ಕಾಂಚಿಪುರ ವಿಶೇಷ – 40 ವರ್ಷಗಳ ಬಳಿಕ ಭಕ್ತಾದಿಗಳಿಗೆ ದರ್ಶನ ನೀಡಿದ `ಅಥಿ ವರದಾರ್’

Public TV
2 Min Read

ಚೆನ್ನೈ: ತಮಿಳುನಾಡಿನ ದೇಗುಲಗಳ ನಗರಿ ಕಾಂಚಿಪುರದಲ್ಲಿ 40 ವರ್ಷಗಳಿಂದ ನೀರಿನಲ್ಲಿದ್ದ `ಅಥಿ ವರದಾರ್’ ಮೂರ್ತಿಯನ್ನು ಮೇಲಕ್ಕೆ ಎತ್ತಲಾಗಿದ್ದು, ದೇವರನ್ನು ನೋಡಲು ಲಕ್ಷಾಂತರ ಮಂದಿ ಭಕ್ತಾದಿಗಳು ದೇಗುಲದತ್ತ ಬರುತ್ತಿದ್ದಾರೆ.

ಪುರಾತನ ಕಾಲದಿಂದಲೂ ಈ ದೇಗುಲ 40 ವರ್ಷಕ್ಕೊಮ್ಮೆ ಮಾತ್ರ ಬಾಗಿಲನ್ನು ತೆರೆಯಲಾಗುತ್ತದೆ. ಈ ವೇಳೆ 48 ದಿನಗಳ ಕಾಲ ಮಾತ್ರ ಅಥಿ ವರದಾರ್ ದೇವರ ದರ್ಶನ ಪಡೆಯಬಹುದಾಗಿದೆ.

ಈ ಅವಧಿ ಮುಗಿದ ಬಳಿಕ ಮತ್ತೆ ಮೂರ್ತಿಯನ್ನು ನೀರಿನಲ್ಲಿ ಇಡಲಾಗುತ್ತದೆ. ಈ ಹಿಂದೆ 1979ರಲ್ಲಿ ದರ್ಶನ ಭಾಗ್ಯ ಸಿಕ್ಕಿತ್ತು. ಇದಕ್ಕೂ ಮೊದಲು 1939ರಲ್ಲಿ ಭಕ್ತಾದಿಗಳಿಗೆ ದರ್ಶನ ಪಡೆಯುವ ಅವಕಾಶ ಸಿಕ್ಕಿದೆ.

ಈ ವರ್ಷ ಮತ್ತೆ ಆ ವಿಶೇಷ ಅವಧಿ ಬಂದಿದೆ. ಜುಲೈ 1ರ ಸೋಮವಾರದಿಂದ 48 ದಿನಗಳ ಕಾಲ ಅಂದರೆ ಆಗಸ್ಟ್ 17ರವರೆಗೆ ಭಕ್ತಾದಿಗಳಿಗೆ ದರ್ಶನದ ಅವಕಾಶ ಸಿಗಲಿದೆ. ಪ್ರತಿ ದಿನ ಬೆಳಗ್ಗೆ 5 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಭಕ್ತಾದಿಗಳು ದೇವಾಲಯಕ್ಕೆ ಭೇಟಿ ನೀಡಬಹುದು.

ಮೊದಲ 40 ದಿನಗಳ ಕಾಲ ಅಂದರೆ ಜುಲೈ 1ರಿಂದ ಆಗಸ್ಟ್ 9ರವರೆಗೆ ಮಲಗಿಸಿದ ರೀತಿಯಲ್ಲಿ ದೇವರ ವಿಗ್ರಹವನ್ನು ಇರಿಸಲಾಗುತ್ತದೆ. ಬಳಿಕ ಕೊನೆಯ ಎಂಟು ದಿನಗಳು ಆಗಸ್ಟ್ 10ರಿಂದ 17ರವರೆಗೆ ನಿಂತಿರುವ ಭಂಗಿಯಲ್ಲಿ ವಿಗ್ರಹವನ್ನು ನಿಲ್ಲಿಸಲಾಗುತ್ತದೆ.

ಹಿನ್ನೆಲೆ ಏನು?
16ನೇ ಶತಮಾನದಲ್ಲಿ ಶ್ರೀ ವರದರಾಜ ಪೆರುಮಾಳ್ ದೇವಸ್ಥಾನದಲ್ಲಿ ಅಥಿ ವರದಾರ್ ಮೂರ್ತಿಗೆ ಮೂಜೆ ಮಾಡಲಾಗುತಿತ್ತು. ಆಗ ದೇವಸ್ಥಾನದ ಮೇಲೆ ದಾಳಿ ನಡೆದಾಗ ದೇವಿಯ ವಿಗ್ರಹವನ್ನು ದೇಗುಲದ ಕಲ್ಯಾಣಿಯಲ್ಲಿ ಬಚ್ಚಿಡಲಾಗಿತ್ತು. ಆದರೆ ದಾಳಿಯ ಬಳಿಕ ಬಂದ ದೇವಸ್ಥಾನದ ಸಿಬ್ಬಂದಿಗೆ ಅಥಿ ವರದಾರ್ ದೇವರ ಮೂಲ ವಿಗ್ರಹ ಎಲ್ಲಿದೆ ಎನ್ನುವ ವಿಚಾರ ತಿಳಿದಿರಲಿಲ್ಲ. ಆ ನಂತರ ಅಥಿ ವರದಾರ್ ದೇವರ ಇನ್ನೊಂದು ವಿಗ್ರಹ ಮಾಡಿಸಿ ಪೂಜೆ ಅದಕ್ಕೆ ಪೂಜೆ ಸಲ್ಲಿಸುತ್ತಿದ್ದರು.

ಆದರೆ 40 ವರ್ಷದ ಬಳಿಕ 17ಂ9ರಲ್ಲಿ ದೇವಸ್ಥಾನದ ಕಲ್ಯಾಣಿ ಕಾರಣಾಂತರಗಳಿಂದ ಖಾಲಿಯಾಗಿತ್ತು. ಆ ವೇಳೆ ಕಲ್ಯಾಣಿಯಲ್ಲಿ ಬಚ್ಚಿಟ್ಟಿದ್ದ ಅಥಿ ವರದಾರ್ ದೇವರ ಮೂಲ ವಿಗ್ರಹ ಪತ್ತೆಯಾಗಿತ್ತು. ಆ ಬಳಿಕ 40 ವರ್ಷಕ್ಕೊಮ್ಮೆ 48 ದಿನಗಳ ಕಾಲ ದೇವಿಯನ್ನು ನೀರಿನಿಂದ ಹೊರತೆಗೆದು ಪೂಜಿಸುವ ಸಂಪ್ರದಾಯ ಹುಟ್ಟಿಕೊಂಡಿತು.

ಸದ್ಯ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಮೂರು ತಾತ್ಕಾಲಿಕ ಬಸ್ ನಿಲ್ದಾಣವನ್ನು ಪಟ್ಟಣದ ಹೊರಗಡೆ ನಿರ್ಮಿಸಲಾಗಿದೆ. ಹಾಗೆಯೇ ಕಾರುಗಳು ಹಾಗೂ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಪಾರ್ಕಿಂಗ್ ವ್ಯವಸ್ಥೆಯನ್ನೂ ಕೂಡ ಮಾಡಲಾಗಿದೆ. ಅಷ್ಟೇ ಅಲ್ಲದೆ ಭಕ್ತಾದಿಗಳನ್ನು ಶ್ರೀ ವರದರಾಜ ಪೆರುಮಾಳ್ ದೇವಸ್ಥಾನಕ್ಕೆ ಕರೆತರಲು ದೋಣಿಯ ವ್ಯವಸ್ಥೆ ಕೂಡ ಇದೆ ಎಂದು ದೇವಾಲಯದ ಸಿಬ್ಬಂದಿ ಮಾಹಿತಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *