ಬಹುಮತ ಇಲ್ಲದಿದ್ದರೂ ರಾಜ್ಯ ಸಭೆಯಲ್ಲಿ ತ್ರಿವಳಿ ತಲಾಖ್ ಬಿಲ್ ಕೊನೆಗೂ ಪಾಸ್

Public TV
3 Min Read

ನವದೆಹಲಿ: ಎರಡು ಬಾರಿ ವಿಫಲವಾಗಿದ್ದ ತಲಾಖ್ ಮಸೂದೆ ಈ ಬಾರಿ ರಾಜ್ಯಸಭೆಯಲ್ಲಿ ಪಾಸ್ ಆಗಿದೆ. ಸದನದಲ್ಲಿ ಮೋದಿ ಸರ್ಕಾರಕ್ಕೆ ಬಹುಮತ ಇಲ್ಲದಿದ್ದರೂ ಕೂಡ ಮಸೂದೆಯ ಪರ 99 ಮತಗಳು ಬಂದಿದ್ದರೆ, ವಿರೋಧವಾಗಿ 84 ಮತಗಳು ಸಿಕ್ಕಿದೆ. ಪಾಸ್ ಆದ ಬೆನ್ನಲ್ಲೇ ಕೇಂದ್ರ ಸರ್ಕಾರ ಇದು ಐತಿಹಾಸಿಕ ಎಂದು ಬಣ್ಣಿಸಿದೆ.

ಇಂದು ಸಚಿವ ರವಿಶಂಕರ್ ಪ್ರಸಾದ್ ತಲಾಖ್ ಮಸೂದೆಯನ್ನ ರಾಜ್ಯಸಭೆಯಲ್ಲಿ ಮಂಡಿಸಿದರು. ಈ ಮಸೂದೆ ಮುಸ್ಲಿಂ ಮಹಿಳೆಯರಿಗೆ ನ್ಯಾಯ ಒದಗಿಸಲು ಹೊರತು ಯಾವುದೇ ರಾಜಕೀಯ ದುರುದ್ದೇಶಕ್ಕೆ ಎಂದು ಈ ವೇಳೆ ಪ್ರತಿಪಾದಿಸಿದರು. ಇದರಲ್ಲಿ ವೋಟ್ ಬ್ಯಾಂಕ್ ಉದ್ದೇಶ ಇಲ್ಲ. ಇದು ಮಹಿಳೆಯರ ಸಬಲೀಕರಣಕ್ಕಾಗಿ ಜಾರಿಗೆ ತಂದಿರುವ ಕಾನೂನು ಆಗಿದೆ ಎಂದರು.

ಮಸೂದೆಯನ್ನು ಮಂಡನೆಯನ್ನು ಖಂಡಿಸಿ ಎನ್‍ಡಿಎ ಮಿತ್ರಪಕ್ಷ ಜೆಡಿಯು ಸದಸ್ಯರು ಸಭಾತ್ಯಾಗ ಮಾಡಿದರು. ಮತ್ತೊಂದೆಡೆ ಕಾಂಗ್ರೆಸ್, ಎನ್‍ಸಿಪಿ ಕೂಡ ಮಸೂದೆಯನ್ನು ವಿರೋಧಿಸಿತ್ತು. ಇದರೊಂದಿಗೆ ಎಐಎಡಿಎಂಕೆ ಸದಸ್ಯರು ಕೂಡ ಸಭಾತ್ಯಾಗ ಮಾಡಿದರು. ರಾಜ್ಯಸಭೆಯಲ್ಲಿ ಸದ್ಯ 241 ಸದಸ್ಯರಿದ್ದಾರೆ. ಜೆಡಿಯು, ಅಣ್ಣಾಡಿಎಂಕೆ, ಟಿಆರ್‍ಎಸ್ ಸದಸ್ಯರು ಸದನದಿಂದ ನಡೆದ ಪರಿಣಾಮ ಸದನದ ಸದಸ್ಯರ ಸಂಖ್ಯೆ 213ಕ್ಕೆ ಇಳಿದಿತ್ತು. ಮಸೂದೆ 99 ಮತ್ತು 84 ಮತಗಳ ಅಂತರದಲ್ಲಿ ಅಂಗೀಕರವಾಯಿತು. ಬಿಜೆಡಿ ಮಸೂದೆ ಪರ ಮತ ಹಾಕಿತ್ತು. ತ್ರಿವಳಿ ತಲಾಖ್ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕರವಾದ ಹಿನ್ನೆಲೆಯಲ್ಲಿ ಮಸೂದೆಯನ್ನು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಲಾಗುತ್ತಿದೆ.

ಕಾಂಗ್ರೆಸ್ ಪಕ್ಷದ ಐವರು, ಸಮಾಜವಾದಿ ಪಕ್ಷದ 6 ಮಂದಿ, ಮಾಯಾವತಿ ಅವರ ಬಹುಜನ ಸಮಾಜವಾದಿ ಪಕ್ಷದಿಂದ 4 ಮಂದಿ, ತೃಣಮೂಲ ಕಾಂಗ್ರೆಸ್ ಪಕ್ಷದ ಇಬ್ಬರು, ಲಾಲು ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳ ಮತ್ತು ಎಂಕೆ ಸ್ಟಾಲಿನ್ ನಾಯಕತ್ವದ ಡಿಎಂಕೆ ಪಕ್ಷದಿಂದ ತಲಾ ಒಬ್ಬರು ಸದನಕ್ಕೆ ಗೈರಾಗಿದ್ದರು.

ಇದಕ್ಕೂ ಮುನ್ನ ಸದನದಲ್ಲಿ ಮಸೂದೆಯನ್ನು ಸಲಹಾ ಸಮಿತಿಗೆ ನೀಡಬೇಕೆಂದು ವಿರೋಧ ಪಕ್ಷಗಳು ಆಗ್ರಹಿಸಿದ ಹಿನ್ನೆಲೆಯಲ್ಲಿ ಸಭಾಪತಿ ವೆಂಕಯ್ಯ ನಾಯ್ಡು ಅವರು ಇದನ್ನು ಮತಕ್ಕೆ ಹಾಕಿದ್ದರು. ಆದರೆ ಇದರ ಪರವಾಗಿ 84 ಹಾಗೂ ವಿರುದ್ಧವಾಗಿ 100 ಮತಗಳು ಬಂದ ಹಿನ್ನೆಲೆಯಲ್ಲಿ ಸಮಿತಿಗೆ ನೀಡುವ ಪ್ರಸ್ತಾಪವನ್ನು ತಿರಸ್ಕರಿಸಲಾಗಿತ್ತು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೊದಲಿಗೆ ಡಿಸೆಂಬರ್ 2017 ರಲ್ಲಿ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಿತ್ತು. ಆದರೆ ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಿದ್ದ 2 ಸಂದರ್ಭದಲ್ಲೂ ಕಾಯ್ದೆ ರಾಜ್ಯ ಸಭೆಯಲ್ಲಿ ಪಾಸ್ ಆಗಲು ವಿಫಲವಾಗಿತ್ತು. ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ಬಹುಮತದೊಂದಿಗೆ ಮತ್ತೆ ಅಧಿಕಾರ ಪಡೆದ ಎನ್‍ಡಿಎ ಸರ್ಕಾರ ಈ ಬಾರಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಪಾಸ್ ಮಾಡಲು ಯಶಸ್ವಿಯಾಗಿದೆ.

ಮಸೂದೆಯಲ್ಲಿ ಏನಿದೆ?:
2018ರ ಪರಿಷ್ಕೃತ ಮಸೂದೆ ಪ್ರಕಾರ ತ್ರಿವಳಿ ತಲಾಖ್ ಕಾನೂನು ಬಾಹಿರ ಮತ್ತು ಜಾಮೀನು ರಹಿತ ಕ್ರಿಮಿನಲ್ ಅಪರಾಧವಾಗಲಿದೆ. ತಲಾಖ್ ನೀಡುವ ಮುಸ್ಲಿಂ ಪುರುಷರಿಗೆ ಮೂರು ವರ್ಷ ಜೈಲು ಶಿಕ್ಷೆಯ ಪ್ರಸ್ತಾವ ಈ ಮಸೂದೆಯಲ್ಲಿದೆ.

Share This Article
Leave a Comment

Leave a Reply

Your email address will not be published. Required fields are marked *