ಐಎಂಎ ವಂಚನೆ ಪ್ರಕರಣ: ಎಸ್‍ಐಟಿ ವಶಕ್ಕೆ ಶಾಸಕ ರೋಷನ್ ಬೇಗ್?

Public TV
1 Min Read

ಬೆಂಗಳೂರು: ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಾಜಿನಗರ ಶಾಸಕ ರೋಷನ್ ಬೇಗ್ ಅವರನ್ನು ಎಸ್‍ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಎಸ್‍ಐಟಿ ಅಧಿಕಾರಿಗಳು ರೋಷನ್ ಬೇಗ್ ಅವರನ್ನು ವಶಕ್ಕೆ ಪಡೆದಿದ್ದು, ವಿಮಾನ ನಿಲ್ದಾಣದಲ್ಲೇ ಹಿರಿಯ ಅಧಿಕಾರಿಗಳಿಂದ ಅವರ ವಿಚಾರಣೆ ನಡೆದಿದೆ ಎನ್ನಲಾಗಿದೆ. ಅಂದಹಾಗೇ ರೋಷನ್ ಬೇಗ್ ಮುಂಬೈಗೆ ತೆರಳಲು ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದರು ಎಂಬ ಮಾಹಿತಿ ಎಸ್‍ಐಟಿ ಅಧಿಕಾರಿಗಳಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಎಸ್‍ಐಟಿಯ ಅಧಿಕಾರಿ ಗಿರೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಸಮ್ಮಿಶ್ರ ಸರ್ಕಾರ ವಿಶ್ವಾಸ ಮತಯಾಚನೆ ಗುರುವಾರ ಫಿಕ್ಸ್ ಆಗಿರುವುದರಿಂದ ಕೊನೆ ಗಳಿಗೆಯಲ್ಲಿ ದೋಸ್ತಿ ನಾಯಕರು ಮನವೊಲಿಕೆಗೆ ಮುಂದಾಗಬಹುದು ಎಂಬ ಉದ್ದೇಶದಿಂದ ರೋಷನ್ ಬೇಗ್ ಮುಂಬೈ ತೆರಳುವ ನಿರ್ಧಾರ ಮಾಡಿದ್ದರು ಎನ್ನಲಾಗಿದೆ.

ಐಎಂಎ ವಂಚನೆ ಬಳಿಕ ಬಿಡುಗಡೆಯಾದ ಆಡಿಯೋದಲ್ಲಿ ಮನ್ಸೂರ್ ಖಾನ್, ರೋಷನ್ ಬೇಗ್ ಹೆಸರು ಪ್ರಸ್ತಾಪ ಆಗಿತ್ತು. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ರೋಷನ್ ಬೇಗ್‍ಗೆ ಎಸ್‍ಐಟಿ ನೊಟೀಸ್ ನೀಡಿತ್ತು. ಆದರೆ, ಜುಲೈ 11ರಂದು ರೋಷನ್ ಬೇಗ್ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಕಾರಣಕ್ಕೆ ಎಸ್‍ಐಟಿ ಮತ್ತೊಮ್ಮೆ ನೊಟೀಸ್ ಜಾರಿ ಮಾಡಿತ್ತು. ಇಂದು ರೋಷನ್ ಬೇಗ್ ವಿಚಾರಣೆ ಹಾಜರಾಗಬೇಕಿತ್ತು. ಆದರೆ ಸದನದ ಕಾರಣ ನೀಡಿ ವಿಚಾರಣೆಗೆ ಹಾಜರಾಗಿರಲಿಲ್ಲ. ಪರಿಣಾಮ ಜುಲೈ 19 ರಂದು ವಿಚಾರಣೆಗೆ ಹಾಜರಾಗಲು ಎಸ್‍ಐಟಿ ನೋಟಿಸ್ ನೀಡಿತ್ತು ಎಂಬ ಮಾಹಿತಿ ಲಭಿಸಿದೆ. ಆದರೆ ಅವರು ಬೆಂಗಳೂರು ಬಿಟ್ಟು ತೆರಳುವ ಮಾಹಿತಿ ಅನ್ವಯ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಹೈಡ್ರಾಮಾದ ನಡುವೆ ಅಮಾಯಕರಿಗೆ ಮೊಸ ಮಾಡಿದ ಬಹುಕೋಟಿ ಹಗರಣದ ಸುದ್ದಿ ಕಡಿಮೆಯಾಗಿದೆ. ಆದರೆ ಎಸ್‍ಐಟಿ ಮಾತ್ರ ನಮಗೂ ರಾಜಕೀಯ ವಿಷಯಕ್ಕೂ ಸಂಬಂಧವಿಲ್ಲ ಎಂದು ವಿಚಾರಣೆ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ಹಿಂದೆ ಜಮೀರ್ ಅಹ್ಮದ್ ಅವರನ್ನ ಇಡಿ ವಿಚಾರಣೆ ನಡೆಸಿತ್ತು. ಈಗ ರೋಷನ್ ಬೇಗ್ ಸರದಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *