ಬೆಂಗಳೂರು: ಬಿಜೆಪಿ ಜೊತೆ ಸೇರಿ ಕಾಂಗ್ರೆಸ್ ಮತ್ತು ಜೆಡಿಎಸ್‍ನ ದೊಡ್ಡ ದೊಡ್ಡ ನಾಯಕರೇ ಕೊಟ್ಟ ಒಳ ಏಟಿನಿಂದ ದೋಸ್ತಿ ಸರ್ಕಾರ ತತ್ತರಿಸಿದೆ. ರಾಜ್ಯದಲ್ಲಿ ಕ್ಷಿಪ್ರ ಕ್ರಾಂತಿ ಬೆನ್ನಲ್ಲೇ ಶನಿವಾರ ಸಂಜೆ ಬೆಂಗಳೂರಿಗೆ ದೌಡಾಯಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಮಾಜಿ ಸಿಎಂ ಸಿದ್ದರಾಮಯ್ಯ ಜೊತೆಗೂಡಿ ಅತೃಪ್ತರನ್ನು ಮನವೊಲಿಸುವ ಕಸರತ್ತು ಮಾಡಿದರು.
ನಿನ್ನೆ ರಾತ್ರಿ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಜೊತೆ ಖಾಸಗಿ ಹೋಟೆಲ್‍ನಲ್ಲಿ ಮಾತುಕತೆ ನಡೆಸಿದ್ದಾರೆ. ರಾಜೀನಾಮೆ ನೀಡಬೇಡಿ. ಯಾವುದೇ ಕಾರಣಕ್ಕೂ ಪಕ್ಷ ಬಿಡಬೇಡಿ ಎಂದು ಮನವಿ ಮಾಡಿದ್ದಾರೆ. ಈ ವೇಳೆ, ರಾಮಲಿಂಗಾರೆಡ್ಡಿ ಅವರು ಪರಮೇಶ್ವರ್ ವಿರುದ್ಧ ಆರೋಪಗಳ ಮಳೆ ಸುರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬೆಂಗಳೂರು ನಗರಾಭಿವೃದ್ಧಿ ಸಚಿವರಿಂದಲೇ ಇಷ್ಟೆಲ್ಲಾ ರಾದ್ದಾಂತ ಆಗಿದೆ. ಅವರು ನಗರಾಭಿವೃದ್ಧಿ ಸಚಿವರಾಗಿ ಹಿರಿಯರಾದ ನಮ್ಮನ್ನು ಕಡೆಗಣಿಸಿದ್ದಾರೆ. ಪರಿಣಾಮ ನಾವಿಂದು ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಈಗಾಗಲೇ ನಾವು ರಾಜೀನಾಮೆ ಕೊಟ್ಟಾಗಿದೆ. ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ಖಡಕ್ಕಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ರಾಮಲಿಂಗಾ ರೆಡ್ಡಿ ಖಡಕ್ ನಿರ್ಧಾರದಿಂದ ವೇಣುಗೋಪಾಲ್ ಅವರು ಬೇಸರದಿಂದಲೇ ಹೋಟೆಲ್‍ನಿಂದ ನಿರ್ಗಮಿಸಿದ್ದಾರೆ. ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಮೀಟಿಂಗ್ ಮಾಡಿದ್ದಾರೆ. ಇದೇ ವೇಳೆ ಮುಂದೇನು ಮಾಡಬೇಕೆಂಬ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ನಿನ್ನೆ ಸಂಜೆ ಹೆಚ್‍ಎಎಲ್‍ನಿಂದ ಹೊರಟ ರಾಜೀನಾಮೆ ನೀಡಿರುವ ಅತೃಪ್ತ ಶಾಸಕರೆಲ್ಲರೂ ಈಗ ಮುಂಬೈನ ಐಷಾರಾಮಿ ಹೋಟೆಲ್ ಸೋಫಿಟೆಲ್‍ನಲ್ಲಿ ಉಳಿದುಕೊಂಡಿದ್ದಾರೆ. ರಾಮಲಿಂಗಾರೆಡ್ಡಿ, ಮುನಿರತ್ನ, ಆನಂದ್ ಸಿಂಗ್ ಹೊರತುಪಡಿಸಿ ಉಳಿದ ಶಾಸಕರು ಮುಂಬೈ ಹೋಟೆಲ್‍ನಲ್ಲಿ ಬೀಡುಬಿಟ್ಟಿದ್ದಾರೆ.
ಸೊಫಿಟಲ್ ಹೋಟೆಲ್‍ನ ವಿಶೇಷತೆ;
ಮುಂಬೈನಲ್ಲಿರುವ ಐಷಾರಾಮಿ ಹೋಟೆಲ್‍ಗಳಲ್ಲಿ ಸೊಫಿಟಲ್ ಕೂಡ ಒಂದಾಗಿದೆ. ಒಟ್ಟು 302 ರೂಮ್‍ಗಳಿದ್ದು, ಅದರಲ್ಲಿ 165 ರೂಮ್‍ಗಳು ಐಷಾರಾಮಿ ರೂಮ್‍ಗಳಾಗಿವೆ. ಒಂದು ದಿನಕ್ಕೆ 8 ಸಾವಿರದಿಂದ 1.5 ಲಕ್ಷ ರೂ. ದರದಲ್ಲಿ ಕೊಠಡಿಗಳು ಸಿಗುತ್ತದೆ. ಸ್ಪಾ, ವಿಶೇಷ ಊಟದ ವ್ಯವಸ್ಥೆ ಮತ್ತು ವಾಹನದ ಅನುಕೂಲತೆಯನ್ನ ಹೊಂದಿದೆ. ಅತೃಪ್ತ ಶಾಸಕರಿಗಾಗಿಯೇ ವಿಶೇಷ ಭೋಜನ ಸಿದ್ಧತೆಗೆ ಸೂಚಿಸಲಾಗಿದೆ. ಮುಂಬೈ ಬಿಜೆಪಿ ಯುವಘಟಕ ಅತೃಪ್ತ ಶಾಸಕರ ಉಸ್ತುವಾರಿ ವಹಿಸಿಕೊಂಡಿದೆ ಎಂದು ತಿಳಿದು ಬಂದಿದೆ.