ದರ್ಶನ್ ಜೊತೆ ನಟಿಸಿದ್ದ ನಟಿ ಈಗ ಸಂಸದೆ

Public TV
1 Min Read

ಮುಂಬೈ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ನಟಿಸಿದ್ದ ನಾಯಕಿಯೊಬ್ಬರು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆದ್ದು, ಮಹಾರಾಷ್ಟ್ರದ ಅಮರಾವತಿಯ ನೂತನ ಸಂಸದೆಯಾಗಿ ಆಯ್ಕೆಯಾಗಿದ್ದಾರೆ.

`ದರ್ಶನ್’ ಚಿತ್ರದಲ್ಲಿ ನಟಿಸಿದ್ದ ನಟಿ ನವನೀತ್ ಕೌರ್ ರಾಣಾ(34) ಇದೀಗ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಯುವ ಸ್ವಾಭಿಮಾನ ಪಕ್ಷದ(ವೈಎಸ್‍ಪಿ) ಅಭ್ಯರ್ಥಿಯಾಗಿ ಮಹಾರಾಷ್ಟ್ರದ ಅಮರಾವತಿ ಕ್ಷೇತ್ರದಲ್ಲಿ ನವನೀತ್ ಅವರು ಶಿವಸೇನೆಯ ಆನಂದ್‍ರಾವ್ ಅದ್ಸಲ್ ವಿರುದ್ಧ ಸ್ಪರ್ಧಿಸಿದ್ದರು. 2 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಆನಂದ್ ರಾವ್ ಅವರನ್ನು ಈ ಬಾರಿ 37,295 ಮತಗಳಿಂದ ಸೋಲಿಸಿ ಅಚ್ಚರಿಯ ರೀತಿಯಲ್ಲಿ ನವನೀತ್ ಗೆಲುವು ಸಾಧಿಸಿದ್ದಾರೆ.

ನವನೀತ್ ಅವರ ಪತಿ ರವಿ ರಾಣಾ ಅಮರಾವತಿ ಕ್ಷೇತ್ರದಲ್ಲಿ ವಿಧಾನಸಭಾ ಸದಸ್ಯರಾಗಿದ್ದು, ಅವರೇ ಸ್ಥಾಪಿಸಿರುವ ವೈಎಸ್‍ಪಿ ಪಕ್ಷದಿಂದ 2014ರ ಚುನಾವಣೆಯಲ್ಲಿ ಕೂಡಾ ನವನೀತ್ ಸ್ಪರ್ಧಿಸಿದ್ದರು. ಆಗ ಬರೋಬ್ಬರಿ 1.36 ಲಕ್ಷ ಮತಗಳ ಅಂತರದಿಂದ ಆನಂದ್‍ರಾವ್ ಅವರ ವಿರುದ್ಧವೇ ಸೋತಿದ್ದರು.

ಈ ಬಾರಿ ಕಾಂಗ್ರೆಸ್ ಮತ್ತು ವೈಎಸ್‍ಪಿ ಮೈತ್ರಿಕೂಟದ ಬೆಂಬಲದೊಂದಿಗೆ ನವನೀತ್ ಕಣಕ್ಕೆ ಇಳಿದು ಭರ್ಜರಿ ಜಯ ಗಳಿಸಿದ್ದಾರೆ. ಅಲ್ಲದೆ ಈ ಮೈತ್ರಿಕೂಟದಲ್ಲಿ ಗೆದ್ದ ಏಕೈಕ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ನವನೀತ್ ಪಾತ್ರರಾಗಿದ್ದಾರೆ. ನವನೀತ್ ಕೌರ್ ಅವರಿಗೆ 5,07,844 ಮತಗಳು ಬಿದ್ದಿದ್ದರೆ, ಆನಂದ್ ರಾವ್ ಅವರಿಗೆ 4,70,549 ಮತಗಳು ಬಿದ್ದಿದೆ. ಚುನಾವಣಾ ಕಣದಲ್ಲಿ 25 ಮಂದಿ ಸ್ಪರ್ಧಿಸಿದ್ದರು.

ಮುಂಬೈನಲ್ಲಿ ಜನಿಸಿದ ನವನೀತ್ ಕೌರ್ ತಂದೆ-ತಾಯಿ ಪಂಜಾಬ್ ಮೂಲದವರಾಗಿದ್ದು, ತಂದೆ ಸೇನಾಧಿಕಾರಿಯಾಗಿದ್ದರು. ಪಿಯುಸಿ ಅಧ್ಯಯನ ಅರ್ಧಕ್ಕೆ ಕೈಬಿಟ್ಟಿದ್ದ ನವನೀತ್ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಬಳಿಕ ಚಿತ್ರರಂಗ ಪ್ರವೇಶಿಸಿ ಅವರು, ಕನ್ನಡ, ತೆಲುಗು, ಮಲೆಯಾಳಿ, ಹಿಂದಿ ಹಾಗು ಪಂಜಾಬಿ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದರು.

https://www.youtube.com/watch?v=wqLMb0A_FsY

Share This Article
Leave a Comment

Leave a Reply

Your email address will not be published. Required fields are marked *