ಕೋಲಾರ/ತುಮಕೂರು: ರಾಜ್ಯ ರಾಜಕೀಯದ ಹೈಡ್ರಾಮಾ ಮುಗಿಯುತ್ತಿಲ್ಲ. ಪರಿಣಾಮ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಹಲವೆಡೆ ಜನರಿಗೆ ಕುಡಿಯುವ ನೀರು ಕೂಡ ಸರಿಯಾಗಿ ಪೂರೈಕೆಯಾಗುತ್ತಿಲ್ಲ.
ಪಕ್ಷೇತರ ಶಾಸಕ ನಾಗೇಶ್ ಕ್ಷೇತ್ರ ಮುಳಬಾಗಲಿನಲ್ಲಿ ಜನ ನೀರಿಲ್ಲದೇ ಸಿಡಿದು ನಿಂತಿದ್ದಾರೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಎಮ್ಮೆನತ್ತ ಗ್ರಾಮದ ಜನರು ಕಳೆದ ಹದಿನೈದು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆಯಿಂದ ಬೇಸತ್ತು ರಸ್ತೆ ತಡೆದು ಪ್ರತಿಭಟನೆ ಮಾಡಿದ್ದಾರೆ.
ಗ್ರಾಮದಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಿದ ಗ್ರಾಮಸ್ಥರು, ಎಮ್ಮೆನತ್ತ ಗ್ರಾಮ ಪಂಚಾಯ್ತಿಯ ಸದಸ್ಯರೆಲ್ಲ ತಮ್ಮ ವೈಯಕ್ತಿಕ ಕೆಲಸಗಳ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿಕೊಂಡಿದ್ದು, ಗ್ರಾಮಪಂಚಾಯ್ತಿಯಲ್ಲಿ ಜನರ ಸಮಸ್ಯೆ ಆಲಿಸುವವರಿಲ್ಲದಂತಾಗಿದೆ. ಕೂಡಲೇ ಸಂಬಂಧಪಟ್ಟವರು ಗ್ರಾಮದ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನ ನೀಡಿದ್ದಾರೆ.
ತುಮಕೂರಿನ ಹೊರ ವಲಯದ ಬೆಳಗುಂಬ ಪಂಚಾಯ್ತಿಯಲ್ಲಿ ಕಳೆದ ಎರಡು ತಿಂಗಳಿನಿಂದ ಕುಡಿಯುವ ನೀರಿಲ್ಲದೆ ರೋಸಿಹೋದ ಗ್ರಾಮಸ್ಥರು ಗ್ರಾಮ ಪಂಚಾಯ್ತಿಗೆ ಬೀಗ ಹಾಕಿ ಅಧಿಕಾರಿಗಳನ್ನ ಹೊರಗೆ ಹಾಕಿ ಪ್ರತಿಭಟಿಸಿದ ಘಟನೆ ನಡೆದಿದೆ. ಬೆಳಗುಂಬ, ಕುಂದೂರು ಸೇರಿದಂತೆ ಮೂರು-ನಾಲ್ಕು ಊರುಗಳಿಗೆ ನೀರು ಪೂರೈಕೆಯನ್ನು ನಿಲ್ಲಿಸಲಾಗಿತ್ತು. ಹೀಗಾಗಿ ಗ್ರಾಮಸ್ಥರೇ ಟ್ಯಾಂಕರ್ ಮೂಲಕ ನೀರು ತರಿಸಿಕೊಳ್ಳುತ್ತಿದ್ದರು.
ಗ್ರಾಮಪಂಚಾಯ್ತಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಇದರಿಂದ ರೋಸಿಹೋದ ಗ್ರಾಮಸ್ಥರು ಗ್ರಾಮ ಪಂಚಾಯ್ತಿ ಒಳಗೆ ನುಗ್ಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಜೊತೆಗೆ ಅಧಿಕಾರಿಗಳನ್ನು ಹೊರಗೆ ಹಾಕಿ ಗ್ರಾಮ ಪಂಚಾಯ್ತಿ ಕಚೇರಿಗೆ ಬೀಗ ಹಾಕಿ ಆಕ್ರೋಶ ಹೊರಹಾಕಿದ್ದಾರೆ.
ಇತ್ತ ಮಂಡ್ಯದಲ್ಲಿ ಸಾಲಬಾಧೆಯಿಂದ ರೈತರೊಬ್ಬರು ಆತ್ಮಹತ್ಯೆ ಮಾಡಿದ್ದಾರೆ. ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಹೋಬಳಿಯ ಮಾದಿಹಳ್ಳಿ ಗ್ರಾಮದ ರೈತ ರಾಮಕೃಷ್ಣ ಮನೆ ಪಕ್ಕದ ತೋಟದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಮಕೃಷ್ಣ 6 ಲಕ್ಷ ಸಾಲ ಮಾಡಿ 3 ಬೋರ್ ವೆಲ್ ಕೊರೆಸಿದ್ದರು. ಆದರೆ ನೀರು ಬಂದಿರಲಿಲ್ಲ. ಈ ಕಾರಣದಿಂದ ನೊಂದು ರಾಮಕೃಷ್ಣ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಅವರು ಕುಟುಂಬಸ್ಥರು ತಿಳಿಸಿದ್ದಾರೆ.