ಮತ್ತೊಮ್ಮೆ ಸಾಬೀತು – ಚಿಂಚೋಳಿಯಲ್ಲಿ ಗೆದ್ದವರಿಗೆ ವಿಧಾನಸಭೆಯ ಗದ್ದುಗೆ

Public TV
3 Min Read

ಕಲಬುರಗಿ: ಚಿಂಚೋಳಿ ವಿಧಾನಸಭಾ ಕ್ಷೇತ್ರದ ಮಹಿಮೆಯೋ ಅಥವಾ ಕಾಕತಾಳೀಯವೋ ಗೊತ್ತಿಲ್ಲ. ಈ ಕ್ಷೇತ್ರದಿಂದ ರಾಜ್ಯ ವಿಧಾನಸಭೆಗೆ ಯಾವ ಪಕ್ಷ ಆಯ್ಕೆ ಆಗುತ್ತೋ ಅದೇ ಪಕ್ಷ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯುತ್ತಿರುವುದು ವಿಶೇಷ.

ಚಿಂಚೋಳಿ ವಿಧಾನಸಭಾ ಕ್ಷೇತ್ರ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೇ ಅತ್ಯಂತ ವಿಶಿಷ್ಟ ಮತ್ತು ವಿಶೇಷ. ಚಿಂಚೋಳಿ ವಿಧಾನಸಭಾ ಕ್ಷೇತ್ರದ ಇತಿಹಾಸದ ಪುಟಗಳನ್ನು ಬಿಚ್ಚಿದ್ದಾಗ ಚಿಂಚೋಳಿಯ ಮಹಿಮೆ ಏನು ಎನ್ನುವುದು ಅರ್ಥವಾಗುತ್ತದೆ. ಯಾಕೆಂದರೆ 1957 ರಿಂದ ಇಲ್ಲಿಯವರೆಗೆ ಚಿಂಚೋಳಿಯಿಂದ ರಾಜ್ಯ ವಿಧಾನಸಭೆಗೆ ಯಾವ ಪಕ್ಷ ಆಯ್ಕೆಯಾಗಿದೆಯೋ ಅದೇ ಪಕ್ಷ ರಾಜ್ಯದಲ್ಲಿ ಆಡಳಿತ ನಡೆಸಿರುವುದು ನೂರಕ್ಕೆ ನೂರರಷ್ಟು ಸತ್ಯವಾಗಿದೆ.

1957 ರಿಂದ 2019ರವರೆಗೆ ನಡೆದ 15 ವಿಧಾನಸಭೆ ಚುನಾವಣೆಯ ಫಲಿತಾಂಶ ಅವಲೋಕಿಸಿದಾಗ ಇತಂಹದೊಂದು ಅಚ್ಚರಿಯ ಸಂಗತಿ ರಾಜ್ಯದ ಜನರ ಮುಂದೆ ತೆರೆದುಕೊಂಡಿದೆ. ಯಾಕೆಂದರೆ 1957 ರಿಂದ 2018ರವರೆಗೆ ಚಿಂಚೋಳಿ ಕ್ಷೇತ್ರದಲ್ಲಿ ಗೆದ್ದಂತಹ ಪಕ್ಷವೇ ರಾಜ್ಯದಲ್ಲಿ ಆಡಳಿತ ನಡೆಸಿದೆ. 2019ರ ಮೇ ನಲ್ಲಿ ನಡೆದ ವಿಧಾನಸಭೆಯ ಉಪಚುನಾವಣೆಯ ಫಲಿತಾಂಶ ಪ್ರಕಟವಾದಗಲೇ ಈ ಕ್ಷೇತ್ರದಲ್ಲಿ ದೋಸ್ತಿ ಸರ್ಕಾರ ಪತನವಾಗಲಿದೆ ಎನ್ನುವ ಚರ್ಚೆ ಆರಂಭವಾಗಿತ್ತು. ಅದರಂತೆ ದೋಸ್ತಿ ಸರ್ಕಾರ ಪತನವಾಗಿ ಇದೀಗ ಬಿಜೆಪಿ ಸರ್ಕಾರ ಆಡಳಿಕ ಚಿಕ್ಕಾಣಿ ಹಿಡಿಯಲು ಸಜ್ಜಾಗಿದೆ. ಈ ಮೂಲಕ ಮತ್ತೊಮ್ಮೆ ಕ್ಷೇತ್ರದ ಮಹಿಮೆ ಇತಿಹಾಸದ ಪುಟ ಸೇರುವಂತೆ ಮಾಡಿದೆ.

ಯಾವ ವರ್ಷ ಗೆದ್ದವರು ಯಾರು?
1. 1957 – ಕಾಂಗ್ರೆಸ್‍ನ ವೀರೆಂದ್ರ ಪಾಟೀಲ್ ಗೆದ್ದಿದ್ದರು. ಆಗ ರಾಜ್ಯದಲ್ಲಿ ಬಿಡಿ ಜತ್ತಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸಿತ್ತು.

2. 1962- ಕಾಂಗ್ರೆಸ್‍ನ ವೀರೆಂದ್ರ ಪಾಟೀಲ್ ಜಯಗಳಿಸಿದ್ದರು. ಈ ವೇಳೆ ಎಸ್.ಆರ್ ಕಂಠಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಇತ್ತು.

3. 1967- ಮತ್ತೆ ಕಾಂಗ್ರೆಸ್‍ನ ವೀರೆಂದ್ರ ಪಾಟೀಲ್ ಗೆದ್ದಾಗ ಎಸ್ ನಿಜಲಿಂಗಪ್ಪ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು.

4. 1972 ಮತ್ತು 1977ರಲ್ಲಿ ಕಾಂಗ್ರೆಸ್‍ನ ದೇವೇಂದ್ರಪ್ಪ ಘಾಳಪ್ ಗೆದ್ದು, ದೇವರಾಜು ಅರಸು ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸಿತ್ತು.

5. 1983 – ದೇವೇಂದ್ರಪ್ಪ ಘಾಳಪ್ಪ ಗೆದ್ದಿದ್ದು, ಆಗ ಆರ್ ಗುಂಡುರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿತ್ತು.

6. 1989 – ವೀರೇಂದ್ರ ಪಾಟೀಲ್ ಮತ್ತೆ ಜಯಗಳಿಸಿದ್ದರು. ಈ ವೇಳೆ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತ್ತು.

7. 1994 – ಜನತಾದಳದಿಂದ ಸ್ಪರ್ಧಿಸಿದ್ದ ವೈಜನಾಥ್ ಪಾಟೀಲ್ ಗೆದ್ದಿದ್ದರು. ಈ ವೇಳೆ ದೇವೇಗೌಡರ ನೇತೃತ್ವದ ಜನತಾದಳ ಸರ್ಕಾರ ಇತ್ತು.

8. 1999 – ಕಾಂಗ್ರೆಸ್‍ನ ಕೈಲಾಸ್‍ನಾಥ್ ಪಾಟೀಲ್ ಜಯಗಳಿಸಿ, ಎಸ್ ಎಂ ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸಿತ್ತು.

9. 2004 – ಜೆಡಿಎಸ್‍ನಿಂದ ವೈಜನಾಥ್ ಪಾಟೀಲ್ ಗೆದ್ದಿದ್ದರು. ಧರ್ಮಸಿಂಗ್ ನೇತೃತ್ವದ ಮೈತ್ರಿ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದಿತ್ತು.

10. 2008- ಬಿಜೆಪಿ ಸುನೀಲ್ ವಲ್ಯಾಪುರೆ ಆಯ್ಕೆಯಾಗಿ, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬಂದಿತ್ತು.

11. 2013 – ಕಾಂಗ್ರೆಸ್ ಉಮೇಶ್ ಜಾಧವ್ ಗೆದ್ದು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರ ಪಡೆದಿತ್ತು.

12. 2018 – ಉಮೇಶ್ ಜಾಧವ್ ಎರಡನೇ ಬಾರಿ ಜಯಗಳಿಸಿದ್ದು, ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಆಡಳಿತಕ್ಕೆ ಬಂತು.

13. 2019 – ಉಪಚುನಾವಣೆಯಲ್ಲಿ ಉಮೇಶ್ ಜಾಧವ್ ಪುತ್ರ ಬಿಜೆಪಿ ಅವಿನಾಶ್ ಜಾಧವ್ ಗೆಲುವು ಸಾಧಿಸಿದ್ದರು. ಈಗ ಕರ್ನಾಟಕದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಏರಲು ಸಿದ್ಧತೆ ನಡೆಸುತ್ತಿದೆ.

ಇದೀಗ ಅವಿನಾಶ್ ಜಾಧವ್ ಆಯ್ಕೆಯ ಬಳಿಕ ಬಿಜೆಪಿ ಅಧಿಕಾರಕ್ಕೆ ಬರುತ್ತಿರುವುದನ್ನು ನೋಡಿದರೆ, ಚಿಂಚೋಳಿಯ ಇತಿಹಾಸ ಮತ್ತೆ ಮತ್ತೆ ಹೌದು ಎನ್ನುವಂತಾಗಿದೆ. ಆದರೆ ಇಷ್ಟೆಲ್ಲಾ ಇತಿಹಾಸ ಹೊಂದಿರುವ ಚಿಂಚೋಳಿ ಕ್ಷೇತ್ರ ರಾಜ್ಯದ 224 ಕ್ಷೇತ್ರಗಳಲ್ಲೆ ಅತ್ಯಂತ ಹಿಂದುಳಿದಂತಹ ಕ್ಷೇತ್ರವಾಗಿರುವುದು ದುರಾದೃಷ್ಟಕರ ಸಂಗತಿಯಾಗಿದೆ.

ಕಲಬುರಗಿ ಜಿಲ್ಲೆಯಿಂದ ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿದ್ದರೂ ಕೂಡ ಚಿಂಚೋಳಿ ಮಾತ್ರ ಇದುವರೆಗೂ ಅಭಿವೃದ್ಧಿ ಆಗಿಲ್ಲ. ಅಷ್ಟೇ ಅಲ್ಲದೆ ಸ್ವತಃ ಚಿಂಚೋಳಿ ವಿಧಾನಸಭೆಯಿಂದ ಆಯ್ಕೆಯಾದತಂಹ ವೀರೇಂದ್ರ ಪಾಟೀಲ್ ಮುಖ್ಯಮಂತ್ರಿ ಆದಂತಹ ಸಂದರ್ಭದಲ್ಲೂ ಯಾವುದೇ ಅಭಿವೃದ್ಧಿ ಆಗಿಲ್ಲ. ಇನ್ನು ಮುಂದೆ ಬರುವಂತಹ ಸರ್ಕಾರವಾದರೂ ಚಿಂಚೋಳಿಯ ಅಭಿವೃದ್ಧಿಯತ್ತ ಗಮನ ಹರಿಸಲಿ ಎಂದು ಜನ ಕೇಳಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *