಕರಾದ ಕೆಎಸ್ ಈಶ್ವರಪ್ಪ, ಜಗದೀಶ್ ಶೆಟ್ಟರ್, ಶೋಭಾ ಕರಂದ್ಲಾಜೆ ಅವರ ನೇತೃತ್ವದಲ್ಲಿ ಈ ಭಾಗದ ಪ್ರವಾಹ ಉಂಟಾಗಿರುವ ಕೇಂದ್ರಗಳಿಗೆ ಭೇಟಿ ನೀಡಲಾಗುವುದು ಎಂದರು.

ಈಗಾಗಲೇ ಪ್ರವಾಹ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಸಿಎಂ ಮಾಹಿತಿ ಪಡೆದಿದ್ದು, ಬೆಳಗಾವಿ ನಗರದಲ್ಲಿ ತೆರೆಯಲಾಗಿರುವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 106 ಗ್ರಾಮಗಳು ಜಲಾವೃತಗೊಂಡಿದ್ದು, ಜನ, ಜಾನುವಾರುಗಳ ರಕ್ಷಣೆಗೆ ಸರ್ಕಾರ ಆದ್ಯತೆ ನೀಡಲಿದೆ. ನಾಳೆ ಹೆಚ್ಚುವರಿ ಸೇನೆಯ ತುಕಡಿಗಳನ್ನು ನಿಯೋಜಿಸಲಾಗುವುದು ಎಂದು ಜನರಿಗೆ ಧೈರ್ಯ ತುಂಬಿದರು.

ಪರಿಹಾರ ಕೇಂದ್ರದಲ್ಲಿ ಇರುವವರಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು. ಈಗಾಗಲೇ ಪ್ರವಾಹದಲ್ಲಿ ಸಿಲುಕಿರುವ ಕೆಲವರನ್ನು ರಕ್ಷಣೆ ಮಾಡಲಾಗಿದೆ. ಮುಂದಿನ ಕ್ರಮಗಳನ್ನ ಕೈಗೊಳ್ಳಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದ ವೇಳೆ ರಸ್ತೆ ಸಂಚಾರ ನಿಯಂತ್ರಣದ ಸಂದರ್ಭದಲ್ಲಿ ಅಪಘಾತದಲ್ಲಿ ಮೃತಪಟ್ಟಿರುವ ಪಿ.ಎಸ್.ಐ ಲಟ್ಟೆ ಕುಟುಂಬಕ್ಕೆ ಐವತ್ತು ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ಒದಗಿಸಲಾಗುವುದು ಎಂಬ ಭರವಸೆಯನ್ನು ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *