ಜಮ್ಮು-ಕಾಶ್ಮೀರದಲ್ಲಿ ಇನ್ನೂ ಆರು ತಿಂಗಳು ರಾಷ್ಟ್ರಪತಿ ಆಳ್ವಿಕೆ ವಿಸ್ತರಣೆ

Public TV
1 Min Read

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಇನ್ನೂ ಆರು ತಿಂಗಳು ವಿಸ್ತರಿಸುವ ಮಹತ್ವದ ಪ್ರಸ್ತಾವವನ್ನು ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಮಂಡಿಸಿದ್ದಾರೆ.

ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ನೇತೃತ್ವದ ಸರ್ಕಾರವು ಕಳೆದ ಜೂನ್‍ನಲ್ಲಿ ಮುರಿದು ಬಿದ್ದಿತ್ತು. ಹೀಗಾಗಿ ಕಣಿವೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು. ಈ ಕಾಲಾವಧಿ ಜುಲೈ 3ರಂದು ಮುಕ್ತಾಯವಾಗಲಿದೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಜಮ್ಮು-ಕಾಶ್ಮೀರಕ್ಕೆ ಚುನಾವಣೆ ನಡೆಸುವುದು ಸೂಕ್ತವಲ್ಲ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ.

ಈ ನಿಟ್ಟಿನಲ್ಲಿ ಜಮ್ಮು-ಕಾಶ್ಮೀರದ ಮೇಲಿರುವ ರಾಷ್ಟ್ರಪತಿ ಆಳ್ವಿಕೆಯನ್ನು ಇನ್ನೂ ಆರು ತಿಂಗಳು ಮುಂದುವರಿಸುವ ಕುರಿತು ಪ್ರಸ್ತಾಪವನ್ನು ಅಧಿವೇಶನದಲ್ಲಿ ಅಮಿತ್ ಶಾ ಮಂಡಿಸಿದರು.

ಸದನಕ್ಕೆ ಮಾಹಿತಿ ನೀಡಿದ ಕೇಂದ್ರ ಗೃಹ ಸಚಿವರು, ಜಮ್ಮು-ಕಾಶ್ಮೀರದಲ್ಲಿ 15 ಸಾವಿರ ಬಂಕರ್ ಗಳನ್ನು ನಿರ್ಮಿಸಬೇಕಿದೆ. ಇದರಲ್ಲಿ ಈಗಾಗಲೇ 4,400 ಬಂಕರ್‍ಗಳು ನಿರ್ಮಾಣವಾಗಿವೆ. ರಾಷ್ಟ್ರಪತಿ ಆಡಳಿತವು ಬಹುಕಾಲ ಸ್ಥಗಿತಗೊಂಡಿದ್ದ ಕಾರ್ಯಗಳಿಗೆ ಅವಕಾಶ ಮಾಡಿಕೊಟ್ಟಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರವು ಕಣಿವೆ ರಾಜ್ಯದಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಸ್ಥಾಪಿಸುವಲ್ಲಿ ಶ್ರಮಿಸಿದೆ. ಕಳೆದ ಒಂದು ವರ್ಷದಲ್ಲಿ ಉಗ್ರರನ್ನು ಮಟ್ಟಹಾಕಿದೆ. ಆದರೂ ಚುನಾವಣೆಗೆ ಇದು ಸೂಕ್ತ ಸಮಯವಲ್ಲ. ಅದಕ್ಕೆ ಇನ್ನೂ 6 ತಿಂಗಳ ಕಾಲಾವಕಾಶ ಬೇಕಾಗಿದೆ. ಹೀಗಾಗಿ ರಾಷ್ಟ್ರಪತಿ ಆಳ್ವಿಕೆ ಮುಂದುವರಿಸುವ ಅಗತ್ಯತೆ ಇದೆ ಎಂದು ಮನವಿ ಮಾಡಿಕೊಂಡರು.

ಅಮಿತ್ ಶಾ ಅವರ ಪ್ರಸ್ತಾವಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತು. ಈ ಕುರಿತು ಮಾತನಾಡಿದ ಕಾಂಗ್ರೆಸ್ ನಾಯಕ ಮನೀಷ್ ತಿವಾರಿ ಅವರು, ಭಾರತವು ಜಾತ್ಯಾತೀತ ಸಂವಿಧಾನ ಹೊಂದಿರುವುದರಿಂದ ಜಮ್ಮು-ಕಾಶ್ಮೀರದ ಮುಸ್ಲಿಮರು ನಮ್ಮ ದೇಶದಲ್ಲಿ ಉಳಿಯಲು ನಿರ್ಧರಿಸಿದರು. ಅಲ್ಲಿನ ಪರಿಸ್ಥಿತಿ ಹದಗೆಡಲು ನೆರೆಯ ವೈರಿ ರಾಷ್ಟ್ರ ಪಾಕಿಸ್ತಾನ ಕಾರಣ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *