ಆನೆಗಳನ್ನು ಹತ್ಯೆ ಮಾಡಬಹುದು – ಬೇಟೆ ನಿಷೇಧ ಹಿಂಪಡೆದ ಬೋಟ್ಸ್ವಾನ ಸರ್ಕಾರ

Public TV
2 Min Read

ಬೋಟ್ಸ್ವಾನ: ನಮ್ಮ ದೇಶದಲ್ಲಿ ಆನೆಯನ್ನು ಹತ್ಯೆ ಮಾಡಿದರೆ ಅದು ಅಪರಾಧ. ಆದರೆ ಆಫ್ರಿಕಾ ಖಂಡದಲ್ಲಿರುವ ಬೋಟ್ಸ್ವಾನ ಸರ್ಕಾರ ಆನೆ ಬೇಟೆ ಮೇಲೆ ಹೇರಿದ್ದ ನಿಷೇಧವನ್ನು ಹಿಂದಕ್ಕೆ ಪಡೆದಿದೆ.

ಬೋಟ್ಸ್ವಾನಲ್ಲಿ ಆನೆಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಹೀಗಾಗಿ “ಮಾನವ-ಆನೆ ಸಂಘರ್ಷ” ಉಂಟಾಗುತ್ತದೆ ಎಂದು ಅರಿತ ಸರ್ಕಾರವು ಬೇಟೆಯ ಮೇಲಿದ್ದ ನಿಷೇಧವನ್ನು ಹಿಂಪಡೆಯುವ ತೀರ್ಮಾನ ಕೈಗೊಂಡಿದೆ.

ಸಂಪ್ರದಾಯವಾದಿಗಳು ಈ ಕ್ರಮವನ್ನು ಟೀಕಿಸಿದ್ದಾರೆ. ಈ ನಿರ್ಧಾರವು ಅಭಿವೃದ್ಧಿ ಹೊಂದುತ್ತಿರುವ ವನ್ಯಜೀವಿ ಚಾಲಿತ ಪ್ರವಾಸೋದ್ಯಮದ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಬೋಟ್ಸ್ವಾನ ದೇಶವು ವಿಶ್ವದ ಅತಿದೊಡ್ಡ ಆನೆಗಳ ಸಂಖ್ಯೆಯ ನೆಲೆಯಾಗಿದೆ. ಸುಮಾರು 1,30,000 ಆನೆಗಳಿದ್ದು ವಜ್ರ ಉದ್ಯಮದ ನಂತರ, ಪ್ರವಾಸೋದ್ಯಮವು ಬೋಟ್ಸ್ವಾನದ ಅತಿದೊಡ್ಡ ವಿದೇಶಿ ಆದಾಯದ ಮೂಲವಾಗಿದೆ.

2014ರಲ್ಲಿ ಆಡಳಿತದಲ್ಲಿದ್ದ ಬೋಟ್ಸ್ವಾನದ ಅಧ್ಯಕ್ಷ ಇಯಾನ್ ಖಮಾ ಅವರು ಆನೆಗಳ ಬೇಟೆಯ ಮೇಲೆ ನಿಷೇಧ ಜಾರಿಗೆ ತಂದಿದ್ದರು. ಆದರೆ ಈ ನಿಷೇಧವು ವಿವಾದಕ್ಕೆ ಕಾರಣವಾಗಿತ್ತು. ಬೇಟೆಯ ಮೇಲೆ ನಿಷೇಧ ಜಾರಿಯಾಗಿದ್ದರಿಂದ ಆನೆಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಂಡಿತು. ಇದರಿಂದಾಗಿ ಜನ ಜೀವನೋಪಾಯದ ಮೇಲೆ ಪ್ರಭಾವ ಬೀರಿತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಮೊಕ್ವೆವೀಟಿ ಇ.ಕೆ. ಮಸಿಸಿ ಅವರು 2018ರಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಆನೆಗಳ ಬೇಟೆಯ ಮೇಲಿದ್ದ ನಿಷೇಧವನ್ನು ಕೈಬಿಡುವ ಕುರಿತು ಸಮಿತಿಯನ್ನು ಸ್ಥಾಪಿಸಿದರು.

ಆನೆಗಳ ಸಂಖ್ಯೆಯ ಹೆಚ್ಚಳವು ಮಾನವ-ಆನೆ ಸಂಘರ್ಷ ಮತ್ತು ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತಿದೆ. ಈ ಸಂಬಂಧ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಪ್ರವಾಸೋದ್ಯಮವು ಸಮಿತಿಗೆ ಮಾಹಿತಿ ನೀಡಿದೆ ಎಂದು ಬೋಟ್ಸ್ವಾನ ಪರಿಸರ ಸಚಿವಾಲಯವು ಇಂದು ಹೇಳಿಕೆ ನೀಡಿದೆ.

ಬೇಟೆಯ ಮೇಲಿನ ನಿಷೇಧವನ್ನು ತೆಗೆದುಹಾಕಬೇಕು ಎಂಬ ನಿರ್ಧಾರಕ್ಕೆ ಸಮಿತಿಯಿಂದ ಒಮ್ಮತ ಸಿಕ್ಕಿದೆ ಎಂದು ಸಚಿವಾಲಯ ತಿಳಿಸಿದೆ.

ಬೊಟ್ಸ್ವಾನ ಸಂಸತ್ ಚುನಾವಣೆಯು ಇದೇ ವರ್ಷ ಅಕ್ಟೋಬರ್ ನಲ್ಲಿ ನಡೆಯಲಿದೆ. ಹೀಗಾಗಿ ಆನೆಗಳ ಬೇಟೆ ನಿಷೇಧವು ಪ್ರಚಾರದ ಅಸ್ತ್ರವಾಗಲಿದೆ. ಆನೆಗಳ ಸಂಖ್ಯೆಯು ಹೆಚ್ಚಾಗಿ ಗ್ರಾಮೀಣ ಭಾಗದಲ್ಲಿ ಇರುವುದರಿಂದ ಅಲ್ಲಿನ ಮತದಾರರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವುದು ಭಾರೀ ಚರ್ಚೆಯಾಗುತ್ತಿದೆ.

ಬೋಟ್ಸ್ವಾನದ ಅಧ್ಯಕ್ಷ ಮಸಿಸಿ ಅವರು ಅನೇಕ ವಿವಾದಗಳಿಗೆ ಗುರಿಯಾಗಿದ್ದಾರೆ. ಈ ತಿಂಗಳ ಆರಂಭದಲ್ಲಿ ಜಿಂಬಾಬ್ವೆ, ಜಾಂಬಿಯಾ ಮತ್ತು ನಮೀಬಿಯಾದ ನಾಯಕರು ಬೋಟ್ಸ್ವಾನಾಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅಧ್ಯಕ್ಷರು ಆನೆಯ ಪಾದಗಳಿಂದ ತಯಾರಿಸಿದ ಕೋಲುಗಳನ್ನು ಉಡುಗೊರೆಯಾಗಿ ನೀಡಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *