ನೌಹೀರಾ ಶೇಖ್ ನ್ಯಾಯಾಲಯಕ್ಕೆ ಹಾಜರ್ – ಕೋರ್ಟ್ ಅವರಣದಲ್ಲೇ ಹಣ ಕಳೆದುಕೊಂಡವರ ಆಕ್ರೋಶ

Public TV
2 Min Read

ಬಳ್ಳಾರಿ: ಲಕ್ಷಾಂತರ ಮಂದಿ ಅಮಾಯಕರಿಂದ ಬರೋಬ್ಬರಿ 3 ಸಾವಿರ ಕೋಟಿ ರೂ. ಹಣವನ್ನು ಅಕ್ರಮವಾಗಿ ಸಂಗ್ರಹಿಸಿ ಜನರಿಗೆ ಮೋಸ ಮಾಡಿದ್ದ ಆರೋಪದ ಮೇಲೆ ಎಂಇಪಿ ಪಕ್ಷದ ಸಂಸ್ಥಾಪಕಿ ನೌಹೀರಾ ಶೇಖ್‍ಳನ್ನು ಒಂದು ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಬಳ್ಳಾರಿ ನಿವಾಸಿ ಭಾಷಾ ಅವರು ನೌಹೀರಾ ಶೇಖ್ ವಿರುದ್ಧ ವಂಚನೆ ದೂರು ದಾಖಲಿಸಿದ್ದರು. ಬೆಳಗ್ಗೆ ನೌಹೀರಾಳನ್ನು ಹೈದರಾಬಾದ್ ಜೈಲಿನಿಂದ ಕರೆತಂದಿದ್ದ ಪೊಲೀಸರು ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನೌಹೀರಾ ಶೇಖ್ ಹಾಜರಾದ ವಿಚಾರ ತಿಳಿದು ಕೋರ್ಟ್ ಆವರಣದಲ್ಲಿ ಶೇಖ್ ಒಡೆತನದ ಚಿಟ್ ಫಂಡ್‍ನಲ್ಲಿ ಹಣ ತೊಡಗಿಸಿ, ಹಣ ಕಳೆದು ಕೊಂಡ ನೂರಾರು ಮಂದಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರಕರಣಕ್ಕೆ ಸಂಭಂದಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಧೀಶೆ ಪೂರ್ಣಿಮಾ ಯಾದವ್, ಪ್ರಕರಣದ ವಿಚಾರಣೆಯನ್ನು ಇಂದು ಮಧ್ಯಾಹ್ನ ಮೂರು ಗಂಟೆಗೆ ಮುಂದೂಡಿದ್ದರು. ನ್ಯಾಯಾಲಯವು ಆರೋಪಿಯನ್ನು ಶುಕ್ರವಾರ ಬೆಳಗ್ಗೆ 11ರಿಂದ ಸಂಜೆ 5 ಗಂಟೆಯ ವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದು, ಶನಿವಾರ ಮತ್ತೆ ವಿಚಾರಣೆ ನಡೆಸಲಿದೆ.

ಏನಿದು ಪ್ರಕರಣ?
ಎಐಎಂಇಪಿ(ಅಖಿಲ ಭಾರತ ಮಹಿಳಾ ಸಬಲೀಕರಣ ಪಕ್ಷ) ರಾಷ್ಟ್ರೀಯ ಪಕ್ಷದ ಸಂಸ್ಥಾಪಕ ಅಧ್ಯಕ್ಷೆಯಾಗಿದ್ದ ನೌಹೀರಾ 3,000 ಕೋಟಿ ರೂ.ಗಳ ವಂಚನೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಹೈದರಾಬಾದಿನ ಚಂಚಲಗೂಡು ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು.

24 ಬೇನಾಮಿ ಸಂಸ್ಥೆಗಳ ಮೂಲಕ 182 ಬ್ಯಾಂಕ್ ಖಾತೆಗಳ ಮೂಲಕ 1,72,114 ಹೂಡಿಕೆದಾರರಿಂದ ಸುಮಾರು 3,000 ಕೋಟಿ ರೂ.ಗಳನ್ನು ಅಕ್ರಮವಾಗಿ ಸಂಗ್ರಹಿಸಿದ್ದು ಪತ್ತೆಯಾಗಿದೆ. ಮನಿಲಾಂಡ್ರಿಂಗ್ ನಿಯಂತ್ರಣ ಕಾಯ್ದೆ (ಪಿಎಂಎಲ್ ಎ) 2002ರ ಉಲ್ಲಂಘನೆ ಮಾಡಿದ ಆರೋಪದಡಿಯಲ್ಲಿ ನೌಹೀರಾ ಶೇಖ್, ಮೊಲ್ಲಿ ಥಾಮಸ್, ಬಿಜು ಥಾಮಸ್ ಎಂಬುವವರನ್ನು ಬಂಧಿಸಲಾಗಿತ್ತು. ಹೀರಾ ಸಮೂಹ ಸಂಸ್ಥೆ ಮುಖೇನ ಅಕ್ರಮವಾಗಿ ಹಣ ರವಾನೆ ಮಾಡಿರುವ ಆರೋಪವೂ ಇದೆ.

ಹೈದರಾಬಾದ್ ಮೂಲದ ಹೀರಾ ಸಮೂಹ ಸಂಸ್ಥೆ ಸೇರಿ 24ಕ್ಕೂ ಅಧಿಕ ಕಂಪನಿಗಳನ್ನು ಹೊಂದಿದ್ದು, ಯುಎಇ ಹಾಗೂ ದುಬೈನಲ್ಲೂ ಕಚೇರಿಗಳನ್ನು ಹೊಂದಿದೆ. ಹೂಡಿಕೆ ಡಬ್ಬಲ್ ಮಾಡುವ ನೆಪದಲ್ಲಿ ಸಾರ್ವಜನಿಕರಿಂದ ಹಣ ಪಡೆಯಲಾಗಿದೆ. ಠೇವಣಿ ಹಾಗೂ ಹೂಡಿಕೆ ರೂಪದಲ್ಲಿ ಹಣ ಸಂಗ್ರಹಿಸಲಾಗಿದೆ. ಇದಕ್ಕೆ ಪ್ರತಿಯಾಗಿ ವಾರ್ಷಿಕವಾಗಿ ಶೇ.36% ಮೊತ್ತವನ್ನು ಹಿಂತಿರುಗಿಸುವುದಾಗಿ ನೌಹೀರಾ ಶೇಖ್ ಭರವಸೆ ನೀಡಿದ್ದರು. ಆದರೆ, ಹೂಡಿಕೆದಾರರಿಗೆ ಯಾವುದೇ ಹಣ ನೀಡದ ಹಿನ್ನೆಲೆಯಲ್ಲಿ ಸಾಕಷ್ಟು ದೂರುಗಳು ದಾಖಲಾಗಿತ್ತು.

ನೌಹೀರಾ ಶೇಖ್ ಹೆಸರಿನಲ್ಲಿ 180 ಬ್ಯಾಂಕ್ ಖಾತೆಗಳಿವೆ. ಸದ್ಯದ ಲೆಕ್ಕಾಚಾರದ ಪ್ರಕಾರ 24 ಬೇನಾಮಿ ಸಂಸ್ಥೆಗಳ ಮೂಲಕ 182 ಬ್ಯಾಂಕ್ ಖಾತೆಗಳ ಮೂಲಕ 1,72,114 ಹೂಡಿಕೆದಾರರಿಂದ ಸುಮಾರು 3,000 ಕೋಟಿ ರುಗಳನ್ನು ಅಕ್ರಮವಾಗಿ ಸಂಗ್ರಹಿಸಿರುವುದು ಕಂಡು ಬಂದಿದೆ.

ಕರ್ನಾಟಕದಲ್ಲಿ ಚುನಾವಣೆ ಸ್ಪರ್ಧಿಸಿದ್ದ ಎಐಎಂಇಪಿ ಪಕ್ಷವು ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಜಾತ್ಯಾತೀತ ಪಕ್ಷವಾಗಿದ್ದು, ಬರುವ ಚುನಾವಣೆಯಲ್ಲಿ ರಾಜ್ಯದ ಅರ್ಧದಷ್ಟು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತದೆ. ನಮ್ಮ ಪಕ್ಷದ ಚಿಹ್ನೆ ವಜ್ರ ಆಗಿದೆ. ಮಾನವೀಯತೆಗಾಗಿ ನ್ಯಾಯ ಎಂಬ ಧ್ಯೇಯ ಹೊಂದಲಾಗಿದೆ ಎಂದು ಚುನಾವಣೆ ಕಣದಲ್ಲಿ ಎಐಎಂಇಪಿ ಸ್ಪರ್ಧಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *