ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನೆಲೆ ತಿಳಿಯಿರಿ

Public TV
4 Min Read

ಜೂನ್ 21ರಂದು ಅಂತರಾಷ್ಟ್ರೀಯ ಯೋಗ ದಿನವಾಗಿದೆ. ಯೋಗ ಎಂಬುದು ಬರಿ ವಿದ್ಯೆಯಲ್ಲ. ಅದು ಭಾರತದಲ್ಲಿ ಹುಟ್ಟಿರುವ ಜಾಗತೀಕ ವಿದ್ಯೆಯಾಗಿದೆ. ಯೋಗದ ಮಹತ್ವವನ್ನು ಅರಿತ ವಿಶ್ವಸಂಸ್ಥೆ ಪ್ರತೀ ವರ್ಷದ ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಬೇಕೆಂದು ವಿಶ್ವ ಸಂಸ್ಥೆಯು ಘೋಷಿಸಿದೆ.

ಯೋಗ ದಿನದ ಅಂಗವಾಗಿ ಜಾರ್ಖಂಡ್ ರಾಜಧಾನಿ ರಾಂಚಿಯ ಪ್ರಭಾತ್ ತಾರಾ ಮೈದಾನ ನೂತನ ಇತಿಹಾಸ ದಾಖಲಿಸಲು ಸಜ್ಜಾದ್ದು, ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ರಾಂಚಿಯಲ್ಲಿ ಸಾವಿರಾರು ಜನರೊಂದಿಗೆ ಯೋಗ ಪ್ರದರ್ಶಿಸಿದ್ದಾರೆ. ರಾಂಚಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ನೀಡಿದ್ದಾರೆ.

ಯೋಗವು 6000 ವರ್ಷಕ್ಕೂ ಹಳೆಯದಾದ ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಕ ಅಭ್ಯಾಸವಾಗಿದೆ. ಪ್ರತಿವರ್ಷದ ಯೋಗದ ಆಚರಣೆಯು ಯೋಗ, ಧ್ಯಾನ, ಸಭೆಗಳು, ಚರ್ಚೆಗಳು, ಸಾಂಸ್ಕೃತಿಕ ಪ್ರದರ್ಶನಗಳು ಇತ್ಯಾದಿಗಳನ್ನು ಅಭ್ಯಸಿಸುವುದರ ಮೂಲಕ ಎಲ್ಲಾ ರಾಷ್ಟ್ರ್ರಗಳ ಜನರಿಂದ ಆಚರಿಸಲ್ಪಡುವ ದಿನವಾಗಿದೆ. 2014 ಸೆಪ್ಟೆಂಬರ್ ನಲ್ಲಿ ನಡೆದ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೊದಲ ಬಾರಿಗೆ ಯೋಗ ದಿನಾಚರಣೆಯನ್ನು ಆಚರಿಸುವ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪವನ್ನು ಮಂಡಿಸಿದ್ದರು.

ಯೋಗದ ಮಹತ್ವ
ಯೋಗ ವ್ಯಾಯಾಮ ಮಾತ್ರವಲ್ಲದೆ ನಿಮ್ಮೊಂದಿಗೆ, ವಿಶ್ವ ಹಾಗೂ ಪ್ರಕೃತಿಯ ಜೊತೆಗೆ ಏಕತೆಯ ಅರ್ಥವನ್ನು ಕಂಡುಹಿಡಿಯಲು ನೆರವಾಗುತ್ತದೆ. ನಮ್ಮ ಜೀವನಶೈಲಿ ಹಾಗೂ ಪ್ರಜ್ಞೆ ರಚಿಸುವ ಮೂಲಕ ಹಮಾಮಾನ ಬದಲಾವಣೆ ನಿಭಾಯಿಸಲು ಮತ್ತು ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಯೋಗವು ಮನಸ್ಸು ಮತ್ತು ದೇಹ, ಚಿಂತನೆ ಮತ್ತು ಕ್ರಿಯೆ, ಸಂಯಮ ಮತ್ತು ಸಾರ್ಥಕತೆಯನ್ನು ಒಗ್ಗೂಡಿಸುತ್ತದೆ. ಹಾಗೆಯೇ ಪ್ರಕೃತಿ ಮತ್ತು ಮನುಷ್ಯ ನಡುವೆ ಸಾಮರಸ್ಯವನ್ನುಂಟು ಮಾಡುತ್ತದೆ. ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮವಾಗಿರಿಸುವ ವಿಶೇಷ ಕಲೆಯಾಗಿದೆ.

ಇತಿಹಾಸ:
ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಕರಡು ಪ್ರಸ್ತಾವನೆಯನ್ನು 2014 ಡಿಸೆಂಬರ್ ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ಖಾಯಂ ಪ್ರತನಿಧಿಯಾಗಿರುವ ಅಶೋಕ್ ಕುಮಾರ್ ಮಂಡಿಸಿದ್ದರು. ವಿಶ್ವಸಂಸ್ಥೆಗೆ ಇದು ಐತಿಹಾಸಿಕ ಕ್ಷಣವಾಗಿದ್ದು, ಅದರ ಸದಸ್ಯ ರಾಷ್ಟ್ರಗಳು ಅಭೂತಪೂರ್ವ ಬೆಂಬಲ ಸೂಚಿಸಿದ್ದರು. ವಿಶ್ವ ಸಂಸ್ಥೆಯ 193 ರಾಷ್ಟ್ರಗಳ ಪೈಕಿ 177 ದೇಶಗಳು ಅನುಮೋದನೆಯನ್ನು ನೀಡಿದ್ದವು. 2015, ಜೂನ್ 21ನೇ ದಂದು ಮೊದಲ ಅಂತಾರಾಷ್ಟ್ರೀಯ ಯೋಗ ದಿನವನ್ನು ವಿಶ್ವಾದ್ಯಂತ ಆಚರಿಸಲಾಯಿತು.

ಜೂನ್21 ರಂದೇ ಯೋಗದಿನಾಚರಣೆ ಏಕೆ?
ವರ್ಷದಲ್ಲಿ ಉತ್ತರ ಗೋಳಾರ್ಧದ ಅತಿ ಉದ್ದದ ಹಾಗೂ ದಕ್ಷಿಣ ಗೋಳಾರ್ಧದ ಅತಿ ಚಿಕ್ಕ ದಿನವನ್ನು ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಆಯ್ಕೆ ಮಾಡಲಾಗಿದೆ. ಇದನ್ನು ಬೇಸಿಗೆ ಅಯನ ಸಂಕ್ರಾಂತಿ ದಿನವೆಂದು (ವರ್ಷದಲ್ಲಿನ ಅತ್ಯಂತ ಹೆಚ್ಚು ಹಗಲುಳ್ಳ ದಿನ) ಕರೆಯಲಾಗುತ್ತದೆ. ಯೋಗದ ದೃಷ್ಟಿಕೋನದಲ್ಲಿ ಇದು ಅತ್ಯಂತ ಹೆಚ್ಚು ಮಹತ್ವ ಪಡೆದಿದೆ. ಇದು ದಕ್ಷಿಣಯಾನಕ್ಕೆ ಪರಿವರ್ತನೆ ಎಂದು ಗುರುತಿಸಲಾಗುತ್ತದೆ.

ದಕ್ಷಿಣಯಾನವನ್ನು ಆಧ್ಯಾತ್ಮಿಕ ಅಭ್ಯಾಸಗಳಿಗೆ ನೈಸರ್ಗಿಕ ಬೆಂಬಲವೆಂದು ಪರಿಗಣಿಸಲಾಗುತ್ತದೆ. ಆದಿ ಕಾಲದಲ್ಲಿ ಸೂರ್ಯಾಭಿಮುಖವಾಗಿ ದೃಷ್ಟಿ ನೆಟ್ಟು ಧೀ ಶಕ್ತಿ ಉದ್ದೀಪನಗೊಳಿಸುತ್ತಿದ್ದ ದಿನ ಇದಾಗಿದೆ ಎಂದು ನಂಬಲಾಗಿದೆ. ಹಾಗಾಗಿ ಈ ಪರಿವರ್ತನೆಯು ಯೋಗ ಅಭ್ಯಾಸಿಗರಿಗೆ ಬೆಂಬಲಿಸಲಾಗುತ್ತದೆ ಎಂಬ ನಂಬಿಕೆಯಿದೆ. ಬೇಸಿಗೆ ಅಯನ ಸಂಕ್ರಾಂತಿಯ ಬಳಿಕ ಮೊದಲ ಹುಣ್ಣಿಮೆಯನ್ನು ಗುರು ಪೂರ್ಣಿಮಾ ಎಂದು ಕರೆಯಲಾಗುತ್ತದೆ.

ಜೂನ್ 21 ಉತ್ತರ ಗೋಳಾರ್ಧದ ವರ್ಷದ ಅತಿ ದೀರ್ಘವಾದ ದಿನವಾಗಿದೆ. ಪ್ರಧಾನಿ ಮೋದಿ ತಮ್ಮ ಹೇಳಿಕೆಯಲ್ಲಿ, ಭಾರತೀಯರಿಗೆ ಪ್ರಕೃತಿಗೆ ಗೌರವ ಸಲ್ಲಿಸುವುದು ಆಧ್ಯಾತ್ಮಿಕತೆಯ ಅವಿಭಾಜ್ಯ ಅಂಗವಾಗಿದೆ. ಹಾಗೆಯೇ ಪ್ರಕೃತಿಯ ಕೊಡುಗೆಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸುತ್ತೇವೆ ಎಂದು ಹೇಳಿದ್ದರು.

ಆಧ್ಯಾತ್ಮಿಕ ಹಿನ್ನೆಲೆ:
ಇವೆಲ್ಲದರ ಹೊರತಾಗಿ, ಶಿವ ದೇವರು ಈ ದಿನದಂದು ಉಳಿದ ಮಾನವ ಜನಾಂಗಕ್ಕೆ ಯೋಗದ ದಿನವನ್ನು ಉಪನ್ಯಾಸ ನೀಡಲು ಪ್ರಾರಂಭಿಸಿದನೆಂಬ ನಂಬಿಕೆಯಿದೆ. ಶಿವ ದೇವರು ಯೋಗದ ಆದಿ ಗುರುವಾದ ದಿನವೂ ಹೌದು. ಕೆಲವು ಇತಿಹಾಸಕಾರರು ಶಿವನನ್ನು ಯೋಗದ ಪಿತಾಮಹ ಎನ್ನುತ್ತಾರೆ. ಇನ್ನೂ ಕೆಲವರು ಪತಂಜಲಿ ಆಧುನಿಕ ಯೋಗದ ಪಿತಾಮಹ ಎಂದು ಹೇಳುತ್ತಾರೆ.

ಆಚರಣೆ:
2015 ಜೂನ್ 21ರಂದು ಮೊದಲ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಆಯುಷ್ ಸಚಿವಾಲಯದ ನೇತೃತ್ವದಲ್ಲಿ ಆ ದಿನವನ್ನು ರಾಜಪಥದಲ್ಲಿ ಭಾರೀ ವಿಜ್ರಂಭಣೆಯಿಂದ ಆಚರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಹಾಗೂ 84 ರಾಷ್ಟ್ರಗಳ ಗಣ್ಯರು ಭಾಗವಹಿಸಿದ ಕಾರ್ಯಕ್ರಮದಲ್ಲಿ 21 ಯೋಗ ಆಸನಗಳನ್ನು ಅಭ್ಯಸಿಸಲಾಯಿತು.

2015ರಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಸ್ಮರಣಾರ್ಥವಾಗಿ ಭಾರತೀಯ ರಿಸರ್ವ್ ಬ್ಯಾಂಕ್ 10 ರೂಪಾಯಿಯ ನಾಣ್ಯವನ್ನು ಬಿಡುಗಡೆಮಾಡಿತು.ರಾಜಪಥದಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯು ಎರಡು ಹೊಸ ಗಿನ್ನಿಸ್ ದಾಖಲೆಯನ್ನು ಸೃಷ್ಟಿಸಿತು. ಮೊದಲನೆಯದಾಗಿ ವಿಶ್ವದ ಅತಿ ದೊಡ್ಡ ಯೋಗ ಕ್ಲಾಸ್‍ನಲ್ಲಿ ದಾಖಲೆ ಸಂಖ್ಯೆಯ 35,985 ಮಂದಿ ಭಾಗವಹಿಸಿದ್ದರು. ಎರಡನೇಯದಾಗಿ ಗರಿಷ್ಠ ಸಂಖ್ಯೆಯ ರಾಷ್ಟ್ರೀಯತೆಯನ್ನು (84) ಹೊಂದಿರುವ ವ್ಯಕ್ತಿಗಳು ಭಾಗವಹಿಸಿದ್ದರು.

2017ರಲ್ಲಿ ಲಕ್ನೊದಲ್ಲಿ 51,000 ಸ್ಪರ್ಧಿಗಳೊಂದಿಗೆ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಇದೇ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ವಿಶ್ವದಾಖಲೆ ಬರೆದಿದೆ. ನಗರದ ರೇಸ್‍ಕೋರ್ಸ್ ಆವರಣದಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಸುಮಾರು 60 ಸಾವಿರ ಜನರು ಭಾಗವಹಿಸುವುದರ ಮೂಲಕ ದೇಶದಲ್ಲೇ ಬೃಹತ್ ಮಟ್ಟದ ಯೋಗ ದಿನಾಚರಣೆ ಅದಾಗಿತ್ತು.

[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

Share This Article
Leave a Comment

Leave a Reply

Your email address will not be published. Required fields are marked *