ಬಿಜೆಪಿಗೆ ಬಾಹ್ಯ ಬೆಂಬಲವಿಲ್ಲ, ಜನಸೇವೆಯ ಮೂಲಕ ಪಕ್ಷವನ್ನು ಕಟ್ಟೋಣ: ಎಚ್‍ಡಿಕೆ

Public TV
1 Min Read

ಬೆಂಗಳೂರು: ಬಿಜೆಪಿಗೆ ಬಾಹ್ಯ ಬೆಂಬಲ ವಿಚಾರವನ್ನು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಳ್ಳಿಹಾಕಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಬಿಜೆಪಿ ಜೊತೆಗೆ ಸಂಬಂಧ ಬೆಸೆಯುವ ಆಧಾರ ರಹಿತ ಸುದ್ದಿಗಳನ್ನು ಗಮನಿಸಿದ್ದೇನೆ. ಸತ್ಯಕ್ಕೆ ದೂರವಾದ ಈ ರೀತಿಯ ಊಹಾಪೋಹಗಳಿಗೆ ನಮ್ಮ ಶಾಸಕರು ಹಾಗೂ ಕಾರ್ಯಕರ್ತರು ಕಿವಿಗೊಡಬೇಕಾಗಿಲ್ಲ. ಜನಸೇವೆಯ ಮೂಲಕ ಪಕ್ಷವನ್ನು ಕಟ್ಟೋಣ. ನಮ್ಮ ಜನಪರ ಹೋರಾಟ ನಿರಂತರ ಎಂದು ಕರೆ ಕೊಟ್ಟಿದ್ದಾರೆ.

ಇದಕ್ಕೂ ಮೊದಲು ಪ್ರತಿಕ್ರಿಯೆ ನೀಡಿದ್ದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು, ನಾವು ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವಾಗಿ ಕೆಲಸ ಮಾಡುತ್ತೇವೆ. ಜೆಡಿಎಸ್‍ನರು ಬಿಜೆಪಿಗೆ ಬೆಂಬಲ ನೀಡುವ ವರದಿ ಸುಳ್ಳು. ಏನೇ ಮಾಡಿದರು ಜೆಡಿಎಸ್ ಪಕ್ಷವನ್ನು ನಾಶ ಪಡಿಸಲು ಆಗಲ್ಲ. ಆದರೆ ಸರ್ಕಾರದ ಎಲ್ಲಾ ಕೆಲಸಗಳನ್ನು ನಾವು ವಿರೋಧಿಸುವುದಿಲ್ಲ. ವಿಷಯಾಧರಿತವಾಗಿ ಕೆಲಸ ಮಾಡುತ್ತೇವೆ. ಸರ್ಕಾರ ಹೋದರು ಪರವಾಗಿಲ್ಲ ಪಕ್ಷ ಸಂಘಟನೆ ಮಾಡಿ ಅಂತ ಕುಮಾರಸ್ವಾಮಿ ಅವರಿಗೆ ತಿಳಿಸಿದ್ದೆ ಎಂದು ಹೇಳಿದ್ದರು.

ಬಿಜೆಪಿ ಬೆಂಬಲ ನೀಡುವ ಬಗ್ಗೆ ಮಾತನಾಡಿದ್ದ ಅವರು, ನಾವು 34 ಶಾಸಕರಿದ್ದು, ಜಿಟಿ ದೇವೇಗೌಡರ ಹೇಳಿಕೆಯನ್ನ ನಾನು ಅಲ್ಲಗೆಳೆಯುವುದಿಲ್ಲ. ಸರ್ಕಾರ ಕೇವಲ 14 ತಿಂಗಳಿಗೆ ಪತನವಾದ ಹಿನ್ನೆಲೆಯಲ್ಲಿ ಮನೆಗೆ ಹೋಗಬೇಕು ಎಂಬ ನೋವಿನಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೇ ಅಭಿಪ್ರಾಯ ಕಾಂಗ್ರೆಸ್ ಶಾಸಕರಲ್ಲೂ ಇದೆ. ಇದನ್ನೇ ಜಿಟಿಡಿ ಹೇಳಿದ್ದಾರೆ ಅಷ್ಟೇ. ಆದರೆ ಅದನ್ನೇ ದೊಡ್ಡ ಚರ್ಚೆ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದ್ದರು.

ಇತ್ತ ಬಿಜೆಪಿ ನಾಯಕರು ಮಾತ್ರ ಜೆಡಿಎಸ್ ಬೆಂಬಲ ಸೂಚಿಸಲಿದ್ದಾರೆ ಎಂದು ಹೇಳುತ್ತಿದ್ದಾರೆ. ಈ ಕುರಿತು ಶನಿವಾರ ಸಂಜೆ ಮಾತನಾಡಿದ್ದ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಅವರು, ಜೆಡಿಎಸ್ ಶಾಸಕರು ಕಾಂಗ್ರೆಸ್ ಸಹವಾಸ ಮಾಡಿ ಹಾಳಾಗಿದ್ದಾರೆ. ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ಕಡಿತಗೊಳಿಸಬೇಕು ಅಂತ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ. ಹೀಗಾಗಿ ಸದನದಲ್ಲಿ ಬಿಜೆಪಿಗೆ ಬಾಹ್ಯ ಬೆಂಬಲ ನೀಡುತ್ತೇವೆ ಎಂದು ಜೆಡಿಎಸ್ ಶಾಸಕರೊಬ್ಬರು ನನಗೆ ಫೋನ್ ಮಾಡಿ ತಿಳಿಸಿದ್ದಾರೆ. ಇಬ್ಬರು ಜೆಡಿಎಸ್ ಶಾಸಕರು ಬಾಹ್ಯ ಬೆಂಬಲ ಸೂಚಿಸುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಬಾಂಬ್ ಸಿಡಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *