ಸಾರ್ವಜನಿಕರಲ್ಲಿ ವಿನಂತಿ: ಸೆನ್ಸಾರ್ ಮುಗಿಸಿಕೊಂಡು ಥೇಟರಿಗೆ ಬರಲು ರೆಡಿ!

Public TV
1 Min Read

ಬೆಂಗಳೂರು: ಟೀಸರ್ ಮೂಲಕವೇ ವ್ಯಾಪಕ ಚರ್ಚೆ, ಕುತೂಹಲ ಹುಟ್ಟು ಹಾಕಿರೋ ಚಿತ್ರ `ಸಾರ್ವಜನಿಕರಲ್ಲಿ ವಿನಂತಿ’. ಯಾವ ಸದ್ದುಗದ್ದಲವೂ ಇಲ್ಲದೇ ಚಿತ್ರೀಕರಣ ಮುಗಿಸಿಕೊಂಡು ಆ ನಂತರ ಕೆಲಸ ಕಾರ್ಯಗಳ ಮೂಲಕವೇ ಸೆನ್ಸೇಷನ್ ಕ್ರಿಯೇಟ್ ಮಾಡುತ್ತವಲ್ಲಾ? ಅಂಥಾ ಚಿತ್ರಗಳನ್ನು ಪ್ರೇಕ್ಷಕರು ಗಂಭೀರವಾಗಿ ಪರಿಗಣಿಸುತ್ತಾರೆ. ಈ ವೆರೈಟಿಯ ಚಿತ್ರಗಳಿಗೆ ಗೆಲುವು ಗ್ಯಾರೆಂಟಿ ಎಂಬಂಥಾ ನಂಬಿಕೆಯೂ ಇದೆ. ಇಂಥಾ ನಂಬಿಕೆ ಹುಟ್ಟು ಹಾಕಿರೋ ಸಾರ್ವಜನಿಕರಲ್ಲಿ ವಿನಂತಿ ಸೆನ್ಸಾರ್ ಮುಗಿಸಿಕೊಂಡು ಥೇಟರಿನತ್ತ ಮುಖ ಮಾಡಿದೆ.

ಕೃಪಾ ಸಾಗರ್ ನಿರ್ದೇಶನದ ಈ ಚಿತ್ರಕ್ಕೆ ಸೆನ್ಸಾರ್ ಕಡೆಯಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಇದೇ ಖುಷಿಯಲ್ಲಿ ಚಿತ್ರತಂಡ ಬಿಡುಗಡೆಯ ದಿನಾಂಕವನ್ನೂ ಘೋಷಿಸಿದೆ. ಈ ನಿಟ್ಟಿನಲ್ಲಿ ಹೇಳೋದಾದರೆ ಇದೇ ತಿಂಗಳ 21ರಂದು ತೆರೆಗಾಣಲಿದೆ.

ಈಗಾಗಲೇ ಒಂದಷ್ಟು ವರ್ಷಗಳಿಂದ ಯೋಗರಾಜ ಭಟ್ ಸೇರಿದಂತೆ ಅನೇಕ ನಿರ್ದೇಶಕರ ಗರಡಿಯಲ್ಲಿ ಪಳಗಿಕೊಂಡಿರುವವರು ಕೃಪಾ ಸಾಗರ್. ಈ ಅವಧಿಯ ತುಂಬಾ ಪ್ರೇಕ್ಷಕರ ನಾಡಿ ಮಿಡಿತವನ್ನು ಅರ್ಥ ಮಾಡಿಕೊಂಡಿರೋ ಅವರು ಸಾಮಾಜಿಕ ಕಾಳಜಿ ಇರೋ ಕಥಾ ಹಂದರವನ್ನು ಈ ಮೂಲಕ ಪಕ್ಕಾ ಕಮರ್ಶಿಯಲ್ ವೇನಲ್ಲಿ ಹೇಳಿದ್ದಾರಂತೆ.

ಈ ಚಿತ್ರದಲ್ಲಿ ಮದನ್ ರಾಜ್ ಮತ್ತು ಅಮೃತಾ ನಾಯಕ ನಾಯಕಿಯರಾಗಿ ನಟಿಸಿದ್ದಾರೆ. ಮಂಡ್ಯ ರಮೇಶ್, ರಮೇಶ್ ಪಂಡಿತ್ ಮುಂತಾದವರ ಅದ್ಧೂರಿ ತಾರಾಗಣ ಈ ಚಿತ್ರಕ್ಕಿದೆ. ಈ ಸಮಾಜದಲ್ಲಿ ಮೇಲು ನೋಟಕ್ಕೆ ಗೊತ್ತಾಗುವಂಥಾ ಅದೆಷ್ಟೋ ಬಗೆಯ ಅಪರಾಧ ಪ್ರಕರಣಗಳಿವೆ. ಆದರೆ ನಮ್ಮೆಲ್ಲರ ಬೆನ್ನ ಹಿಂದೆ ನಡೆಯೋ ನಿಗೂಢ ಕ್ರೈಮುಗಳದ್ದೊಂದು ಜಗತ್ತಿದೆ. ಅಂಥಾ ವಿರಳ ಸನ್ನಿವೇಶಗಳನ್ನು ಸೇರಿಸಿಕೊಂಡು ಸಾರ್ವಜನಿಕರೆಲ್ಲ ಗಮನಹರಿಸಲೇ ಬೇಕಾದ ಕಥೆಯನ್ನು ಥ್ರಿಲ್ಲರ್ ಶೈಲಿಯಲ್ಲಿ ಹೇಳಲಾಗಿದೆಯಂತೆ.

Share This Article
Leave a Comment

Leave a Reply

Your email address will not be published. Required fields are marked *