ಪ್ರತಿಷ್ಠಿತ `ಏರ್‌ಬಸ್ ಐಡಿಯಾ ಸ್ಪರ್ಧೆ’ ಗೆದ್ದ ಕನ್ನಡಿಗ ವಿದ್ಯಾರ್ಥಿಗಳ ತಂಡ

Public TV
2 Min Read

ನವದೆಹಲಿ: ಇಬ್ಬರು ಕನ್ನಡಿಗರನ್ನು ಒಳಗೊಂಡ 4 ಮಂದಿಯ ಡೆಲ್ಫ್ಟ್ ವಿಶ್ವವಿದ್ಯಾಲಯದ ತಂಡವು ಪ್ರತಿಷ್ಠಿತ `ಏರ್‌ಬಸ್ ಫ್ಲೈ ಯುವರ್ ಐಡಿಯಾಸ್ ಸ್ಪರ್ಧೆ’ ಗೆದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

72 ರಾಷ್ಟ್ರಗಳ ಸುಮಾರು 270 ತಂಡಗಳಲ್ಲಿ, ಬರೋಬ್ಬರಿ 2,200 ಮಂದಿ ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು. ಇದರಲ್ಲಿ 7 ಸುತ್ತನ್ನು ದಾಟಿ ಬಂದು ಡೆಲ್ಫ್ಟ್ ತಂತ್ರಜ್ಞಾನ ವಿಶ್ವವಿದ್ಯಾಲಯ ಕಾಲೇಜಿನ `ಜೀರೋ ಹೀರೋಸ್’ ತಂಡವು ಈ ಸಾಲಿನ `ಏರ್‌ಬಸ್ ಫ್ಲೈ ಯುವರ್ ಐಡಿಯಾಸ್ ಸ್ಪರ್ಧೆ’ಯಲ್ಲಿ ಇಬ್ಬರು ಕನ್ನಡಿಗರನ್ನು ಒಳಗೊಂಡ ತಂಡ ಪ್ರಥಮ ಸ್ಥಾನ ಪಡೆದಿದೆ.

ಕರ್ನಾಟಕ ಮೂಲದ ಸುಜಯ್ ನಾರಾಯಣ(31), ಅಶ್ವಿಜ್ ನಾರಾಯಣನ್(24) ಹಾಗೂ ಡಚ್‍ನ ನೀಲ್ಸ್ ಹೊಕ್ಕೆ, ಜರ್ಮನ್‍ನ ನಿಕಾಸ್ `ಜೀರೋ ಹೀರೋಸ್’ ತಂಡದ ಸದಸ್ಯರಾಗಿದ್ದಾರೆ. ಈ ಸಾಲಿನ ಪ್ರತಿಷ್ಠಿತ `ಏರ್‌ಬಸ್ ಫ್ಲೈ ಯುವರ್ ಐಡಿಯಾಸ್ ಸ್ಪರ್ಧೆ’ಯಲ್ಲಿ ಗೆದ್ದು ಈ ತಂಡ ಬರೋಬ್ಬರಿ 25 ಸಾವಿರ ಯುರೋ(19.63 ಲಕ್ಷ ರೂ.) ಬಹುಮಾನವನ್ನು ತಮ್ಮದಾಗಿಸಿಕೊಂಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ತಂಡವು, ನಮ್ಮ ಹಾದಿ ಸುಗಮವಾಗಿರಲಿಲ್ಲ. ಇಲ್ಲಿಯವರೆಗೆ ಬರಲು ತುಂಬಾ ಪರಿಶ್ರಮ ಪಟ್ಟಿದ್ದೇವೆ. ಕಳೆದ 7-8 ತಿಂಗಳಿಂದ ಹಲವು ಹಂತಗಳಲ್ಲಿ ದಾಟಿ ಗುರಿ ತಲುಪಿದ್ದೇವೆ. ತುಂಬಾ ಖುಷಿಯಾಗುತ್ತಿದೆ ಎಂದು ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.

ಈ ಸ್ಪರ್ಧೆಯಲ್ಲಿ ಜೀರೋ ಹೀರೋಸ್ ತಂಡವು ವಾಣಿಜ್ಯ ವಿಮಾನಗಳಲ್ಲಿ ಸಾಂಪ್ರದಾಯಿಕ ವಯರ್ ಸಿಸ್ಟಮ್‍ಗಳನ್ನು ಬಳಸುವ ಬದಲು ವಯರ್ ಲೆಸ್ ಸಿಸ್ಟಮ್‍ಗಳನ್ನು ಬಳಸುವ ಅಪ್ಲಿಕೇಶನ್‍ನ ಮಾದರಿಯನ್ನು ಪ್ರದರ್ಶಿಸಿತ್ತು. ಈ ಐಡಿಯಾಗೆ ಫಿದಾ ಆದ ತೀರ್ಪುಗಾರರು ಜೀರೋ ಹೀರೋಸ್ ತಂಡಕ್ಕೆ ಪ್ರಥಮ ಬಹುಮಾನ ನೀಡಿ ಗೌರವಿಸಿದ್ದಾರೆ.

ಡೆಲ್ಫ್ಟ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ವಿಜ್ಞಾನದಲ್ಲಿ ಪಿಎಚ್‍ಡಿ ಒದುತ್ತಿರುವ ಸುಜಯ್ ನಾರಾಯಣ ಅವರು ಈ ಐಡಿಯಾ ಬಗ್ಗೆ ವಿವರಿಸಿದ್ದಾರೆ. ಈ ಅಪ್ಲಿಕೇಶನ್ ವಿಮಾನಗಳಲ್ಲಿ ಬ್ಯಾಟರಿ ಏಕೀಕರಣವನ್ನು ತೆಗೆದುಹಾಕುವ ಮೂಲಕ ವಿಮಾನದಲ್ಲಿನ ಐಒಟಿ (ಇಂಟರ್ನೆಟ್ ಆಫ್ ಥಿಂಗ್ಸ್) ಗೆ ಮುಖ್ಯ ಮಿತಿಯ ಸಮಸ್ಯೆಯನ್ನು ಪರಿಹರಿಸುತ್ತದೆ, ಸುರಕ್ಷತೆ ಮತ್ತು ನಿಯಂತ್ರಣಕ್ಕೆ ಎದುರಾಗುವ ಪ್ರಸ್ತುತ ಸವಾಲುಗಳನ್ನು ಎದುರಿಸುತ್ತದೆ. ಅಷ್ಟೇ ಅಲ್ಲದೆ, ಇದು ವಿಮಾನದ ರೆಟ್ರೊಫಿಟ್ ಮತ್ತು ನಿರ್ವಹಣಾ ಅಗತ್ಯಗಳನ್ನು ಸರಳಗೊಳಿಸುವಾಗ ಇಂಧನ ಬಳಕೆ ಮತ್ತು ತೂಕವನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಓದು ಮುಗಿದ ಬಳಿಕ ಭಾರತಕ್ಕೆ ವಾಪಸ್ ಬರುತ್ತೇನೆ. ಅಲ್ಲಿ ಈಗಾಗಲೇ ಒಂದು ಪ್ರಾಜೆಕ್ಟ್ ಮೇಲೆ ಕೆಲಸ ಮಾಡುತ್ತಿದ್ದೇವೆ ಎಂದು ಸುಜಯ್ ಹೇಳಿದ್ದಾರೆ. ಬಳಿಕ ಅಶ್ವಿಜ್ ಅವರು ನಾವು ಈ ಐಡಿಯಾವನ್ನು ನಿಜವಾದ ವಿಮಾನದಲ್ಲಿ ಅಳವಡಿಸಿ ಪ್ರಯೋಗ ಮಾಡಲು ನಿರ್ಧರಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ವಿಮಾನ ತಯಾರಕರಾದ ಏರ್‌ಬಸ್ ಕಂಪನಿಯು 2008 ರಲ್ಲಿ ಫ್ಲೈ ಯುವರ್ ಐಡಿಯಾಸ್ ಕಾರ್ಯಕ್ರಮವನ್ನು ಪ್ರಾರಂಭಿಸಿತು. ವಿಶ್ವಾದ್ಯಂತ ವಿಶ್ವವಿದ್ಯಾಲಯಗಳು ಮತ್ತು ವಿದ್ಯಾರ್ಥಿಗಳ ವಿನೂತನ ಐಡಿಯಾಗಳನ್ನು ಗುರುತಿಸುವ ಉದ್ದೇಶದಿಂದ ಏರ್‌ಬಸ್ ಈ ಸ್ಪರ್ಧೆಯನ್ನು 2012 ರಿಂದ ವಿಶ್ವಸಂಸ್ಥೆಯ ಶೈಕ್ಷಣಿಕ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಯುನೆಸ್ಕೋದ ಸಹಭಾಗಿತ್ವದಲ್ಲಿ ನಡೆಸುತ್ತಾ ಬಂದಿದೆ.

ಈ ಸ್ಪರ್ಧೆಯನ್ನು ಆರಂಭಿಸಿದ ಬಳಿಕ ಇಲ್ಲಿಯವರೆಗೆ 700ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಮತ್ತು ವಿಶ್ವದಾದ್ಯಂತ 100 ದೇಶಗಳ 22 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *