ಕರಾವಳಿಯಲ್ಲಿ ವರುಣನ ಆರ್ಭಟ – ಲಾರಿ ಮೇಲೆ ಗುಡ್ಡ ಕುಸಿತ

Public TV
1 Min Read

-ಅಸ್ಸಾಂನಲ್ಲಿ ಪ್ರವಾಹ ಭೀತಿ
-ಉತ್ತರ ಭಾರತದಲ್ಲೂ ಮಳೆಯಬ್ಬರ

ಕಾರವಾರ: ಕರಾವಳಿ ಭಾಗದಲ್ಲಿ ಮುಂಗಾರು ಆರ್ಭಟಿಸುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಬಳಿ ನಿಲ್ಲಿಸಿದ್ದ ಲಾರಿ ಮೇಲೆ ಗುಡ್ಡ ಕುಸಿದು ಬಿದ್ದಿದೆ.

ಮಣ್ಣಿನಲ್ಲಿ ಲಾರಿ ಸಿಲುಕಿಕೊಂಡಿದ್ದು, ಚಾಲಕನಿಗೆ ಗಾಯಗಳಾಗಿದೆ. ಉಡುಪಿಯಲ್ಲಿ 72 ಮಿಲಿ ಮೀಟರ್ ಮಳೆ ದಾಖಲಾಗಿದೆ. ಕುಂದಾಪುರ ತಾಲೂಕಿನಲ್ಲಿ ಸುಮಾರು 11 ಮನೆಗಳಿಗೆ ಹಾನಿಯಾಗಿದ್ದು, 30ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿದೆ. ಜೊತೆಗೆ ಸೀತಾ, ಮಡಿಸಾಲು ನದಿಗಳು ತುಂಬಿ ಹರಿಯುತ್ತಿದೆ.

ತುಂಬಿ ಹರಿಯುತ್ತಿರುವ ವೇದಗಂಗಾ, ದೂಧಗಂಗಾ ಹಾಗೂ ಪಂಚಗಂಗಾ ನದಿಗಳ ರಭಸದಿಂದ ಚಿಕ್ಕೋಡಿ ತಾಲೂಕಿನ 12 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ 6 ಸೇತುವೆಗಳು ಜಲಾವೃತವಾಗಿದೆ. ಮಹಾರಾಷ್ಟ್ರದ ಶಿರೋಳ ತಾಲೂಕಿನ ಸುಪ್ರಸಿದ್ಧ ನರಸಿಂಹವಾಡಿ ದತ್ತ ಮಂದಿರ ಜಲಾವೃತವಾಗಿದೆ. ಕೃಷ್ಣಾ ನದಿ ನೀರಿನ ಒಳಹರಿವು ಕೂಡ ಹೆಚ್ಚಳವಾಗಿದೆ.

ಉತ್ತರ ಭಾರತದಲ್ಲೂ ಮಳೆಯಬ್ಬರ ಜೋರಾಗಿದ್ದು, ಅಸ್ಸಾಂನಲ್ಲಿ ಪ್ರವಾಹ ಭೀತಿ ಎದುರಾಗಿದೆ. 17 ಜಿಲ್ಲೆಗಳಲ್ಲಿ ಸುಮಾರು ನಾಲ್ಕೂವರೆ ಲಕ್ಷ ಜನಜೀವನ ಅಸ್ತವ್ಯಸ್ತವಾಗಿದೆ. ಬ್ರಹ್ಮಪುತ್ರ ನದಿ ಸೇರಿದಂತೆ ಇತರೆ 5 ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. 17 ಸಾವಿರ ಹೆಕ್ಟೇರ್ ಪ್ರದೇಶ ಜಲಾವೃತವಾಗಿದ್ದು, 749 ಗ್ರಾಮಗಳು ತತ್ತರಿಸಿವೆ. ಈವರೆಗೂ ಸುಮಾರು 2000ಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದ್ದು, 53 ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ.

ಎನ್‍ಡಿಆರ್‍ಎಫ್ ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ಮುಂದಿನ ದಿನವೂ ಉತ್ತರ ಪ್ರದೇಶದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‍ನಲ್ಲಿ ಭೂಕುಸಿತ ಆಗಿದೆ. ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂಗೆ ಸಂಪರ್ಕಿಸುವ ಎನ್10ರಲ್ಲಿ ಭೂಕುಸಿತವಾಗಿ ಸಂಪರ್ಕ ಕಡಿತಗೊಂಡಿದೆ. ಮಹಾರಾಷ್ಟ್ರದ ನಾಸಿಕ್‍ನಲ್ಲಿ ತ್ರಿಯಂಕೇಶ್ವರ ದೇಗುಲ ಸಂಪರ್ಕಿಸುವ ರಸ್ತೆಗಳು ಜಲಾವೃತವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *