ಗ್ರಾಮವನ್ನು ದತ್ತು ಪಡೆದು ಅಭಿವೃದ್ಧಿಗೆ ಮುಂದಾದ ಕಾಲೇಜು ವಿದ್ಯಾರ್ಥಿಗಳು

Public TV
1 Min Read

ಬಳ್ಳಾರಿ: ಸರ್ಕಾರ, ರಾಜಕಾರಣಿಗಳು, ಶ್ರೀಮಂತ ದಾನಿಗಳು ಸಾಮಾನ್ಯವಾಗಿ ಹಳ್ಳಿಗಳನ್ನು ದತ್ತು ಪಡೆಯುತ್ತಾರೆ. ಆದರೆ ಬಳ್ಳಾರಿ ಜಿಲ್ಲೆಯ ಜಾನೆಕುಂಟೆ ಗ್ರಾಮವನ್ನು ಕಾಲೇಜು ವಿದ್ಯಾರ್ಥಿಗಳು ದತ್ತು ಪಡೆದು ಅಭಿವೃದ್ಧಿಗೆ ಮುಂದಾಗಿದ್ದಾರೆ.

ಬಳ್ಳಾರಿಯ ಆರ್ ವೈಎಂಇಸಿ ಎಂಜಿನಿಯರ್ ಕಾಲೇಜಿನ ವಿದ್ಯಾರ್ಥಿಗಳು ಪ್ರತಿ ವರ್ಷ ಗಿಡ ನೆಟ್ಟು ಸ್ವಚ್ಚತಾ ಅಭಿಯಾನ ಮಾಡುತ್ತಿದ್ದರು. ಈ ಕಾಲೇಜಿನ ವಿದ್ಯಾರ್ಥಿಗಳು ಈ ಬಾರಿ ಬಳ್ಳಾರಿ ಪಕ್ಕದಲ್ಲಿರುವ ಅಭಿವೃದ್ಧಿ ಕಾಣದ ಜಾನೆಕುಂಟೆ ಗ್ರಾಮವನ್ನು ದತ್ತು ಪಡೆದು ಅಭಿವೃದ್ಧಿಗೆ ಮುಂದಾಗಿದ್ದಾರೆ.

ಸುಮಾರು 350 ಮನೆಗಳಿರುವ ಜಾನೆಕುಂಟೆ ಗ್ರಾಮದಲ್ಲಿ ಮೂಲಸೌಕರ್ಯ ಸೇರಿದಂತೆ ಶಾಲೆ ಮತ್ತು ಅಂಗನವಾಡಿಯನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ವಿದ್ಯಾರ್ಥಿಗಳು ಹೊಂದಿದ್ದಾರೆ. ಮೊದಲ ಹಂತದಲ್ಲಿ ಜನರಲ್ಲಿ ಜಾಗೃತಿ ಜೊತೆಗೆ ಅರ್ಧಕ್ಕೆ ನಿಂತಿರುವ ಅಂಗನವಾಡಿ ಕಟ್ಟಡವನ್ನು ನಿರ್ಮಾಣ ಮಾಡಲು ವಿದ್ಯಾರ್ಥಿಗಳು ಮುಂದಾಗಿದ್ದಾರೆ.

ವಿದ್ಯಾರ್ಥಿಗಳ ಕೆಲಸಕ್ಕೆ ಉಪನ್ಯಾಸಕರು ಮತ್ತು ಕಾಲೇಜು ಆಡಳಿತ ಮಂಡಳಿ ಸಹ ಸಾಥ್ ನೀಡಿದೆ. ಈ ಗ್ರಾಮವೂ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬಂದರೂ ರಸ್ತೆಗಳು, ಮೂಲಭೂತ ಸೌಲಭ್ಯಗಳು ಕಲ್ಪಿಸುವುದಕ್ಕೆ ಕಾಲೇಜಿನ ವಿದ್ಯಾರ್ಥಿಗಳು ಪಂಚಾಯ್ತಿ ಜೊತೆಗೆ ಕೈ ಜೋಡಿಸಿ ಜನರಿಗೆ ಅರಿವು ಮೂಡಿಸವುದರ ಜೊತೆಗೆ ಅಭಿವೃದ್ಧಿಗೆ ಮುಂದಾಗಿದ್ದಾರೆ.

ವಿದ್ಯಾರ್ಥಿಗಳು ಜಾನೆಕುಂಟೆ ಗ್ರಾಮದ ಅಭಿವೃದ್ಧಿಗಾಗಿ ಗ್ರಾಮವನ್ನು ದತ್ತು ಪಡೆದ ನಂತರ ಗ್ರಾಮದ ಅಭಿವೃದ್ಧಿಗಾಗಿ ಕಾಲೇಜು ಆಡಳಿತ ಮಂಡಳಿ ಸೇರಿದಂತೆ ಗ್ರಾಮದ ಮುಖಂಡರು ಕೂಡ ಹಣಕಾಸಿನ ನೇರವು ನೀಡಿದ್ದಾರೆ. ಅಲ್ಲದೇ, ಮೊದಲ ಬಾರಿಗೆ ಇಂತಹದ್ದೊಂದು ಪ್ರಯತ್ನಕ್ಕೆ ವಿದ್ಯಾರ್ಥಿಗಳೊಂದಿಗೆ ಕಾಲೇಜು ಆಡಳಿತ ಮಂಡಳಿ ಕೈ ಹಾಕಿದ್ದು ವಿಶೇಷವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *