ಯೋಗ್ಯತೆ ಇದ್ರೆ ಸರ್ಕಾರ ಮಾಡಿ, ಇಲ್ಲಾಂದ್ರೆ ಬಿಟ್ಟೋಗಿ- ಯಡಿಯೂರಪ್ಪ

Public TV
2 Min Read

– ನಮ್ಮ ಶಾಸಕರನ್ನು ಟಚ್ ಮಾಡೋಕು ಆಗಲ್ಲ

ಕೊಪ್ಪಳ: ನಮ್ಮ 105 ಶಾಸಕರ ಪೈಕಿ ಯಾರನ್ನೂ ಟಚ್ ಮಾಡಲೂ ಆಗಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನಕಗಿರಿ ಶಾಸಕ ಬಸವರಾಜ ದಡೇಸೂಗೂರ್ ನನ್ನ ಬಳಿ ಬಂದು ಮಾತನಾಡಿದ್ದಾರೆ. ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದರು.

ವಿಧಾನಸೌಧ ಖಾಲಿಯಾದಂತೆ, ಆಡಳಿತ ಯಂತ್ರ ಸ್ಥಗಿತವಾಗಿದೆ. ಸಿಎಂ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ. ಇದಕ್ಕೆ ನನ್ನ ವಿರೋಧವಿಲ್ಲ. ಆದರೆ ಬರಗಾಲದಲ್ಲಿ ನೀವು ಎಲ್ಲೂ ಹೋಗಿಲ್ಲ. ಈ ಹಿಂದೆ ನೀವು ಗ್ರಾಮ ವಾಸ್ತವ್ಯ ಮಾಡಿದ್ದ ಗ್ರಾಮದ ಸ್ಥಿತಿ ಹೇಗಿದೆ ನೋಡಿ ಎಂದು ತಿಳಿ ಹೇಳಿದರು.

ಜಿಂದಾಲ್ ಗೆ ಕಡಿಮೆ ಹಣದಲ್ಲಿ ಭೂಮಿ ನೀಡಲಾಗುತ್ತಿದೆ. ಬಿಜೆಪಿ ಹೋರಾಟದ ಬಳಿಕ ಜಿಂದಾಲ್ ಗೆ ಕಂಡೀಷನ್ ಹಾಕುತ್ತಿದ್ದಾರೆ. ಸಿಎಂಗೆ ಮಾನ ಮರ್ಯಾದೆ ಇದ್ದರೆ ಜಿಂದಾಲ್ ಗೆ ನೀಡಿದ ಭೂಮಿ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದ ಅವರು, ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜೂನ್ 13,14,15 ರಂದು ಬೆಂಗಳೂರಿನಲ್ಲಿ ಸತ್ಯಾಗ್ರಹ ಮಾಡಲು ತೀರ್ಮಾನ ಮಾಡಲಾಗಿದೆ ಎಂದರು.

ನಿಖಿಲ್ ಕುಮಾರಸ್ವಾಮಿ ಇನ್ನೊಂದು ಚುನಾವಣೆಗೆ ಸಿದ್ಧ ಎಂದು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ನಿಮಗೆ ಯೋಗ್ಯತೆ ಇದ್ದರೆ ಸರ್ಕಾರ ಮಾಡಿ. ಇಲ್ಲ ಬಿಟ್ಟು ಹೋಗಿ. ಅಪ್ಪ – ಮಗ ಆಡುವ ಆಟವನ್ನು ಕರ್ನಾಟಕದ ಜನ ಒಪ್ಪುವುದಿಲ್ಲ. ಒಂದೇ ವರ್ಷದಲ್ಲಿ ಚುನಾವಣೆ ಮಾಡಲು ಬಿಡುವುದಿಲ್ಲ. ಸಾಮಾನ್ಯ ಜನ ವೆಸ್ಟ್ ಎಂಡ್ ಹೋಟೆಲ್‍ಗೆ ಹೋಗಲು ಆಗುವುದಿಲ್ಲ. ಸರ್ಕಾರ ಎಲ್ಲಿ ಬದುಕಿದೆ ಎಂದು ಇದೇ ವೇಳೆ ಬಿಎಸ್‍ವೈ ಪ್ರಶ್ನಿಸಿದರು.

ಯಡಿಯೂರಪ್ಪ ಅವರು ಬರಪೀಡಿತ ಜಿಲ್ಲೆಗಳ ಪ್ರವಾಸ ಹಮ್ಮಿಕೊಂಡಿದ್ದು, ಕೊಪ್ಪಳ ತಾಲೂಕಿನ ಇರಕಲಗಡ್ ಗ್ರಾಮದ ಗೋಶಾಲೆಗೆ ದಿಢೀರ್ ಭೇಟಿ ಕೊಟ್ಟರು. ಬಾಗಲಕೋಟೆ ಜಿಲ್ಲೆಯ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಕೊಪ್ಪಳಕ್ಕೆ ಆಗಮಿಸುತ್ತಿದ್ದ ಮಾರ್ಗ ಮಧ್ಯೆ ಇರಕಲಗಡ್ ಗ್ರಾಮದ ಗೋಶಾಲೆಗೂ ಭೇಟಿ ನೀಡಿದರು. ಈ ವೇಳೆ ಯಡಿಯೂರಪ್ಪಗೆ ಮಾಜಿ ಸಚಿವರಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಸಂಸದ ಕರಡಿ ಸಂಗಣ್ಣ, ಶಾಸಕ ಪರಣ್ಣ ಮುನವಳ್ಳಿ ಸಾಥ್ ನೀಡಿದರು.

ಯಡಿಯೂರಪ್ಪ ಗೋಶಾಲೆಯಲ್ಲಿನ ಸೌಲಭ್ಯಗಳ ಕುರಿತು ರೈತರು, ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಈ ವೇಳೆ ಬರ ಹಾಗೂ ಗೋ ಶಾಲೆಯಲ್ಲಿನ ಸಮಸ್ಯೆಗಳ ಬಗ್ಗೆ ಯಡಿಯೂರಪ್ಪ ಮುಂದೆ ರೈತರು ಅಳಲು ತೋಡಿಕೊಂಡರು.

Share This Article
Leave a Comment

Leave a Reply

Your email address will not be published. Required fields are marked *