ಚಿಕ್ಕಬಳ್ಳಾಪುರ: ಡಿವೈಡರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ರಾಣಿ ಕ್ರಾಸ್ ಬಳಿ ನಡೆದಿದೆ.
24 ವರ್ಷದ ಅನಂತ್ ಮೃತ ಬೈಕ್ ಸವಾರ. ಚಿಕ್ಕಬಳ್ಳಾಪುರ ನಗರದ ಪ್ರಖ್ಯಾತ ಜಿಎಸ್ ಖಾಸಗಿ ಆಸ್ಪತ್ರೆಯ ವೈದ್ಯ ಜಿ.ಎಸ್ ಸಿದ್ದಲಿಂಗಪ್ಪ ನವರ ಪುತ್ರ ಅನಂತ್. ಅಂದಹಾಗೆ ಚಿಕ್ಕಬಳ್ಳಾಪುರ ನಗರದಿಂದ ರಾಷ್ಟ್ರೀಯ ಹೆದ್ದಾರಿ 7ರ ಮುಖಾಂತರ ಬೆಂಗಳೂರಿಗೆ ತೆರಳುತ್ತಿದ್ದ ಅನಂತ್ ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾನೆ. ಅಪಘಾತಕ್ಕೆ ಟ್ರಾಫಿಕ್ ಪೊಲೀಸರ ಎಡವಟ್ಟು ಕಾರಣ ಎಂದು ಆರೋಪಿಸಲಾಗುತ್ತಿದೆ.
ಅಸಲಿಗೆ ಹೆದ್ದಾರಿ ಮಧ್ಯೆ ವಾಹನಗಳ ತಪಾಸಣೆ ನಡೆಸುತ್ತಿದ್ದ ಟ್ರಾಫಿಕ್ ಪೊಲೀಸರು ಕ್ಯಾಂಟರ್ ತಡೆದಿದ್ದಾರೆ. ಈ ವೇಳೆ ಕ್ಯಾಂಟರ್ ಚಾಲಕ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಲ್ಲಿ ಚಲಿಸುತ್ತಿದ್ದ ಬೈಕ್ ಸವಾರ ಕ್ಯಾಂಟರ್‌ಗೆ ಡಿಕ್ಕಿ ಹೊಡೆಯುವುದನ್ನ ತಪ್ಪಿಸಲು ಹೋಗಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.
ಅಪಘಾತದಲ್ಲಿ ಬೈಕ್ ಸವಾರ ಹೆಲ್ಮೆಟ್ ಧರಿಸಿದ್ದರೂ ಬಲವಾಗಿ ಡಿವೈಡರ್ ಗೆ ಡಿಕ್ಕಿಯಾದ ಪರಿಣಾಮ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈ ಸಂಬಂಧ ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.