ಎಚ್‍ಡಿಡಿ ಪೂಜೆ ರಹಸ್ಯ ತಿಳಿಸಿದ ಸಚಿವ ರೇವಣ್ಣ

Public TV
2 Min Read

– ಬಿಎಸ್‍ವೈಗೆ ತಿರುಗೇಟು ನೀಡಿದ ಸಚಿವರು
– ಸುಮ್ಮನೆ ಪ್ರಚಾರ ಕೊಟ್ರೆ ಬೇಡ ಅನ್ನೋಕೆ ಆಗುತ್ತಾ?

ಬೆಂಗಳೂರು: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಮೊಮ್ಮಕ್ಕಳ ಗೆಲುವಿಗಾಗಿ ಪೂಜೆ ಮಾಡಿಸಿಲ್ಲ. ಅವರ ತಾಯಂದಿರಿಗೆ ಸದ್ಗತಿ ಸಿಗಲೆಂದು ದೇವರ ಮೊರೆಹೋಗಿದ್ದಾರೆ ಎಂದು ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ದೇವೇಗೌಡರಿಗೆ ಇಬ್ಬರು ತಾಯಂದಿರು. ಅವರು ಪ್ಲೇಗ್‍ನಿಂದ ಮೃತಪಟ್ಟಿದ್ದರು. 60-70 ವರ್ಷವಾದರೂ ಪೂಜೆ ಮಾಡಿಸಿರಲಿಲ್ಲವಂತೆ. ಹೀಗಾಗಿ ತಾಯಂದಿರ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಚಿಕ್ಕಮಗಳೂರಿನ ಕಾಪು ಬಳಿ ಪೂಜೆ ಮಾಡಿಸಿದ್ದಾರೆ ಎಂದು ಹೇಳಿದರು.

ರೇವಣ್ಣ ಎಲ್ಲಾ ಕೆಲಸದಲ್ಲೂ ಮೂಗು ತೂರಿಸುತ್ತಾರೆ ಎನ್ನುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಹುಬ್ಬಳ್ಳಿಯಲ್ಲಿ ಯಡಿಯೂರಪ್ಪ ಅಳಿಯನನ್ನೆ ಹಾಕಿಕೊಟ್ಟಿದ್ದೇನೆ. ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಕೇಳಿದವರನ್ನು ಕೇಳಿದ ಜಾಗಕ್ಕೆ ಹಾಕಿಕೊಟ್ಟಿದ್ದೇನೆ. ಬೇಕಾದರೆ ಅವರನ್ನೇ ಕೇಳಿ. ಬಿ.ಎಸ್.ಯಡಿಯೂರಪ್ಪನವರಿಗೆ ಅರಳು-ಮರಳು. ಪಾಪ ಅವರಿಗೆ ವಯಸ್ಸಾಗಿದೆ. ಅದಕ್ಕೆ ಏನೇನು ಮಾತನಾಡುತ್ತಿದ್ದಾರೆ ಎಂದು ತಿರುಗೇಟು ಕೊಟ್ಟರು.

ನಾನು ಯಾವುದೇ ಕಳ್ಳ ವೋಟ್ ಹಾಕಿಸಿಲ್ಲ. ದೇವರಾಜ್ ಎಂತಹ ವ್ಯಕ್ತಿ ಅಂತ ತಿಳಿದುಕೊಂಡು ಮಾತನಾಡಿ. ದೂರು ಕೊಟ್ಟವರ ಮೇಲೆ ಎರಡು ಪ್ರಕರಣ ದಾಖಲಾಗಿವೆ. ಮತದಾನ ದಿನ ನಾನು ಮಾಧ್ಯಮಗಳ ಜೊತೆಗಿದ್ದೆ. ಸೂರಜ್ ಮಗನ ಕೈಯಲ್ಲಿ ವೋಟ್ ಹಾಕಿಸಿದ್ದಾರೆ ಅಂತ ಹೇಳಿದ್ದಾರೆ. ಸೂರಜ್‍ಗೆ ಮಗನೇ ಇಲ್ಲ. ಈ ಸಂಬಂಧ ಯಾವುದೇ ನೊಟೀಸ್ ಆಯೋಗದಿಂದ ಬಂದಿಲ್ಲ. ಯಾವುದೇ ತನಿಖೆ ಮಾಡಿಕೊಳ್ಳಲಿ. ನಾನು ತಪ್ಪು ಮಾಡಿಲ್ಲ ಎಂದು ಹೇಳಿದರು.

ನಾನು ಕಳ್ಳ ವೋಟ್ ಹಾಕಿಸಿದ ವಿಡಿಯೋ ಇದ್ದರೆ ಕೊಡಲಿ. ಕುಟುಂಬ ಸಮೇತ ಬಂದು ಮತದಾನ ಮಾಡಿದ್ದೇನೆ. ಬೂತ್‍ನಲ್ಲಿ ಕೇಂದ್ರ ಮೀಸಲು ಪಡೆಯಿತ್ತು. ಕಳ್ಳ ವೋಟ್ ಹಾಕಿಸುತ್ತಿದ್ದರೆ ಅವರ ಮೂಲಕ ನಮ್ಮನ್ನ ತಡೆಯಬಹುದಿತ್ತು. ಯಾಕೆ ತಡೆಯಲಿಲ್ಲ ಎಂದು ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿದರು.

ಹೆಚ್‍ಎಂಟಿ (ಹಾಸನ, ಮಂಡ್ಯ, ತುಮಕೂರು) ಬಗ್ಗೆ ಮಾತಾಡದೆ ಕೆಲವರಿಗೆ ಸಮಾಧಾನ ಆಗುವುದಿಲ್ಲ. ಸುಮ್ಮನೆ ಪ್ರಚಾರ ಕೊಟ್ಟರೆ ಬೇಡ ಎನ್ನುವುದಕ್ಕೆ ಆಗುತ್ತಾ? ಈ ವಿಷಯದಲ್ಲಿ ಮಾಧ್ಯಮಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಹೆಚ್‍ಎಂಟಿ ದೆಹಲಿಗೆ ಹೋಗೋದು ಗ್ಯಾರಂಟಿ ಎಂದು ಭವಿಷ್ಯ ನುಡಿದರು.

Share This Article
Leave a Comment

Leave a Reply

Your email address will not be published. Required fields are marked *