ಅತ್ಯಾಚಾರಿ ಆರೋಪಿಯನ್ನು ಸೌದಿಯಿಂದ ಎಳೆತಂದ ಕೇರಳದ ಲೇಡಿ ಐಪಿಎಸ್

Public TV
2 Min Read

ತಿರುವನಂತಪುರಂ: ಕೇರಳದ ಲೇಡಿ ಐಪಿಎಸ್ ಅಧಿಕಾರಿಯೊಬ್ಬರು ಅತ್ಯಾಚಾರ ಆರೋಪಿಯನ್ನು ಸೌದಿ ಅರೇಬಿಯಾದಿಂದ ಭಾರತಕ್ಕೆ ಎಳೆ ತಂದಿದ್ದಾರೆ.

ಸುನೀಲ್ ಕುಮಾರ್ ಅತ್ಯಾಚಾರವೆಸಗಿದ ಆರೋಪಿ. ಸುನೀಲ್ ಕುಮಾರ್ ಮೂಲತಃ ಕೊಲ್ಲಂ ನಿವಾಸಿಯಾಗಿದ್ದು, ಸೌದಿಯಲ್ಲಿ ಕೆಲಸ ಮಾಡುತ್ತಿದ್ದನು. ಸುನೀಲ್ 2017ರಲ್ಲಿ ರಜೆಗೆಂದು ಕೊಲ್ಲಂಗೆ ಬಂದಿದ್ದನು. ಈ ವೇಳೆ ಆತ ತನ್ನ ಸ್ನೇಹಿತನ 13 ವರ್ಷದ ಮಗಳ ಮೇಲೆ 3 ತಿಂಗಳ ಕಾಲ ನಿರಂತರವಾಗಿ ಅತ್ಯಾಚಾರ ಎಸಗಿದ್ದ.

ಅಪ್ರಾಪ್ತೆ ಈ ವಿಷಯವನ್ನು ತನ್ನ ಪೋಷಕರಿಗೆ ತಿಳಿಸಿದ್ದಳು. ಆಗ ಪೋಷಕರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಲುಕೌಟ್ ನೋಟಿಸ್ ಜಾರಿ ಮಾಡಿದ್ದರು. ಅಷ್ಟರಲ್ಲಿ ಆರೋಪಿ ಸುನೀಲ್ ಸೌದಿ ಅರೇಬಿಯಾಗೆ ಪರಾರಿ ಆಗಿದ್ದನು. ಇದಾದ ಬಳಿಕ ಪೊಲೀಸರು ಈ ಪ್ರಕರಣದ ಬಗ್ಗೆ ಹೆಚ್ಚು ಗಮನ ಕೊಡಲಿಲ್ಲ. ಬಳಿಕ ಅಪ್ರಾಪ್ತೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಮೊದಲು ಆರೋಪಿಯನ್ನು ಬಾಲಕಿಯ ಕುಟುಂಬಕ್ಕೆ ಪರಿಚಯಿಸಿದ್ದ ವ್ಯಕ್ತಿ ಕೂಡ ಆತ್ಮಹತ್ಯೆಗೆ ಶರಣಾಗಿದ್ದನು.

2019 ಜೂನ್ ತಿಂಗಳಿನಲ್ಲಿ ಮೇರಿನ್ ಜೋಸೆಫ್ ಕೊಲ್ಲಂನ ಪೊಲೀಸ್ ಆಯುಕ್ತರಾಗಿ ನೇಮಕಗೊಂಡರು. ಅಧಿಕಾರ ಸ್ವೀಕರಿಸುತ್ತಿದ್ದಂತೆ ಮೇರಿನ್ ಅವರು ಮಕ್ಕಳು ಮತ್ತು ಮಹಿಳೆಯರಿಗೆ ಸಂಬಂಧಿಸಿದ್ದ ಬಾಕಿ ಉಳಿದಿದ್ದ ಫೈಲ್ ತರಿಸಿಕೊಂಡಿದ್ದರು. ಈ ಬಗ್ಗೆ ಮಾತನಾಡಿದ ಅವರು, ನಾನು ಈ ಪ್ರಕರಣವನ್ನು ನೋಡಿದೆ. ಆಗ ಆರೋಪಿ ಅತ್ಯಾಚಾರವೆಸಗಿ 2 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದಾನೆ ಎಂಬುದು ತಿಳಿಯಿತು. ಬಳಿಕ ಈ ಪ್ರಕರಣ ತನಿಖೆ ನಿಂತು ಹೋಗಿತ್ತು ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದರು ಎಂದರು.

2017ರಲ್ಲಿ ಆರೋಪಿ ಸುನೀಲ್‍ಗೆ ಇಂಟರ್ ಪೋಲ್ ನೋಟಿಸ್ ನೀಡಲಾಗಿತ್ತು. ಆದರೆ ಪ್ರಕರಣ ಮುಂದುವರಿಯಲಿಲ್ಲ. ಇಂಟರ್ ಪೋಲ್ ನೋಟಿಸ್ ನೀಡಿದ್ದರೂ ಅನೇಕ ಪ್ರಕರಣ ಮುಂದುವರೆಯಲ್ಲ. ಏಕೆಂದರೆ ಇದಕ್ಕೆ ಆ ದೇಶದಿಂದ ನಿರಂತರ ಸಹಕಾರ ಹಾಗೂ ಫಾಲೋ ಅಪ್ ಬೇಕಾಗುತ್ತದೆ. 2010ರಲ್ಲಿ ಪ್ರಧಾನಿಯಾಗಿದ್ದ ಮನ್‍ಮೋಹನ್ ಸಿಂಗ್ ಅವರು ಸೌದಿಯ ದೊರೆ ಅಬ್ದುಲ ಜೊತೆ ಭಾರತ- ಸೌದಿ ಹಸ್ತಾಂತರ ಒಪ್ಪಂದ ಸಹಿ ಮಾಡಿತ್ತು. ಆ ನಂತರ ಕೇರಳದ ವಾಂಟೆಡ್ ಕ್ರಿಮಿನಲ್‍ಗಳು ಸೌದಿಗೆ ಪರಾರಿಯಾಗಿದ್ದರು. ಆದರೆ ಆ ಆರೋಪಿಗಳ ಹಸ್ತಾಂತರ ಆಗಲಿಲ್ಲ. ಕೆಲವು ದಿನಗಳ ಹಿಂದೆ ಸುನೀಲ್‍ನನ್ನು ಕಸ್ಟಡಿಗೆ ತೆಗೆದುಕೊಂಡಿದ್ದೇವೆ ಎಂದು ಸೌದಿ ಪೊಲೀಸರು ತಿಳಿಸಿದ್ದರು. ಮರೀನ್ ಅವರು ಜೂನಿಯರ್ ಅಧಿಕಾರಿಯನ್ನು ಕಳುಹಿಸುವ ಬದಲು ಸ್ವತಃ ತಾವೇ ದುಬೈಗೆ ಹೋಗಿದ್ದರು.

ಆರೋಪಿಯನ್ನು ಕರೆತಂದ ಬಳಿಕ ಮಾತನಾಡಿದ ಮರೀನ್, ನಾವು ಮೊದಲ ಬಾರಿಗೆ ಇಂತಹ ಹಸ್ತಾಂತರವನ್ನು ಮಾಡುತ್ತಿದ್ದೇವೆ. ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಕಲಿಯಲು ನಾನು ಬಯಸಿದ್ದೆ. ಅಲ್ಲದೆ ಇದರ ಬಗ್ಗೆ ನನ್ನ ತಂಡದ ಜೊತೆ ಹಂಚಿಕೊಳ್ಳಬಹುದು ಎಂದು ಎನಿಸಿತ್ತು. ಇದಕ್ಕೆ ಸಾಕಷ್ಟು ಪೇಪರ್ ಕೆಲಸಗಳು ಇದ್ದವು. ಆರೋಪಿಯನ್ನು ಅಲ್ಲಿಂದ ಕರೆ ತರಲು ದಾಖಲೆ ಕೂಡ ಮಾಡಬೇಕಿತ್ತು. ಹಾಗಾಗಿ ನಾನು ಸೌದಿಗೆ ಹೋಗಲು ನಿರ್ಧರಿಸಿದೆ. ಮಹಿಳೆಯರು ಹಾಗೂ ಮಕ್ಕಳನ್ನು ಒಳಗೊಂಡಿರುವ ಪ್ರಕರಣದ ಬಗ್ಗೆ ಕೆಲಸ ಮಾಡಲು ನನಗೆ ಇಷ್ಟ. ಅಲ್ಲದೆ ಆರೋಪಿಯನ್ನು ಕರೆತಂದು ವಿಚಾರಣೆ ನಡೆಸಬೇಕು ಎಂದು ನಿರ್ಧರಿಸಿದೆ. ಸುನೀಲ್ ಕುಮಾರ್ ಕೇರಳದಲ್ಲಿ ನಡೆದ ಅಪರಾಧಕ್ಕಾಗಿ ಹಸ್ತಾಂತರಿಸಲ್ಪಟ್ಟ ಮೊದಲ ವ್ಯಕ್ತಿ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *