ನಾನು ಸೆಲೆಬ್ರೆಟಿ ಅಲ್ಲ, ನನಗೆ ತೊಂದರೆ ಕೊಡಬೇಡಿ – ಅಭಿಮಾನಿಗಳಲ್ಲಿ ಆರ್‌ಸಿಬಿ ಗರ್ಲ್ ಮನವಿ

Public TV
3 Min Read

ಬೆಂಗಳೂರು: ಐಪಿಎಲ್ ಮ್ಯಾಚ್‍ನಲ್ಲಿ ಕಾಣಿಸಿಕೊಂಡಿದ್ದ ಆರ್‍ಸಿಬಿ ತಂಡದ ಅಭಿಮಾನಿ, ಆರ್‌ಸಿಬಿ ಗರ್ಲ್ ದೀಪಿಕಾ ಘೋಷ್ ಒಂದೇ ದಿನದಲ್ಲಿ ಫೇಮಸ್ ಆದ ಬೆಡಗಿ. ಆದರೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ಫಾಲೋ ಮಾಡುತ್ತಿರುವ ಮಂದಿ ಕೊಡುತ್ತಿರುವ ಕಾಟಕ್ಕೆ ಸದ್ಯ ಈಗ ಬೇಸತ್ತು ಹೋಗಿದ್ದಾರೆ.

ಹೌದು. ಈ ಬಗ್ಗೆ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿಕೊಂಡಿರುವ ದೀಪಿಕಾ ಘೋಷ್, ಎಲ್ಲೆಡೆ ತಮ್ಮನ್ನು ಟ್ರೋಲ್ ಮಾಡುತ್ತಿರುವ ಬಗ್ಗೆ ಹಾಗೂ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ತಮಗೆ ಕಾಟ ಕೊಡುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ.

ಮೇ 4ರಂದು ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ದೀಪಿಕಾ ಘೋಷ್ ಬೆಂಗಳೂರು ತಂಡವನ್ನು ಧ್ವಜ ಹಿಡಿದು ಬೆಂಬಲಿಸುತ್ತಿದ್ದರು. ಇವರು ಧ್ವಜ ಹಿಡಿದು ಬೆಂಬಲಿಸುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದೇ ತಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇನ್‍ಸ್ಟಾಗ್ರಾಮ್‍ನಲ್ಲಿದ್ದ ಫಾಲೋವರ್ಸ್ ಸಂಖ್ಯೆ 6 ಸಾವಿರದಿಂದ ದಿನ ಬೆಳಗಾಗುವುದರ ಒಳಗಡೆ ಒಂದು ಲಕ್ಷಕ್ಕೂ ಅಧಿಕವಾಗಿಬಿಟ್ಟಿತ್ತು. ದೀಪಿಕಾ ತಮ್ಮ ಖಾತೆಯಲ್ಲಿ ಬೆಂಗಳೂರು ತಂಡದ ಧ್ವಜ ಹಿಡಿದು ಸಂಭ್ರಮಿಸುತ್ತಿರುವ ವಿಡಿಯೋ ಅಪ್ಲೋಡ್ ಮಾಡಿದ್ದು 13 ಗಂಟೆಯಲ್ಲಿ 7 ಲಕ್ಷ ವ್ಯೂ ಕಂಡಿತ್ತು.

https://www.instagram.com/p/BxDY_lnna1L/?utm_source=ig_embed

ಸದ್ಯ ದೀಪಿಕಾ ಅವರನ್ನು 3.42 ಲಕ್ಷ ಮಂದಿ ಫಾಲೋ ಮಾಡುತ್ತಿದ್ದು, ಧ್ವಜ ಹಿಡಿದು ಸಂಭ್ರಮಿಸುತ್ತಿರುವ ವಿಡಿಯೋ 27.97 ಲಕ್ಷ ವ್ಯೂ ಕಂಡಿದೆ.

ಪೋಸ್ಟ್ ನಲ್ಲಿ ಏನಿದೆ?
ನನ್ನ ಹೆಸರು ದೀಪಿಕಾ ಘೋಷ್. ಇದೊಂದೆ ವಿಷಯ ಸದ್ಯ ನನ್ನ ಬಗ್ಗೆ ಸತ್ಯವಾಗಿರುವುದು. ಯಾಕೆಂದರೆ ಮೇ 4ರಂದು ನಾನು ಆರ್‌ಸಿಬಿ ಹಾಗೂ ಹೈದರಾಬಾದ್ ಐಪಿಎಲ್ ಮ್ಯಾಚ್ ವೀಕ್ಷಿಸಲು ಹೋಗಿ ಬಂದ ಮೇಲೆ ನನ್ನ ಜೀವನದಲ್ಲಿ ಸಾಕಷ್ಟು ಬದಲಾಗಿದೆ. ಸುಮಾರು ವರ್ಷಗಳಿಂದ ನಮ್ಮ ಕುಟುಂಬದವರು ಆರ್‌ಸಿಬಿ ಫ್ಯಾನ್ಸ್. ಆದ್ದರಿಂದ ಆರ್‌ಸಿಬಿ ತಂಡದ ಮ್ಯಾಚ್ ನೋಡಲು ಕುಟುಂಬದವರೆಲ್ಲಾ ಹೋಗುತ್ತೇವೆ. ಅದೊಂದು ರೀತಿ ನಮ್ಮ ಮನೆಯಲ್ಲಿ ಸಂಪ್ರದಾಯವಾಗಿಬಿಟ್ಟಿದೆ. ಆದರೆ ಮೇ 4 ರಂದು ನಡೆದ ಪಂದ್ಯದಲ್ಲಿ ಎಂದಿನಂತೆ ನಾನು ಆರ್‌ಸಿಬಿ ತಂಡಕ್ಕೆ ಪೋತ್ಸಾಹ ನೀಡುತ್ತಾ, ಆಟ ವೀಕ್ಷಣೆ ಮಾಡುತ್ತಿದ್ದೆ. ಆದರೆ ಯಾವಾಗ ನಾನು ಕ್ಯಾಮೆರಾದಲ್ಲಿ ಸೆರೆಯಾದೆ ಎನ್ನುವುದು ಗೊತ್ತಿಲ್ಲ. ನಾನು ಸೆಲೆಬ್ರಿಟಿ ಅಲ್ಲ. ಒಂದು ಸಾಮಾನ್ಯ ಹುಡುಗಿ. ಆದರೆ ಟಿವಿಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಬಗ್ಗೆ ತಪ್ಪಾಗಿ ಪ್ರಚಾರ ಮಾಡುತ್ತಿದ್ದಾರೆ.

ಅಲ್ಲದೆ ಒಂದೇ ರಾತ್ರಿಯಲ್ಲಿ ನನಗೆ ಲಕ್ಷಾಂತರ ಮಂದಿ ಇನ್‍ಸ್ಟಾಗ್ರಾಮ್‍ನಲ್ಲಿ ಫಾಲೋ ಮಾಡುತ್ತಿದ್ದಾರೆ. ಅದರಲ್ಲಿ ಹುಡುಗರ ಸಂಖ್ಯೆಯೇ ಹೆಚ್ಚಾಗಿದೆ. ನಿಮ್ಮ ಪ್ರೀತಿಗೆ ಧನ್ಯವಾದ. ಆದರೆ ಒಂದು ಮ್ಯಾಚ್ ನೋಡಿ ಬಂದು ಬೆಳಗಾಗುವವರೆಗೆ ಇಷ್ಟೊಂದು ಮಂದಿ ಹೇಗೆ ನನ್ನನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹುಡುಕಿದರು ಗೊತ್ತಿಲ್ಲ. ನನ್ನ ಹೆಸರು ಅವರಿಗೆ ಹೇಗೆ ಗೊತ್ತಾಯ್ತು ಎಂದು ಶಾಕ್ ಆಯ್ತು. ಈ ನಡುವೆ ಸಾಕಾಷ್ಟು ಮಂದಿ ನನಗೆ ನೆಗೆಟಿವ್ ಮೆಸೇಜ್ ಮಾಡಿ ಕಾಟ ಕೊಡುತ್ತಿದ್ದಾರೆ. ಇದರಿಂದ ನನಗೆ ಮಾನಸಿಕವಾಗಿ ಹಿಂಸೆ ಆಗುತ್ತಿದೆ. ನನಗೆ ಹೆಚ್ಚು ಪ್ರಚಾರ ಕೊಡಬೇಡಿ. ನಾನು ನಮ್ಮಂತೆ ಒಬ್ಬಳು. ನನಗೆ ಆರ್‌ಸಿಬಿ ತಂಡ ಇಷ್ಟ, ನಾನು ಆರ್‌ಸಿಬಿ ಗರ್ಲ್ ಹೌದು, ಆದರೆ ನಾನು ನನ್ನ ಜೀವನದಲ್ಲಿ ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಡ್ಯಾನ್ಸರ್, ಶಿಕ್ಷಕಿ, ಸ್ಟೈಲಿಸ್ಟ್ ಹಾಗೂ ಉದ್ಯಮಿಯಾಗಿ ಸಾಕಷ್ಟು ಹೆಸರು ಮಾಡಿದ್ದೇನೆ. ನನಗೆ ಈ ರೀತಿ ಫೇಮಸ್ ಆಗುವ ಅಗತ್ಯವಿಲ್ಲ.

ಒಂದು ಹುಡುಗಿಯ ಬಗ್ಗೆ ತಪ್ಪಾಗಿ ಪ್ರಚಾರ ಮಾಡುವ ಮೊದಲು ಯೋಚಿಸಿ. ನನ್ನ ಬಗ್ಗೆ ತಿಳಿಯದೇ ಸುಳ್ಳು ಪ್ರಚಾರ ಮಾಡಬೇಡಿ. ನಾನು ಆರ್‌ಸಿಬಿ ಗರ್ಲ್ ಎಂದು ಒಪ್ಪಿಕೊಳ್ಳುತ್ತೇನೆ. ಆದರೆ ಅದಕ್ಕಷ್ಟೇ ಸೀಮಿತವಾಗಿಲ್ಲ. ನಾನು ಅದಕ್ಕಿಂತ ಹೆಚ್ಚು. ಸುಳ್ಳು ಪ್ರಚಾರ ಮಾಡಿ ತೊಂದರೆ ಕೊಡಬೇಡಿ ಎಂದು ಬರೆದು ತಮ್ಮ ಫೋಟೋವೊಂದನ್ನು ಪೋಸ್ಟ್ ಮಾಡಿದ್ದಾರೆ.

ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ದೀಪಿಕಾ ಘೋಷ್ ಭಾವಚಿತ್ರ ಹಾಕಿ ಹಲವಾರು ನಕಲಿ ಖಾತೆಯನ್ನು ಸಹ ತೆರೆಯಲಾಗಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ನನ್ನ ಹೆಸರಿನಲ್ಲಿ ಹಲವಾರು ನಕಲಿ ಖಾತೆಗಳನ್ನು ತೆರೆಯಲಾಗಿದೆ. ಅವುಗಳನ್ನು ಫಾಲೋ ಮಾಡಬೇಡಿ ಎಂದು ದೀಪಿಕಾ ಘೋಷ್ ಪೋಸ್ಟ್ ಪ್ರಕಟಿಸಿದ್ದರು.

https://www.instagram.com/p/BxW_iWKJvBl/

Share This Article
Leave a Comment

Leave a Reply

Your email address will not be published. Required fields are marked *