ಕೊಡಗಿನಲ್ಲಿ ರೆಡ್ ಅಲರ್ಟ್ ವಾಪಸ್ – ಹೆದ್ದಾರಿಯಲ್ಲಿ ರಿಟೈನಿಂಗ್ ವಾಲ್ ನಿರ್ಮಾಣಕ್ಕೆ ನಿಧಿ ಬಿಡುಗಡೆ

Public TV
2 Min Read

ಮಡಿಕೇರಿ: ಕೊಡಗಿನಲ್ಲಿ ಮಳೆಯ ತೀವ್ರತೆ ಸ್ವಲ್ಪ ಇಳಿಮುಖವಾಗಿದೆ. ಮಡಿಕೇರಿಯಲ್ಲಿ ಆಗಾಗ ಬಿಡುವು ಪಡೆದುಕೊಂಡು ಸಾಧಾರಣ ಮಳೆ ಸುರಿಯುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಹಿಂತೆಗೆದುಕೊಳ್ಳಲಾಗಿದೆ.

ಕೊಡಗಿನಲ್ಲಿ ಜನವರಿಯಿಂದ ಇಲ್ಲಿಯವರೆಗೆ 877.99 ಮಿ.ಮೀ. ಮಳೆ ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೆ.35ರಷ್ಟು ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದೆ. ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ರೆಡ್, ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಇದುವರೆಗೂ ಎಲ್ಲೂ ಏನೂ ಸಮಸ್ಯೆ ಆಗಿಲ್ಲ.

ನಿಧಿ ಬಿಡುಗಡೆ: ಮಳೆಗಾಲದಲ್ಲಿ ಸಂಪಾಜೆ ಘಾಟಿ ರಸ್ತೆ ಬಿರುಕು ಬಿಡುತ್ತಿರುವ ಹಿನ್ನೆಲೆಯಲ್ಲಿ ಶಾಶ್ವತ ಪರಿಹಾರಕ್ಕಾಗಿ ಸಂಸದ ಪ್ರತಾಪ್ ಸಿಂಹ ಅವರು ಬುಧವಾರ ಹೆದ್ದಾರಿ ಖಾತೆಯ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಈ ಸಂಬಂಧ ಟ್ವೀಟ್ ಮಾಡಿರುವ ಸಂಸದರು, ಭಾರೀ ಮಳೆಯಿಂದಾಗಿ ಮಡಿಕೇರಿ-ಸಂಪಾಜೆ ಭಾಗದ ರಾಷ್ಟ್ರೀಯ ಹೆದ್ದಾರಿ ಮತ್ತೆ ಬಿರುಕು ಬಿಟ್ಟಿದೆ. ಅದನ್ನು ಸರಪಡಿಸಲು ಹಾಗೂ ರೀಟೈನಿಂಗ್ ವಾಲ್ ನಿರ್ಮಾಣಕ್ಕೆ ಮನವಿ ಮಾಡಿದಾಗ, ಕೂಡಲೇ ನಿಧಿ ಬಿಡುಗಡೆಗೆ ಸಚಿವರಾದ ನಿತಿನ್ ಗಡ್ಕರಿಯವರು ಆದೇಶ ನೀಡಿದರು ಎಂದು ಹೇಳಿದ್ದಾರೆ.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಪ್ರತಿಕ್ರಿಯಿಸಿ, ಎರಡು ತಿಂಗಳಿಂದ ಎಲ್ಲಾ ರೀತಿಯ ಪೂರ್ವ ತಯಾರಿ ಮಾಡಿಕೊಂಡಿರುವುದರಿಂದ ತುರ್ತು ಸ್ಪಂದನೆ ಸಾಧ್ಯವಾಗಿದೆ. ಮಂಗಳೂರು ಮತ್ತು ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಣ್ಣಪುಟ್ಟ ಮಳೆಗೂ ಗುಡ್ಡ ಕುಸಿಯುತ್ತಿದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಧಿಕಾರದ ಅಧಿಕಾರಿಗಳು, ಎಂಜಿನಿಯರ್‌ಗಳು ಸೇರಿದಂತೆ 4 ಜೆಸಿಬಿ, ಟಿಪ್ಪರ್ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದ್ದಾರೆ.

ಜಿಲ್ಲಾಡಳಿತ ಸುಮಾರು ಒಂದು ಲಕ್ಷ ಮರಳು ಮೂಟೆಗಳನ್ನ ರೆಡಿ ಮಾಡುತ್ತಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಡಿಲವಾದ ಮಣ್ಣು ಕುಸಿತವಾಗದಂತೆ ಕ್ರಮ ವಹಿಸಲು ಈ ಮರಳು ಮೂಟೆಗಳನ್ನ ಸಿದ್ಧಪಡಿಸಿಕೊಳ್ಳಲಾಗುತ್ತಿದೆ. ರಾಷ್ಟ್ರೀಯ ವಿಪತ್ತು ಪ್ರಾಧಿಕಾರದ ಅಧಿಕಾರಿಗಳು ಕೂಡ ಪ್ರಕೃತಿ ವಿಕೋಪವಾಗಿದ್ದ ಸ್ಥಳಗಳಿಗೆ ಭೇಟಿ ನೀಡಿ ಅವಲೋಕನ ಮಾಡಿ ಡಿಸಿಗೆ ವರದಿ ನೀಡುತ್ತಿದ್ದಾರೆ ಎಂದು ಎನ್‍ಡಿಆರ್‍ಎಫ್ ಆಧಿಕಾರಿ ಉದಯ್ ಕುಮಾರ್ ದೀಕ್ಷಿತ್ ತಿಳಿಸಿದ್ದಾರೆ.

ಈ ತನಕ ಜಿಲ್ಲೆಯ 14 ಕಡೆಗಳಲ್ಲಿ ಸಣ್ಣ ಮಟ್ಟದ ಬರೆ ಕುಸಿತ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ 275 ಮತ್ತು ಗ್ರಾಮೀಣ ರಸ್ತೆಗಳಲ್ಲೂ ಕುಸಿತ ಕಂಡುಬಂದಿದೆ. ಎಲ್ಲವನ್ನೂ ಸಮರೋಪಾದಿಯಲ್ಲಿ ಟಾಸ್ಕ್ ಫೋರ್ಸ್ ನಿಭಾಯಿಸಿದೆ. ಮೇ ತಿಂಗಳಿಂದಲೇ ಕೊಡಗಿನಲ್ಲಿ ಟಾಸ್ಕ್ ಫೋರ್ಸ್ ತಂಡ ಬೀಡು ಬಿಟ್ಟಿದ್ದು, ಅಪಾಯಕಾರಿ ಎಂದು ಗುರುತಿಸಲಾದ 13 ಸ್ಥಳಗಳಿಗೆ ಹೋಗಿ ಬಂದಿದೆ. ಸಣ್ಣ ಪ್ರಮಾಣದಲ್ಲಿ ಕುಸಿದ ಸ್ಥಳಕ್ಕೂ ಎನ್‍ಡಿಆರ್‍ಎಫ್ ಭೇಟಿ ಕೊಟ್ಟಿದೆ. ಕಂಟ್ರೋಲ್ ರೂಮ್‍ನಲ್ಲಿ ದೂರುಗಳನ್ನು ಸ್ವೀಕರಿಸಿ ಕೂಡಲೇ ಸಮಸ್ಯೆ ಪರಿಹರಿಸಲಾಗುತ್ತಿದೆ. ಪ್ರವಾಸಿಗರ ಹಿತದೃಷ್ಟಿಯಿಂದ ಪ್ರವಾಸಿತಾಣ ಮಾಂದಲ್ ಪಟ್ಟಿಯನ್ನು ಆಗಸ್ಟ್ 31 ರ ವರೆಗೆ ಬಂದ್ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *