ಮೋಹದ ಮಬ್ಬಿನಲ್ಲಿ ಮನುಷ್ಯತ್ವದ ಖನನ!

Public TV
2 Min Read

ಬೆಂಗಳೂರು: ವಿಶಿಷ್ಟವಾದ ಶೀರ್ಷಿಕೆಯ ಕಾರಣದಿಂದಲೇ ಗಮನ ಸೆಳೆದು ಆ ನಂತರ ತನ್ನದೇ ಆದ ರೀತಿಯಲ್ಲಿ ಸದ್ದು ಮಾಡುತ್ತಾ ಬಂದಿದ್ದ ಖನನ ಚಿತ್ರ ತೆರೆ ಕಂಡಿದೆ. ಆರಂಭಿಕವಾಗಿ ಈ ಟೈಟಲ್ಲಿನ ಮೇಲೊಂದು ಕುತೂಹಲ ಹುಟ್ಟಿಕೊಂಡಿತ್ತಲ್ಲಾ? ಅದನ್ನು ನೂರ್ಮಡಿಸುವಂಥಾ ಅಮೋಘವಾದ ಕಥೆ, ಹೊಸಾ ಶೈಲಿಯ ನಿರೂಪಣೆ ಮತ್ತು ಕ್ಷಣ ಕ್ಷಣವೂ ಬೆರಗಾಗಿಸುವಂಥಾ ಕಸುಬುದಾರಿಕೆಯೊಂದಿಗೆ ಖನನ ನೋಡುಗರನ್ನೆಲ್ಲ ಮೋಡಿಗೀಡು ಮಾಡುವಲ್ಲಿ ಯಶ ಕಂಡಿದೆ.

ಸಸ್ಪೆನ್ಸ್ ಥ್ರಿಲ್ಲರ್ ಮತ್ತು ರಿವೆಂಜ್ ಕಥನಗಳೇನು ಕನ್ನಡಕ್ಕೆ ಹೊಸತಲ್ಲ. ಆದರೆ ಹೊಸಾ ಆಲೋಚನೆ, ಕ್ರಿಯೇಟಿವಿಟಿ ಮತ್ತು ಹೊಸತೇನನ್ನೋ ಸೃಷ್ಟಿಸಬೇಕೆಂಬ ಇಂಗಿತವೇ ಮಾಮೂಲಾಗಿ ದಾಖಲಾಗ ಬಹುದಾದ ಕಥೆಯನ್ನು ಡಿಫರೆಂಟಾಗಿಸುತ್ತದೆ. ಇದೇ ರೀತಿ ನಿರ್ದೇಶಕ ರಾಧಾ ಅವರು ಖನನವನ್ನು ಮಾಮೂಲಿ ಜಾಡಿನಲ್ಲಿ ಕಳೆದು ಹೋಗದಂತೆ ಪ್ರತೀ ಕ್ಷಣವೂ ಎಚ್ಚರ ವಹಿಸುತ್ತಲೇ ರೂಪಿಸಿದ್ದಾರೆ. ನಾಯಕ ಆರ್ಯವರ್ಧನ್ ಸೇರಿದಂತೆ ತಾರಾ ಬಳಗ ಮತ್ತು ತಾಂತ್ರಿಕ ವರ್ಗವೂ ರಾಧಾರ ಕನಸಿಗೆ ಸಾಥ್ ನೀಡಿದ್ದಾರೆ. ಈ ಕಾರಣದಿಂದಲೇ ಖನನ ಪ್ರೇಕ್ಷಕರನ್ನೆಲ್ಲ ಹೊಸ ಜಾಡಿನಲ್ಲಿಯೇ ತಾಕಿ ಮುದಗೊಳಿಸಿದೆ.

ಆರ್ಯವರ್ಧನ್ ಅಜಯ್ ಎಂಬ ಪಾತ್ರಕ್ಕೆ ಜೀವ ತುಂಬಿದರೆ, ನಾಯಕಿ ಕರಿಷ್ಮಾ ಬರುಹಾ ನೈನಾ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಕಥೆ ಆರಂಭದಲ್ಲಿ ರೊಮ್ಯಾಂಟಿಕ್ ಮೂಡಿನಲ್ಲಿಯೇ ಬಿಚ್ಚಿಕೊಳ್ಳುತ್ತೆ. ನಾಯಕ ಅಜೇಯ್ ಚಿಕ್ಕ ವಯಸ್ಸಿನಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡು ಅನಾಥ ಪ್ರಜ್ಞೆ ತುಂಬಿಕೊಂಡು ಬೆಳೆದ ಹುಡುಗ. ಆತನಿಗೆ ನೈನಾ ಜೊತೆಯಾಗಿ ಎಲ್ಲವೂ ಸುಂದರವಾಗಿರುತ್ತೆ. ನಾಯಕನ ಪಾಲಿಗೆ ತನ್ನನ್ನು ಆರ್ಥಿಕವಾಗಿ ತಲೆ ಎತ್ತಿ ನಿಲ್ಲುವಂತೆ ಮಾಡಿದ ಬ್ಯುಸಿನೆಸ್ ಮತ್ತು ಮುದ್ದಿನ ಮಡದಿಯೇ ಪ್ರಪಂಚ. ಆದರೆ ಹೆಂಡತಿ ಮಾತ್ರ ಮೆಲ್ಲಗೆ ಗಂಡನಿಂದ ದೂರ ಸರಿಯಲಾರಂಭಿಸುತ್ತಾಳೆ. ಆಕೆ ಗಂಡನ ಪ್ರಾಂಜಲ ಪ್ರೀತಿಯೂ ಉಸಿರುಗಟ್ಟಿಸಿದಂತಾಗಿ ಕೊಸರಾಡಲಾರಂಭಿಸುತ್ತಾಳೆ.

ಇದಕ್ಕೆ ಕಾರಣ ಆಕೆಯ ಪ್ರಪಂಚಕ್ಕೆ ಎಂಟ್ರಿ ಕೊಟ್ಟ ಪರ ಪುರುಷ. ಈ ಅನೈತಿಕ ಸಂಬಂಧದಿಂದಲೇ ಕಥೆಯ ದಿಕ್ಕು ದೆಸೆಗಳೇ ಬದಲಾಗುತ್ತೆ. ಆ ಪರಪುರುಷನಿಗೆ ಕೇವಲ ನೈನಾ ಮೇಲಷ್ಟೇ ಮೋಹವಿರೋದಿಲ್ಲ, ಆಕೆಯ ಗಂಡ ಅಂದರೆ ನಾಯಕನ ಆಸ್ತಿಯ ಮೇಲೂ ಕಣ್ಣಿರುತ್ತೆ. ಆದ್ದರಿಂದಲೇ ಆತನನ್ನು ಕೊಲ್ಲುವಂತೆ ಪ್ರೇಯಸಿಗೆ ದುಂಬಾಲು ಬೀಳುತ್ತಿರುತ್ತಾನೆ. ಮೋಹಕ್ಕೆ ಬಿದ್ದ ಈಕೆ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸೋ ಗಂಡನನ್ನು ಕೊಲೆ ಮಾಡಲೂ ಮುಂದಾಗುತ್ತಾಳೆ. ಆ ನಂತರ ಏನಾಗುತ್ತೆ ಎಂಬ ಕುತೂಹಲವನ್ನು ಥೇಟರಿನಲ್ಲಿಯೇ ಶಮನ ಮಾಡಿಕೊಂಡರೊಳಿತು. ಈ ಕುತೂಹಲವಿಟ್ಟುಕೊಂಡು ಥೇಟರು ಹೊಕ್ಕವರನ್ನೆಲ್ಲ ಖನನದ ಕಥೆ ಬೇರೆಯದ್ದೇ ರೀತಿಯಲ್ಲಿ ಕಾಡುತ್ತದೆ. ಮೋಹದ ಮಬ್ಬಿನಲ್ಲಿ ಕಡೆಯಾದರೂ ಮನುಷ್ಯತ್ವ ಬದುಕಿಕೊಳ್ಳುತ್ತಾ ಅನ್ನೋದು ಪ್ರಧಾನ ಆಕರ್ಷಣೆ.

ಈ ಮೂಲಕ ರಾಧಾ ಅವರು ನಿರ್ದೇಶಕರಾಗಿಯೂ ಗಮನ ಸೆಳೆದಿದ್ದಾರೆ. ನಾಯಕ ಆರ್ಯವರ್ಧನ್ ಮೊದಲ ಚಿತ್ರದಲ್ಲಿಯೇ ಚೆಂದದ ನಟನೆ ಕೊಟ್ಟಿದ್ದಾರೆ. ಹೀರೋ ಆಗಿ ನೆಲೆ ನಿಲ್ಲುವ ಸೂಚನೆಯನ್ನೂ ರವಾನಿಸಿದ್ದಾರೆ. ನಿರ್ಮಾಪಕ ಶ್ರೀನಿವಾಸ ರಾವ್ ಅವರ ಶ್ರಮವೂ ಸಾರ್ಥಕವಾದಂತಾಗಿದೆ. ಒಟ್ಟಾರೆಯಾಗಿ ಖನನ ಬೇರೆಯದ್ದೇ ರೀತಿಯ ಥ್ರಿಲ್ಲರ್ ಅನುಭವವೊಂದನ್ನು ನೋಡುಗರಿಗೆ ದಾಟಿಸುತ್ತೆ. ಅಪ್ಪಟ ಮನರಂಜನಾತ್ಮಕ ಚಿತ್ರವಾಗಿ ಗಮನ ಸೆಳೆಯುತ್ತೆ.

ರೇಟಿಂಗ್: 3.5/5

Share This Article
Leave a Comment

Leave a Reply

Your email address will not be published. Required fields are marked *