ಬರೆದಿಟ್ಟುಕೊಳ್ಳಿ, ಮನ್ಸೂರ್ ಅಲಿ ಖಾನ್ ಜೀವಂತವಾಗಿ ಉಳಿಯಲ್ಲ: ಈಶ್ವರಪ್ಪ

Public TV
1 Min Read

– ಲೂಟಿಕೋರರೇ ಮನ್ಸೂರ್ ನ ಕೊಲೆ ಮಾಡ್ತಾರೆ

ಶಿವಮೊಗ್ಗ: ಐಎಂಎ ಬಹುಕೋಟಿ ವಂಚನೆ ಪ್ರಕರಣದ ಆರೋಪಿಯಾದ ಮನ್ಸೂರ್ ಅಲಿ ಖಾನ್ ಜೀವಂತವಾಗಿ ಉಳಿಯಲ್ಲ, ಬರೆದಿಟ್ಟುಕೊಳ್ಳಿ. ಲೂಟಿಕೋರರೇ ಮನ್ಸೂರ್ ನ ಕೊಲೆ ಮಾಡ್ತಾರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಮೈತ್ರಿಕೂಟ ಸರ್ಕಾರದ ನಾಯಕರು ಐಎಂಎ ಪ್ರಕರಣದಲ್ಲಿ ಯಾರು ಯಾರು ಲೂಟಿ ಮಾಡಿದ್ದಾರೋ ಅವರು ಮನ್ಸೂರ್ ನನ್ನು ಕೊಲೆ ಮಾಡಲಿದ್ದಾರೆ ಎಂಬ ಆತಂಕ ವ್ಯಕ್ತಪಡಿಸಿದರು. ಐಎಂಎ ಪ್ರಕರಣಕ್ಕೆ ಎಸ್‍ಐಟಿ ಮುಖಾಂತರ ನ್ಯಾಯ ಸಿಗಲು ಸಾಧ್ಯವಿಲ್ಲ. ನಾವು ಈ ಪ್ರಕರಣವನ್ನು ಸಿಬಿಐಗೆ ಕೊಡಿ ಎಂದರೆ ಅದಕ್ಕೆ ಸರ್ಕಾರ ತಯಾರಿಲ್ಲ. ಮೈತ್ರಿ ಸರ್ಕಾರದ ಅನೇಕ ವ್ಯಕ್ತಿಗಳಿಗೆ ಕಿಕ್ ಬ್ಯಾಕ್ ಸಿಕ್ಕಿದೆ. ಮನ್ಸೂರ್ ಅಲಿ ಖಾನ್ ಸತ್ತರೆ ಕಿಕ್ ಬ್ಯಾಕ್ ಪಡೆದವರು ಉಳಿದುಬಿಡುತ್ತಾರೆ. ಹೀಗಾಗಿ, ಮನ್ಸೂರ್ ಗೆ ರಕ್ಷಣೆ ಕೊಡಿ ಎಂದು ಈಶ್ವರಪ್ಪ ಮನವಿ ಮಾಡಿಕೊಂಡರು.

ಈ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನ್ಸೂರ್ ಸಾವನ್ನ ತಪ್ಪಿಸಲು ಮನವಿ ಮಾಡಲಿ. ಮೈತ್ರಿಕೂಟ ಸರ್ಕಾರದ ಸ್ವಾಭಿಮಾನಿ ಶಾಸಕರು ಐಎಂಎ ಹಗರಣ, ಜಿಂದಾಲ್ ಹಗರಣ, ಲೂಟಿ ಮಾಡಿದವರ ವಿರುದ್ಧ ಬೇಸರಗೊಂಡಿದ್ದಾರೆ. ಹೀಗಾಗಿ ರಾಜಿನಾಮೆ ನೀಡಲು ಮುಂದಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಬಡವರ ಹಣ ತೆಗೆದುಕೊಂಡು, ರಾಜ್ಯ- ದೇಶ ಬಿಟ್ಟು ಓಡಿ ಹೋದ ಮನ್ಸೂರ್‍ನನ್ನು ಯಾಕೆ ಅರೆಸ್ಟ್ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಮನ್ಸೂರ್ ಅಲಿ ಖಾನ್ ದೇಶ ಬಿಡಲು ಇದೇ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ಕಾರಣವಾಗಿದ್ದು, ಕೂಲಿ ಮಾಡುತ್ತಿದ್ದ ಬಡವರ ಲಕ್ಷಾಂತರ ಹಣ ದೋಚಲು ಇದೇ ಮೈತ್ರಿ ಸರ್ಕಾರವೇ ಕಾರಣ ತಾನೆ ಎಂದು ಆರೋಪಿಸಿದರು.

ಮೈತ್ರಿಕೂಟದಲ್ಲಿ ಗೊಂದಲ ಮುಂದುವರಿದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಏಕವಚನದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಟೀಕೆ ಮಾಡಿದರೆ ಅವರ ವಿರುದ್ಧ ಇನ್ನೂ ಕೆಟ್ಟ ಭಾಷೆ ಬಳಕೆ ಮಾಡಬೇಕಾಗುತ್ತೆ. ಇದರಲ್ಲಿ ಸಿದ್ದರಾಮಯ್ಯ ಅವರ ಸಂಸ್ಕೃತಿ ತೋರುತ್ತದೆ. ಮೊದಲು ಅವರು ಗೌರವದಿಂದ ನಡೆದುಕೊಳ್ಳುವುದನ್ನು ಕಳಿತುಕೊಳ್ಳಲಿ ಎಂದು ವಾರ್ನಿಂಗ್ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *