ಏರ್ ಸ್ಟ್ರೈಕ್ ನಂತರ ಅಫ್ಘಾನಿಸ್ಥಾನದಲ್ಲಿ ತರಬೇತಿ ಪಡೆಯುತ್ತಿದ್ದಾರೆ ಉಗ್ರರು

Public TV
2 Min Read

ನವದೆಹಲಿ: ಪಾಕಿಸ್ತಾನದ ಬಾಲಾಕೋಟ್ ಮೇಲೆ ಭಾರತೀಯ ವಾಯು ಸೇನೆ ದಾಳಿ ನಡೆಸಿ, ತರಬೇತಿ ಕೇಂದ್ರಗಳನ್ನು ಧ್ವಂಸಗೊಳಿಸಿದ ನಂತರ ಜೈಷ್-ಎ-ಮೊಹಮ್ಮದ್(ಜೆಇಎಂ) ಹಾಗೂ ಲಷ್ಕರ್-ಎ-ತೈಯ್ಬಾ(ಎಲ್‍ಇಟಿ) ಸಂಘಟನೆಯ ಉಗ್ರರು ಅಫ್ಘಾನಿಸ್ಥಾನದಲ್ಲಿ ತರಬೇತಿ ಪಡೆಯುತ್ತಿರುವ ಕುರಿತು ಗುಪ್ತಚರ ದಳ ಮಾಹಿತಿ ನೀಡಿದೆ.

ಅಫ್ಘಾನಿಸ್ಥಾನದಲ್ಲಿ ಉಗ್ರರು ತರಬೇತಿ ಪಡೆಯುತ್ತಿದ್ದಾರೆ ಎಂದು ಮಾಹಿತಿ ತಿಳಿದ ಬೆನ್ನಲ್ಲೇ ಭಾರತದ ಡಿಪ್ಲೊಮ್ಯಾಟಿಕ್ ಮಿಶನ್ಸ್ ಮತ್ತು ಕಾಬೂಲ್, ಕಂದಾಹರ್ ಪ್ರದೇಶದ ಸುತ್ತಮುತ್ತ ಹೈ ಅಲರ್ಟ್ ಘೋಷಿಸಲಾಗಿದೆ. ಜೈಷ್ ಹಾಗೂ ಎಲ್‍ಇಟಿ ಸಂಘಟನೆಯ ಉಗ್ರರು ಅಫ್ಘಾನಿಸ್ಥಾನದ ಕುನಾರ್, ನಂಗರ್‍ಹಾರ್, ನುರಿಸ್ಥಾನ್ ಹಾಗೂ ಕಂದಹಾರ್ ಪ್ರದೇಶದಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

ಫೆ.14ರಂದು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‍ಪಿಎಫ್ ಬೆಂಗಾವಲು ವಾಹನದ ಮೇಲೆ ಜೈಷ್ ಸಂಘಟನೆಯ ಉಗ್ರನೊಬ್ಬ ಸ್ಫೋಟಕಗಳನ್ನು ತುಂಬಿದ್ದ ಮಾರುತಿ ಇಕೋ ಕಾರನ್ನು ಗುದ್ದಿಸಿ ದಾಳಿ ನಡೆಸಿದ್ದ. ಇದಕ್ಕೆ ಪ್ರತಿಯಾಗಿ ಭಾರತೀಯ ವಾಯು ಸೇನೆ ಮಿರಾಜ್ ಜೆಟ್‍ಗಳ ಮೂಲಕ ಬಾಲಾಕೋಟ್‍ನಲ್ಲಿದ್ದ ಜೈಷ್ ಉಗ್ರರ ಅಡಗುತಾಣಗಳ ಮೇಲೆ ಏರ್ ಸ್ಟ್ರೈಕ್ ಮಾಡಿತ್ತು.

ಇದೀಗ ಜೈಷ್ ಹಾಗೂ ಎಲ್‍ಇಟಿ ಉಗ್ರ ಸಂಘಟನೆಗಳು ಅಫ್ಘಾನಿಸ್ಥಾನದ ತಾಲಿಬಾನ್ ಹಾಗೂ ಅಫ್ಘಾನ್ ಇನ್ಸರ್ಜೆಂಟ್ ಗ್ರೂಪ್, ಹಕ್ಕಾನಿ ನೆಟ್‍ವರ್ಕ್‍ನೊಂದಿಗೆ ಕೈ ಜೋಡಿಸಿವೆ. ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ಬೇರ್ಪಡಿಸುವ ಡುರಾಂಡ್ ರೇಖೆಯಾದ್ಯಂತ ಉಗ್ರರಿಗೆ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಕುರಿತು ತರಬೇತಿ ನೀಡಲಾಗುತ್ತಿದೆ ಎಂದು ಗುಪ್ತಚರ ದಳ ತಿಳಿಸಿದೆ.

ಜುಲೈ 1, 2ರಂದು ಎಲ್‍ಇಟಿಯ 15 ನಾಯಕರು ಹಾಗೂ ಅವರಿಗೆ ಹಣದ ನೆರವು ನೀಡುವ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂಬ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಯನ್ನು ಭಾರತ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ.

ಉಗ್ರರಿಗೆ ಹಣಕಾಸು ನೀಡುವ ಹಾಗೂ ಅಕ್ರಮ ಹಣ ವರ್ಗಾವಣೆ ಮಾಡುತ್ತಿರುವ ಜಾಲ ಹತ್ತಿಕ್ಕಿ, ಅಕ್ಟೋಬರ್ ಒಳಗಾಗಿ ಅವರ ವಿರುದ್ಧ ನಿರ್ದಿಷ್ಟ ಕ್ರಮ ಕೈಗೊಳ್ಳದೇ ಇದ್ದಲ್ಲಿ ಪಾಕಿಸ್ತಾನವನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ ಎಂದು ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫ್ಲೋರ್ಸ್(ಎಫ್‍ಎಟಿಎಫ್) ಈಗಾಗಲೇ ಎಚ್ಚರಿಕೆ ನೀಡಿದೆ. ಇದನ್ನೂ ಓದಿ:  ಆರ್ಥಿಕವಾಗಿ ಕುಸಿದಿರುವ ಪಾಕಿಗೆ ಎಫ್‍ಎಟಿಎಫ್‍ನಿಂದ ಕೊನೆಯ ಎಚ್ಚರಿಕೆ

ಫ್ಲೋರಿಡಾ ಒರ್ಲಾಂಡೋದಲ್ಲಿ ನಡೆದ ಉಗ್ರರ ಹಣಕಾಸು ವ್ಯವಸ್ಥೆಯ ಮೇಲಿನ ಕಣ್ಗಾವಲು ಸಂಸ್ಥೆಯಾದ ಹಣಕಾಸು ಕ್ರಮ ಕ್ರಿಯಾ ಪಡೆಯ (ಎಫ್‍ಎಟಿಎಫ್) ವಾರ್ಷಿಕ ಮಹಾಸಭೆಯಲ್ಲಿ ಉಗ್ರರನ್ನು ಹತ್ತಿಕ್ಕುವಲ್ಲಿ ಪಾಕಿಸ್ತಾನದ ವೈಫಲ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಲಾಗಿತ್ತು. ಸದ್ಯ ಈಗ ಎಫ್‍ಎಟಿಎಫ್ ಅಲ್ಲಿ ಪಾಕಿಸ್ತಾನ ಬೂದು ಬಣ್ಣದ ಪಟ್ಟಿಯಲ್ಲಿದೆ. ಆದರೆ ಉಗ್ರರಿಗೆ ಹಣ ನೀಡಿ ಸಹಾಯ ಮಾಡುತ್ತಿರುವ ಜಾಲದ ವಿರುದ್ಧ ಅಕ್ಟೋಬರ್ ಒಳಗೆ ಕ್ರಮ ಕೈಗೊಳ್ಳಲು ಪಾಕಿಸ್ಥಾನ ವಿಫಲವಾದರೆ ಎಫ್‍ಎಟಿಎಫ್‍ನ ಕಪ್ಪು ಪಟ್ಟೆಗೆ ಪಾಕ್ ಸೇರಲಿದೆ.

ಈ ಹಿಂದೆ ಉಗ್ರರ ದಮನದ ಕ್ರಿಯಾ ಯೋಜನೆ ಸಿದ್ಧಪಡಿಸಿ ಕ್ರಮ ಕೈಗೊಳ್ಳಲು ಜನವರಿಯವರೆಗೂ ಪಾಕ್‍ಗೆ ಗಡುವು ನೀಡಲಾಗಿತ್ತು. ಆದರೆ ಅದನ್ನು ಪೂರೈಸುವಲ್ಲಿ ಪಾಕ್ ವಿಫಲವಾಗಿತ್ತು. ಅಷ್ಟೇ ಅಲ್ಲ, ಮೇ 2019ರೊಳಗೆ ಉಗ್ರರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಗಡುವು ನೀಡಿತ್ತು. ಆದರೆ ಈ ಅವಕಾಶವನ್ನು ಕೂಡ ಉಪಯೋಗಿಸಿಕೊಳ್ಳುವಲ್ಲಿ ಪಾಕ್ ವಿಫಲವಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *