ನೀರ್ ದೋಸೆ ಬೆಡಗಿಯ ಕೈಯಲ್ಲಿ ಮೂಡಿದ ಟ್ಯಾಟೂ

Public TV
1 Min Read

ಬೆಂಗಳೂರು: ಚಂದನವನದ ಉಗ್ರಂ ಚೆಲುವೆ ಹರಿಪ್ರಿಯಾ ಸಿನಿಮಾಗಳ ಚಿತ್ರೀಕರಣದಿಂದ ಸಣ್ಣ ಬ್ರೇಕ್ ತೆಗೆದುಕೊಂಡು ಇಂಡೋನೆಷಿಯದ ಬಾಲಿಯಲ್ಲಿ ರಜಾ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಬಾಲಿಯಲ್ಲಿಯ ಸುಂದರ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಇಂದು ಬಾಲಿಯಲ್ಲಿ ಕೈ ಮೇಲೆ ಟ್ಯಾಟೂ ಹಾಕಿಕೊಳ್ಳುತ್ತಿರುವ ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಬಾಲಿಯಲ್ಲಿ ಎರಡನೇ ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದೇನೆ. ನಾನು ಹಾಕಿಸಿಕೊಳ್ಳುತ್ತಿರುವ ಟ್ಯಾಟೂ ಏನೆಂದು ಗೆಸ್ ಮಾಡಿ, ಕಮೆಂಟ್ ಮೂಲಕ ತಿಳಿಸಿ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಅಭಿಮಾನಿಗಳು ಸಹ ತಮಗೆ ತೋಚಿದ ಉತ್ತರಗಳನ್ನು ಕಮೆಂಟ್ ಮೂಲಕ ನೀಡುತ್ತಿದ್ದು, ಹರಿಪ್ರಿಯಾ ತಮ್ಮ ಕೈ ಮೇಲಿರುವ ಟ್ಯಾಟೂ ರಹಸ್ಯವನ್ನು ಬಿಟ್ಟುಕೊಟ್ಟಿಲ್ಲ.

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ಹರಿಪ್ರಿಯಾ ಅಭಿಮಾನಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುತ್ತಾರೆ. ಸಿನಿಮಾ ಹೊರತಾಗಿಯೂ ಖಾಸಗಿ ಜೀವನದ ಸುಂದರ ಕ್ಷಣಗಳನ್ನು ನೆಚ್ಚಿನ ಅಭಿಮಾನಿಗಳ ಜೊತೆ ಹಂಚಿಕೊಳ್ಳುವ ಮೂಲಕ ಬಹುಜನರ ಮೆಚ್ಚುಗೆಯ ನಟಿಯಾಗಿದ್ದಾರೆ. ಇತ್ತೀಚೆಗೆ ಬಾಟಲ್ ಕ್ಯಾಪ್ ಚಾಲೆಂಜ್ ನ್ನು ವಿಶೇಷ ರೀತಿಯಲ್ಲಿ ಸ್ವೀಕರಿಸಿದ್ದ ವಿಡಿಯೋ ವೈರಲ್ ಆಗಿತ್ತು.

ಕನ್ನಡದ ಬಹುನಿರೀಕ್ಷಿತ ಸಿನಿಮಾ ‘ಮುನಿರತ್ನ ಕುರುಕ್ಷೇತ್ರ’ ಸಿನಿಮಾದಲ್ಲಿ ನೃತ್ಯಗಾರ್ತಿ ಮಾಯೆ ಪಾತ್ರದಲ್ಲಿ ಹರಿಪ್ರಿಯಾ ನಟಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ಕ್ರೇಜಿಸ್ಟಾರ್ ರವಿಚಂದ್ರನ್, ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ, ಶಶಿಕುಮಾರ್, ನಿಖಿಲ್ ಕುಮಾರಸ್ವಾಮಿ, ಸ್ನೇಹ, ಮೇಘನಾ ರಾಜ್ ಸೇರಿದಂತೆ ದೊಡ್ಡ ತಾರಾಗಣವನ್ನೇ ಕುರುಕ್ಷೇತ್ರ ಹೊಂದಿದೆ. ಚಿತ್ರ ಆಗಸ್ಟ್ 9ರಂದು ಬಿಡುಗಡೆಯಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *