ದಾವಣಗೆರೆ: ಮನೆಯ ಮಗಳು ಚೊಚ್ಚಲ ಗರ್ಭಿಣಿಯಾದರೆ ಮನೆಯ ಮಂದಿಯಲ್ಲಿ ಎಲ್ಲಿಲ್ಲದ ಸಂಭ್ರಮ ಸಡಗರ ಕಂಡು ಬರುತ್ತದೆ. ಅದೇ ರೀತಿಯಲ್ಲಿ ಇಲ್ಲಿ ವ್ಯಕ್ತಿಯೊಬ್ಬರು ತನ್ನ ತುಂಬು ಗರ್ಭಿಣಿಯ ಹಸುವಿನ ಸೀಮಂತ ಮಾಡಿ ಸಂಭ್ರಮ ಆಚರಣೆ ಮಾಡಿದ್ದಾರೆ.
ದಾವಣಗೆರೆ ತಾಲೂಕಿನ ಕಕ್ಕರಗೊಳ ಗ್ರಾಮದಲ್ಲಿ ಯುವರಾಜ್ ಎಂಬವರು ಮನೆಯಲ್ಲಿ ಒಂದು ಆಕಳು(ಹಸು) ಚೊಚ್ಚಲ ಬಾರಿ ಬಸಿರಿ ಆಗಿದೆ. ಆ ವ್ಯಕ್ತಿ ತನ್ನ ಅಕ್ಕ ಅಥವಾ ತಂಗಿ ಎಂದು ಭಾವಿಸಿ ಗರ್ಭಿಣಿ ಹಸುವಿಗೆ ಸೀಮಂತ ಮಾಡಿದ್ದಾರೆ.
ಯುವರಾಜ್ ದೂರದ ಸಂಬಂಧಿಕರು ಮತ್ತು ಒಡಹುಟ್ಟಿದವರನ್ನು ಕರೆಸಿ, ಮನೆಯಲ್ಲಿ ಹಸುವಿನ ಕೊರಳಿಗೆ ಹೂವಿನಿಂದ ಅಲಂಕರಿಸಿ ಮತ್ತು ಹೊಸ ಸೀರೆಯಿಂದ ಸಿಂಗಾರ ಮಾಡಿದ್ದಾರೆ. ಅಲ್ಲದೆ ಐದು ಬಗೆಯ ಸಿಹಿ ತಿಂಡಿ, ಐದು ಬಗೆಯ ಹಣ್ಣು- ಹಂಪಲುಗಳು, ಐದು ಬಗ್ಗೆಯ ಆರತಿ, ಊರಿನ ಐದು ಮುತ್ತೈದೆಯರನ್ನು ಕರಸಿ ಶಾಸ್ತ್ರೋಕ್ತವಾಗಿ ಸೀಮಂತ ಮಾಡಿದ್ದಾರೆ.
ನಾವು ನಮ್ಮ ಜಾನವಾರುಗಳಿಂದಾಗಿ ಆರ್ಥಿಕಾವಾಗಿ ಬೆಳವಣಿಗೆ ಆಗಿದ್ದೇವೆ. ನಮ್ಮ ಮನೆಯಲ್ಲಿ ಯಾವುದೇ ಪ್ರಾಣಿಗಳು ಚೊಚ್ಚಲು ಬಸರಿ ಆದರೆ ಇದೇ ರೀತಿಯಲ್ಲಿ ಆಚರಣೆ ಮಾಡುತ್ತೇವೆ. ಅಲ್ಲದೆ ಇಡೀ ಊರಿನ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಈ ಕಾರ್ಯಕ್ರಮಕ್ಕೆ ಬಂದವರಿಗೆ ವಿವಿಧ ರೀತಿಯ ಅಡುಗೆ ಮಾಡಿ ಊಟೋಪಚಾರ ಮಾಡುತ್ತೇವೆ. ಈ ರೀತಿ ಮಾಡುವುದರಿಂದ ನಮ್ಮ ಮನೆಯಲ್ಲಿ ಹೈನುಗಾರಿಕೆ ಹೆಚ್ಚುತ್ತದೆ ಹಾಗೂ ಆರ್ಥಿಕವಾಗಿ ಬೆಳೆವಣಿಗೆ ಆಗುತ್ತವೆ ಎಂದು ಯುವರಾಜ್ ಹೇಳಿದ್ದಾರೆ.
ಮನೆಯ ಹೆಣ್ಣು ಮಕ್ಕಳಿಗೆ ಹೇಗೆ ನಾವು ಸೀಮಂತ ಮಾಡುತ್ತೇವೆ ಅದೇ ರೀತಿಯಲ್ಲಿ ನಮ್ಮ ಹಸುವಿಗೆ ಸೀಮಂತ ಮಾಡಿಸಿದ್ದೇವೆ. ನಮ್ಮ ಅಣ್ಣ ನಮಗೆ ಫೋನ್ ಮಾಡಿ ಎಲ್ಲರೂ ಊರಿಗೆ ಬನ್ನಿ ನಮ್ಮ ಮನೆಯಲ್ಲಿ ಸೀಮಂತ ಕಾರ್ಯಕ್ರಮ ಇದೆ ಎಂದು ಹೇಳಿದ್ದಾರೆ. ಆದರೆ ನಾವು ಬಂದು ನೋಡಿದರೆ ನಮಗೆ ಆಶ್ಚರ್ಯವಾಗಿತ್ತು. ನಾವು ಚೊಚ್ಚಲು ಬಸಿರಿ ಇದ್ದಾಗ ಹೇಗೆ ಕಾರ್ಯಕ್ರಮ ಮಾಡಿದ್ದಾರೋ, ಅದೇ ರೀತಿ ಈ ಹಸುವಿಗೆ ನಮ್ಮಣ್ಣ ಸೀಮಂತ ಕಾರ್ಯಕ್ರಮ ಮಾಡಿದ್ದಾರೆ. ನಾವು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಪಟ್ಟಿದ್ದೇವೆ ಎಂದು ಯುವರಾಜ್ ಸಹೋದರಿ ತಿಳಿಸಿದ್ದಾರೆ.
ಕಾಮಧೇನು ಕಲ್ಪವೃಕ್ಷ ಅನ್ನುವ ಮಾತು ಇದೆ. ವರ್ಷ ಇಡೀ ದಿನ ಹಾಲು ಹಿಂಡಿ ಹಣ ಮಾಡಿಕೊಳ್ಳವ ಜನರೇ ಹೆಚ್ಚು. ಆದರೆ ಈ ರೈತ ತಮ್ಮ ಹಸುವಿನ ಸೀಮಂತ ಮಾಡಿ, ಈ ಸಮಾಜಕ್ಕೆ ಮೂಕ ಪ್ರಾಣಿಗಳಿಗೆ ಭಾವನೆಗಳು ಇವೆ ಎಂದು ತೋರಿಸಿಕೊಟ್ಟಿದ್ದಾರೆ.