ಬಳ್ಳಾರಿ: ರಾಯಚೂರು, ಬಳ್ಳಾರಿ, ಕೊಪ್ಪಳ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಶಾಸಕ ಭೀಮಾ ನಾಯಕ್ ಆಯ್ಕೆಯಾಗಿದ್ದಾರೆ. ಮೊದಲ ಅವಧಿಗೆ ನಡೆದ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿದ ಶಾಸಕ ಭೀಮಾ ನಾಯಕ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶಿವಪ್ಪ ವಾದಿ ಮಾತ್ರ ನಾಮಪತ್ರ ಸಲ್ಲಿಸಿದ್ದ ಪರಿಣಾಮ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ರಾಬಾಕೋ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮಾತನಾಡಿದ ಶಾಸಕ ಭೀಮಾ ನಾಯಕ್, ನಾನು ಅತೃಪ್ತ ಶಾಸಕರ ಗುಂಪಿನಲ್ಲಿ ಇಲ್ಲ. ನಾನು ಸಚಿವ ಸ್ಥಾನಕ್ಕೆ ಬೇಡಿಕೆಯಿಟ್ಟ ವೇಳೆ ಹಿರಿಯರು ಮನವೊಲಿಸಿ ನಿಗಮ ಮಂಡಳಿ ಸ್ಥಾನ ನೀಡಿದ್ದಾರೆ. ಅಲ್ಲದೇ ರಾಜ್ಯದಲ್ಲಿ ಐದು ವರ್ಷ ಮೈತ್ರಿ ಸರ್ಕಾರ ಸುಭದ್ರವಾಗಿ ಇರಲಿದೆ. ಪಾರ್ಲಿಮೆಂಟ್ ಚುನಾವಣೆ ರಾಜ್ಯ ಸರ್ಕಾರದ ಮೇಲೆ ಪರಿಣಾಮ ಬೀರಲ್ಲ, ರಾಹುಲ್ ಗಾಂಧಿಯವರೇ ಎಐಸಿಸಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆಂದರು.
ಈ ಹಿಂದೆ ಕಾಂಗ್ರೆಸ್ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರೊಂದಿಗೆ ಆತೃಪ್ತ ಶಾಸಕರ ಪಟ್ಟಿಯಲ್ಲಿ ಭೀಮಾ ನಾಯಕ್ ಗುರುತಿಸಿಕೊಂಡಿದ್ದರು. ಆದರೆ ಆ ಬಳಿಕ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ಕಾಂಗ್ರೆಸ್ ಪಕ್ಷದ ನಾಯಕರ ಮನವೊಲಿಕೆ ಪರಿಣಾಮ ಪಕ್ಷ ಬಿಡುವ ನಿರ್ಧಾರವನ್ನು ಕೈಬಿಟ್ಟಿದ್ದರು. ಆ ವೇಳೆ ಬಿಜೆಪಿ ನಾಯಕರು ತಮ್ಮನ್ನು ಸಂಪರ್ಕ ಮಾಡಿದ್ದನ್ನು ಒಪ್ಪಿಕೊಂಡಿದ್ದರು. ಆದರೆ ಸಿದ್ದರಾಮಯ್ಯ ಅವರು ನಮ್ಮ ನಾಯಕರಾಗಿದ್ದು, ಯಾವುದೇ ಕಾರಣಕ್ಕೂ ಪಕ್ಷ ತೊರೆಯುವ ನಿರ್ಧಾರ ಇಲ್ಲ. ಲೋಕಸಭಾ ಚುನಾವಣೆ ಬಳಿಕ ಮತ್ತೆ ಆಪರೇಷನ್ ಕಮಲ ಮಾತು ಕೇಳಿ ಬಂದ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಶಾಸಕರು ಸ್ಪಷ್ಟನೆ ನೀಡಿದ್ದಾರೆ.