ಕೋಲಾರ: ಎರಡು ಕುಟುಂಬಗಳ ನಡುವೆ ಗಲಾಟೆಗೆ ಕಾರಣವಾಗಿದ್ದ ಅಪ್ರಾಪ್ತ ಪ್ರೇಮಿಗಳಿಬ್ಬ ಪ್ರೇಮ್ ಕಹಾನಿಯೊಂದು ಬಾಲಕಿಯ ಆತ್ಮಹತ್ಯೆಯಲ್ಲಿ ಅಂತ್ಯವಾಗಿದೆ.
ಶ್ರೀನಿವಾಸಪುರ ತಾಲೂಕಿನ ಶಿವಪುರ ಗ್ರಾಮದ ಶ್ರೀವಾಣಿ (15) ಆತ್ಮಹತ್ಯೆಗೆ ಶರಣಾದ ಬಾಲಕಿ. ಶ್ರೀವಾಣಿ ಇಂದು ಮನೆಯಲ್ಲಿ ಯಾರು ಇಲ್ಲದಿದ್ದಾಗ ನೇಣು ಹಾಕಿಕೊಂಡು ಪ್ರಾಣ ಬಿಟ್ಟದ್ದಾಳೆ. ಬಾಲಕಿಯ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಶಿವಪುರ ಗ್ರಾಮದ 17 ವರ್ಷದ ಬಾಲಕ ತನ್ನನ್ನು ಪ್ರೀತಿಸುವಂತೆ ಶ್ರೀವಾಣಿಗೆ ಒತ್ತಾಯಿಸುತ್ತಿದ್ದ. ಪ್ರೀತಿಯ ವಿಚಾರವಾಗಿ ಬಾಲಕ 5 ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಪ್ರೀತಿ ವಿಚಾರವಾಗಿ ಬಾಲಕ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ತಿಳಿಸಿದ ಪೋಷಕರು, ಶ್ರೀವಾಣಿ ಕುಟುಂಬದವರ ಜೊತೆಗೆ ಗಲಾಟೆ ಮಾಡಿದ್ದರು. ಇದರಿಂದ ಮನನೊಂದ ಬಾಲಕಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶ್ರೀವಾಣಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಶ್ರೀವಾಣಿ ಆತ್ಮಹತ್ಯೆಯಿಂದ ಆಕ್ರೋಶಗೊಂಡ ಪೋಷಕರು ಬಾಲಕನ ಮನೆಯವರ ಮೇಲೆ ದಾಳಿ ಮಾಡಿದ್ದಾರೆ. ಸ್ಥಳಕ್ಕೆ ಶ್ರೀನಿವಾಸಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.