ಐಎಂಎ ‘ಚೋರ್’ಖಾನ್‍ಗೆ ಶಾಕ್- ಆಸ್ತಿ ಜಪ್ತಿಗೆ ಮುಂದಾದ ಎಸ್‍ಐಟಿ

Public TV
2 Min Read

ಬೆಂಗಳೂರು: ಐಎಂಎ ಜ್ಯುವೆಲ್ಸ್ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶಕ್ಕೆ ಎಸ್ಕೇಪ್ ಆಗಿರೋ ಸಂಸ್ಥೆಯ ಮಾಲೀಕ ಮನ್ಸೂರ್ ಖಾನ್ ಆಸ್ತಿಯನ್ನ ಮುಟ್ಟುಗೋಲು ಹಾಕಲು ಎಸ್‍ಐಟಿ(ವಿಶೇಷ ತನಿಖಾ ದಳ) ಮುಂದಾಗಿದೆ. ಐಎಂಎ ಸಂಸ್ಥೆಯಿಂದ ಸಾವಿರಾರು ಕೋಟಿ ವಂಚನೆಯಾಗಿರುವುದು ತನಿಖೆಯಲ್ಲಿ ಬಹಿರಂಗಗೊಂಡಿದೆ. ಸುಮಾರು 40 ಸಾವಿರಕ್ಕೂ ಹೆಚ್ಚು ಮಂದಿ ದೂರುಗಳನ್ನ ನೀಡಿ ನ್ಯಾಯ ಕೋರಿದ್ದಾರೆ.

ದೋಖಾ ಖಚಿತವಾದ ಹಿನ್ನೆಲೆಯಲ್ಲಿ ಮಹಾ ಮೋಸಗಾರ ಮನ್ಸೂರ್ ಮತ್ತವನ ಪಟಾಲಂ ವಿರುದ್ಧ ಕರ್ನಾಟಕ ಠೇವಣಿದಾರರ ಹಿತರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಕಂಪನಿ ಮಾಲೀಕನ ಸ್ಥಿರ ಹಾಗೂ ಚರಾಸ್ತಿಗಳ ಮುಟ್ಟುಗೊಲು ಹಾಕಿಕೊಳ್ಳಲು ಎಸ್‍ಐಟಿ ತಂಡ ನಿರ್ಧರಿಸಿದೆ. ಈಗಾಗಲೇ ಮನ್ಸೂರ್ ಸೇರಿದಂತೆ 7 ಜನ ನಿರ್ದೇಶಕರ 621 ಕೋಟಿ ಮೌಲ್ಯದ ಆಸ್ತಿ-ಪಾಸ್ತಿಯನ್ನು ಪತ್ತೆ ಹಚ್ಚಲಾಗಿದೆ. ಇನ್ನುಳಿದ ಆಸ್ತಿಗಾಗಿ ಹುಡುಕಾಟ ನಡೆಸಿದೆ.

ಈ ಸಂಬಂಧ ಎಸ್‍ಐಟಿ ತಂಡ ಇಂದು ಐಎಂಎ ಕಚೇರಿಯಲ್ಲಿ ಪರಿಶೀಲನೆ ನಡೆಸಲಿದೆ. ದಾಳಿ ವೇಳೆ ಪತ್ತೆಯಾದ ಮಹತ್ವದ ದಾಖಲೆ ಹಾಗೂ ಚಿನ್ನಾಭರಣಗಳ ಮೌಲ್ಯಮಾಪನ ನಡೆಯಲಿದೆ. ಮನ್ಸೂರ್ ಮಾಲೀಕತ್ವದ ಐಎಂಎ ಕಂಪನಿಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕೋರ್ಟ್ ಅನುಮತಿ ಅಗತ್ಯವಿದೆ. ಹೀಗಾಗಿ ಶೀಘ್ರವೇ ಎಸ್‍ಐಟಿ ಕೋರ್ಟ್ ಮೊರೆ ಹೋಗುವ ಸಾಧ್ಯತೆಗಳಿವೆ.

ಸರ್ಕಾರದ ನಡೆದ ಹೆಚ್.ಕೆ.ಪಾಟೀಲ್ ಗರಂ:
ಐಎಂಎ ಪ್ರಕರಣದಲ್ಲಿ ಸರ್ಕಾರ ಕೇವಲ ತನಿಖೆಯ ದಿಕ್ಕಿನಲ್ಲಿ ಸಾಗುತ್ತಿದೆ. ದೋಷರೋಪ ಪಟ್ಟಿ, ದಂಡನೆ ಮೂಲಕ ಹೂಡಿಕೆದಾರರಿಗೆ ನ್ಯಾಯ ಒದಗಿಸಲು ಆಗುತ್ತಾ? ಇದರಿಂದ ಏನೂ ಆಗಲ್ಲ. ನೊಂದವರ ಬದುಕು ಕಟ್ಟಿಕೊಡುವ ಕೆಲಸ ಆಗಬೇಕು ಎಂದು ಆಗ್ರಹಿಸಿದ್ದಾರೆ. ಸರ್ಕಾರದ ಕ್ರಮಗಳು ಏನೇನೂ ಸಾಲದು ಎಂದು ಕಾಂಗ್ರೆಸ್ ಮುಖಂಡ ಹೆಚ್.ಕೆ.ಪಾಟೀಲ್ ಅಸಮಾಧಾನ ಹೊರಹಾಕಿದ್ದಾರೆ.

ಪಾಟೀಲ್ ಬರೆದಿರುವ ಪತ್ರವನ್ನೇ ಬಿಜೆಪಿ ಅಸ್ತ್ರ ಮಾಡಿಕೊಂಡಿದೆ. ಇದು ಆಲಿಬಾಬಾ 40 ಕಳ್ಳರ ಸರ್ಕಾರ, ಐಎಂಎ ದೋಖಾ ಪ್ರಕರಣದಲ್ಲಿ ಜಮೀರ್ ಕೂಡ ಇದ್ದಾರೆ. ಕೂಡಲೇ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ. ಇದರಲ್ಲಿ ಸಿಎಂ ಕೈವಾಡವೂ ಇದೆ. ದೇವೇಗೌಡರೇಕೆ ಮೌನವಾಗಿದ್ದಾರೆ ಎಂದು ಬಿಜೆಪಿ ಮುಖಂಡ ಮಾಜಿ ಎಂಎಲ್‍ಸಿ ಅಶ್ವಥ್ ನಾರಾಯಣ್ ಪ್ರಶ್ನಿಸಿದ್ದಾರೆ. ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಐಎಂಎ ಪ್ರಕರಣದಲ್ಲಿ ಒಂದು ದೊಡ್ಡ ಜಾಲವೇ ಇದೆ. ಸಚಿವರು ಭಾಗಿಯಾದ ಆರೋಪಗಳಿವೆ. ಸಿಬಿಐ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *