ಸತ್ತರೂ ಸರಿ ಮೋದಿ ಅಪ್ಪ, ಅಮ್ಮನಿಗೆ ಅವಮಾನ ಮಾಡಲ್ಲ: ರಾಹುಲ್ ಗಾಂಧಿ

Public TV
1 Min Read

ಉಜ್ಜಯಿನಿ: ನಾನು ಸತ್ತರೂ ಸರಿ ಆದರೆ ನರೇಂದ್ರ ಮೋದಿಯವರ ತಂದೆ-ತಾಯಿಗೆ ಅವಮಾನ ಮಾಡಲ್ಲ ಎಂದು ಹೇಳುವ ಮೂಲಕ ಪ್ರಧಾನಿಯವರಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಿರುಗೇಟು ನಿಡಿದ್ದಾರೆ.

ಮೋದಿಯವರು ದ್ವೇಷದ ಮಾತುಗಳನ್ನು ಆಡುತ್ತಾರೆ. ಅವರು ತಮ್ಮ ತಂದೆ, ಅಜ್ಜಿ, ಮುತ್ತಾತರಿಗೆ ಅವಮಾನ ಮಾಡಿದ್ದಾರೆ. ಆದರೆ ನಾನು ಯಾವತ್ತೂ ಅವರ ಕುಟುಂಬ ಹಾಗೂ ಅವರ ಅಪ್ಪ, ಅಮ್ಮನ ಬಗ್ಗೆ ಮಾತನಾಡಲ್ಲ. ನಾನು ಸತ್ತರೂ ಅವರ ಹೆತ್ತವರಿಗೆ ಅವಮಾನ ಮಾಡಲ್ಲ. ಯಾಕಂದ್ರೆ ನಾನು ಕಾಂಗ್ರೆಸ್ ಪಕ್ಷದವನೇ ಹೊರತು ಆರ್ ಎಸ್‍ಎಸ್ ಅಥವಾ ಬಿಜೆಪಿಗೆ ಸೇರಿದವನಲ್ಲ. ಪ್ರೀತಿ ಹಾಗೂ ಅಪ್ಪಿಕೊಳ್ಳುವ ಮೂಲಕವೇ ಅವರನ್ನು ನಾವು ಸೋಲಿಸುತ್ತೇವೆ ಎಂದು ರಾಹುಲ್ ತಿಳಿಸಿದ್ದಾರೆ.

ಮೋದಿ ಹಾಗೂ ಬಿಜೆಪಿ ನಾಯಕರು ಗಾಂಧಿ ಕುಟುಂಬದ ವಿರುದ್ಧ ಮಾತನಾಡುತ್ತಲೇ ಬಂದಿದ್ದಾರೆ. ಆದರೆ ನಾನು ಅವರ ಕುಟುಂಬವನ್ನು ಗುರಿಯಾಗಿಸಿಕೊಂಡು ನಿಂದನೆ ಮಾಡಲ್ಲ. ದ್ವೇಷ ಮಾಡುವ ಬದಲು ಬದಲಾಗಿ ಪ್ರೀತಿಯಿಂದಲೇ ಅವರನ್ನು ಸೋಲಿಸುವುದಾಗಿ ರಾಗಾ ಸ್ಪಷ್ಟಪಡಿಸಿದ್ದಾರೆ.

ಮೋದಿ ಹೇಳಿದ್ದೇನು?
ಉತ್ತರಪ್ರದೇಶದಲ್ಲಿ ನಡೆದ ಚುನಾವಣಾ ಸಮಾವೇಶವೊಂದರಲ್ಲಿ ಮಾತನಾಡಿದ ಮೋದಿ, ನಿಮ್ಮ ತಂದೆ ಮಾಜಿ ಪ್ರಧಾನಿ, ದಿವಂಗತ ರಾಜೀವ್ ಗಾಂಧಿಯವರು ನಂಬರ್ 1 ಭ್ರಷ್ಟರಾಗಿಯೇ ಪ್ರಾಣ ಬಿಟ್ಟರು ಎಂದು ಹೇಳುವ ಮೂಲಕ ರಾಹುಲ್ ಗಾಂಧಿಯವರನ್ನು ಟೀಕಿಸಿದ್ದರು.

ಅಲ್ಲದೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮತ್ತೆ ಗಾಂಧಿ ಕುಟುಂಬವನ್ನು ಕುಟುಕಿದ ಮೋದಿ, ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದಾಗ ತಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗೆ ದ್ವೀಪರಾಷ್ಟ್ರಕ್ಕೆ ಮೋಜಿಗಾಗಿ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ದೇಶದ ಪ್ರಧಾನ ಸಮರ ನೌಕೆ ಐಎನ್‍ಎಸ್ ವಿರಾಟ್ ಅನ್ನು ಖಾಸಗಿ ಟ್ಯಾಕ್ಸಿ ರೂಪದಲ್ಲಿ ಬಳಸಿಕೊಂಡಿದ್ದರು ಎಂದು ಆರೋಪಿಸಿದ್ದರು. ಪ್ರಧಾನಿಯವರ ಈ ಎರಡು ಹೇಳಿಕೆಗಳು ರಾಷ್ಟ್ರ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *