ಸ್ನೇಹಿತರ ಜೊತೆ ಸೇರಿ ತನ್ನ ಮಗನನ್ನೇ ಕಿಡ್ನಾಪ್ ಮಾಡಿದ ತಾಯಿ!

Public TV
2 Min Read

ಮುಂಬೈ: ಪತಿಯಿಂದ ಹಣ ವಸೂಲಿ ಮಾಡಲೆಂದು 38 ವರ್ಷದ ಮಹಿಳೆಯೊಬ್ಬರು ತನ್ನ ಸ್ನೇಹಿತರ ಜೊತೆ ಸೇರಿ 4 ವರ್ಷದ ಮಗನನ್ನೇ ಕಿಡ್ನಾಪ್ ಮಾಡಿ ನಾಟಕವಾಡಿದ ಘಟನೆ ಮುಂಬೈನಲ್ಲಿ ನಡೆದಿದೆ.

ಘಟನೆ ಸಂಬಂಧ ಸಂಗೀತಾ ಜಗ್ತಾಪ್(38) ಹಾಗೂ ಆಕೆಯ ಸ್ನೇಹಿತರಾದ ಸಂಗೀತಾ ಬರುಡ್(29) ಹಾಗೂ ಅಭಿಜಿಲ್ ಲಾಡ್(30) ಎಂಬವರನ್ನು ಹದಾಪ್ಸರ್ ಪೊಲೀಸರು ಬಂಧಿಸಿದ್ದಾರೆ.

ಸಂಗಿತಾ ಜಗ್ತಾಪ್ ಏಪ್ರಿಲ್ 28 ರಂದು ತನ್ನ 4 ವರ್ಷದ ಆರ್ಯನ್ ನನ್ನು ಅಪರಿಚಿತ ವ್ಯಕ್ತಿಗಳು ಕಿಡ್ನಾಪ್ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಳು.

ನಡೆದಿದ್ದೇನು? :
ಏಪ್ರಿಲ್ 28ರಂದು ನಾನು ನನ್ನ ಬೈಕ್ ತೊಳೆದು ಮಗನಿಗೆ ಫಾಸ್ಟ್ ಫುಡ್ ತರಲೆಂದು ಹೊರಗಡೆ ಹೋಗಿದ್ದೆ. ಆಗ ಅಂದರೆ 1.20ರ ಸುಮಾರಿಗೆ ಆರ್ಯನ್ ಪಕ್ಕದಲ್ಲೇ ಇದ್ದ ಪಾರ್ಕ್ ನಲ್ಲಿ ಗೆಳೆಯರೊಂದಿಗೆ ಆಟವಾಡುತ್ತಿದ್ದನು. ಆದರೆ ನಾನು ಹೊರಗಡೆ ಹೋಗಿ ಮನೆಗೆ ಹಿಂದಿರುಗುವಷ್ಟರಲ್ಲಿ ನನ್ನ ಮಗನನ್ನು ಯಾರೋ ಕಿಡ್ನಾಪ್ ಮಾಡಿದ್ದಾರೆ. ಹೀಗಾಗಿ ಕೂಡಲೇ ನಾನು ಠಾಣೆಗೆ ಬಂದು ದೂರು ನೀಡಿದೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.

ಜಗ್ತಾಪ್ ಎರಡು ಮದುವೆಯಾಗಿದ್ದಾಳೆ. ಹೀಗಾಗಿ ಈಕೆಗೆ ಈಗಾಗಲೇ 19 ವರ್ಷದ ಮಗ ಹಾಗೂ 16 ವರ್ಷದ ಮಗಳಿದ್ದಾಳೆ. 2012ರಲ್ಲಿ ಈಕೆಯ ಪತಿ ತೀರಿಕೊಂಡ ಬಳಿಕ ಈಕೆ ಶಿರ್ಡಿ ಮೂಲದ ಉದ್ಯಮಿಯನ್ನು ಮದುವೆಯಾಗಿದ್ದಾಳೆ. ಈ ದಂಪತಿಗೆ ಈಗ 4 ವರ್ಷದ ಮಗನಿದ್ದು, ಆತನ ಹೆಸರೇ ಆರ್ಯನ್. ಕೆಲ ತಿಂಗಳು ಚೆನ್ನಾಗಿಯೇ ಇದ್ದ ದಂಪತಿ ಬಳಿಕ ಇಬ್ಬರ ಮಧ್ಯೆ ಜಗಳ ಆರಂಭವಾಗಿದೆ. ಈ ಮಧ್ಯೆ ಅಂದರೆ 15 ದಿನಗಳ ಹಿಂದೆ ಪತಿ ಶಿರ್ಡಿಯ ಮತ್ತೊಬ್ಬ ಮಹಿಳೆಯನ್ನು ವರಿಸಿದ್ದಾನೆ. ಹೀಗಾಗಿ ತನಗೆ ಡಿವೋರ್ಸ್ ನೀಡದೆ ಪತಿ ಮತ್ತೊಂದು ಮದುವೆಯಾದ ವಿಚಾರ ತಿಳಿದ ಜಗ್ತಾಪ್, ನನಗೆ 15 ಲಕ್ಷ ಹಣ ಹಾಗೂ ಒಂದು ಬೆಡ್ ರೂಮ್ ಇರುವಂತಹ ಫ್ಲ್ಯಾಟ್ ನೀಡಬೇಕೆಂದು ಪತಿ ಮುಂದೆ ಬೇಡಿಕೆ ಇಟ್ಟಿದ್ದಾಳೆ  ಎಂದು ಪ್ರಕರಣ ಸಂಬಂಧ ಹದಾಪ್ಸರ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಸುನಿಲ್ ತುಂಬೆ ತಿಳಿಸಿದ್ದಾರೆ.

ಕೆಲ ವಾರಗಳ ಹಿಂದೆಯಷ್ಟೇ ಮತ್ತೆ ಶಿರ್ಡಿಯಲ್ಲಿರುವ ತನ್ನ ಪತಿ ಮನೆಗೆ ತೆರಳಿದ ಜಗ್ತಾಪ್, ತನ್ನ ಬೇಡಿಕೆಯನ್ನು ಪತಿ ಮುಂದಿಟ್ಟಿದ್ದಾಳೆ. ಈ ವೇಳೆ ಪತಿ, ಪತ್ನಿಯ ಬೇಡಿಕೆಯನ್ನು ನಿರಾಕರಿಸಿದ್ದಾನೆ ಇದರಿಂದ ರೊಚ್ಚಿಗೆದ್ದ ಪತ್ನಿ ಜಗ್ತಾಪ್ ತನ್ನ ಮಗನನ್ನೇ ಕಿಡ್ನಾಪ್ ಮಾಡುವ ಯೋಜನೆ ಹಾಕಿದ್ದಾಳೆ. ಹಾಗೆಯೇ ಏ.28ರಂದು ನಾವು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಈ ಬಗ್ಗೆ ತನಿಖೆ ಚುರುಕುಗೊಳಿಸಿದೆವು. ಸಿಸಿಟಿವಿಯಲ್ಲಿ ಸ್ಕಾರ್ಪಿಯೋ ಕಾರೊಂದು ಅದೇ ಪ್ರದೇಶದಲ್ಲಿ 45 ನಿಮಿಷಗಳ ಕಾಲ ಚಲಿಸುತ್ತಿತ್ತು. ಅದೇ ದಿನ ದೂರು ದಾಖಲಿಸಿದ್ದ ಮಹಿಳೆ 7 ಗಂಟೆ ಸುಮಾರಿಗೆ ಠಾಣೆಗೆ ಬಂದು ಅಪಹರಣಕಾರರು ಬಾಲಕನನ್ನು ಬಿಡುಗಡೆ ಮಾಡಿದ್ದಾರೆ ಎಂದು ತಿಳಿಸಿದ್ದಳು ಎಂದರು.

ಈ ಬಗ್ಗೆ ಬಾಲಕನನ್ನು ಮಾತನಾಡಿಸಿದಾಗ, ಇಬ್ಬರು ಮಸುಕುಧಾರಿಗಳು ಬಂದು ಮಂಜರಿ ಪ್ರದೇಶದಿಂದ ನನ್ನ ಅಪಹರಿಸಿದ್ದಾರೆ ಎಂದು ತಿಳಿಸಿದ್ದಾನೆ ಎಂದು ಅವರು ವಿವರಿಸಿದರು. ತನಿಖೆಯ ನಂತರ ಕಾರು ಚಾಲಕನನ್ನು ವಾಘೋಳಿ ನಿವಾಸಿ ಎಂದು ಪತ್ತೆ ಹಚ್ಚಿದೆವು. ಸದ್ಯ ಪ್ರಕರಣ ಸಂಬಂಧ ಇಬ್ಬರು ಶಂಕಿತರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿರುವುದಾಗಿ ಪೊಲೀಸ್ ಆಧಿಕಾರಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *