ಬುರ್ಕಾ ಬ್ಯಾನ್ ಮಾಡಿದ್ರೆ ಗುಂಘಟ್ ಕೂಡ ನಿಷೇಧವಾಗ್ಬೇಕು: ಜಾವೇದ್ ಅಖ್ತರ್

Public TV
2 Min Read

ಭೋಪಾಲ್: ದೇಶದಲ್ಲಿ ಬುರ್ಕಾವನ್ನು ಬ್ಯಾನ್ ಮಾಡುವುದೇ ಆದರೆ ರಾಜಸ್ಥಾನದಲ್ಲಿ ಹಿಂದೂ ಮಹಿಳೆಯರು ಧರಿಸುವ ಗುಂಘಟ್ ನಿಷೇಧಿಸಬೇಕು ಎಂದು ಕವಿ ಜಾವೇದ್ ಅಖ್ತರ್ ಆಗ್ರಹಿಸಿದ್ದಾರೆ.

ಶಿವಸೇನೆ ಬುಧವಾರ ನೀಡಿದ್ದ ಹೇಳಿಕೆ ಪ್ರತಿಕ್ರಿಯೆ ನೀಡಿರುವ ಜಾವೇದ್ ಅಖ್ತರ್ ಅವರು, ದೇಶದಲ್ಲಿ ಬುರ್ಕಾ ನಿಷೇಧಕ್ಕೆ ನನ್ನಿಂದ ಯಾವುದೇ ಆಕ್ಷೇಪವಿಲ್ಲ. ಆದರೆ ರಾಜಸ್ಥಾನದಲ್ಲಿ ನಡೆಯುವ ಲೋಕಸಭಾ ಮತದಾನದ ಕೊನೆ ಹಂತಕ್ಕೂ ಮುನ್ನ ಗುಂಘಟ್ ಮೇಲೂ ಸರ್ಕಾರ ನಿಷೇಧ ಹೇರುವ ಕುರಿತು ಹೇಳಿಕೆ ನೀಡುತ್ತಾ ಎಂದು ಪ್ರಶ್ನಿಸಿದ್ದಾರೆ.

ದೇಶದಲ್ಲಿ ಬುರ್ಕಾ ಹಾಗೂ ಗುಂಘಟ್ ಎರಡರ ಮೇಲೂ ನಿಷೇಧ ಹೇರಿದರೆ ನನಗೆ ಖುಷಿಯಾಗುತ್ತದೆ. ನನ್ನ ಕುಟುಂಬದಲ್ಲಿ ಕೆಲಸ ಮಾಡಲು ಮಹಿಳೆಯರಿದ್ದಾರೆ. ಅವರಿಂದಾಗಿ ನನಗೆ ಬುರ್ಖಾದ ಬಗ್ಗೆ ಸ್ವಲ್ಪ ಜ್ಞಾನವಿದೆ. ನಮ್ಮ ಮನೆಯಲ್ಲಿ ಬುರ್ಕಾ ಧರಿಸುವುದನ್ನು ನಾನು ನೋಡಿಲ್ಲ ಂದು ಹೇಳಿದ್ದಾರೆ.

ಇರಾಕ್ ಅತ್ಯಂತ ಸಂಪ್ರದಾಯಬದ್ಧ ಮುಸ್ಲಿಂ ದೇಶವಾಗಿದೆ. ಆದರೆ ಅಲ್ಲಿನ ಮಹಿಳೆಯರು ತಮ್ಮ ಮುಖವನ್ನು ಮುಚ್ಚುವುದಿಲ್ಲ. ಈಗ ಶ್ರೀಲಂಕಾದಲ್ಲಿ ಮುಖ ಮುಚ್ಚಿಕೊಳ್ಳದಂತಹ ಕಾನೂನು ಜಾರಿಗೆ ತರಲಾಗುತ್ತಿದೆ ಎಂದು ತಿಳಿಸಿದರು.

ಶಿವಸೇನೆ ಹೇಳಿದ್ದೇನು?:
ಶ್ರೀಲಂಕಾದಲ್ಲಿ ನಿಷೇಧಗೊಂಡಂತೆ ಭಾರತದಲ್ಲೂ ಭದ್ರತೆಯ ದೃಷ್ಟಿಯಿಂದ ಸಾರ್ವಜನಿಕ ಸ್ಥಳದಲ್ಲಿ ಬುರ್ಕಾವನ್ನು ನಿಷೇಧಿಸಬೇಕೆಂದು ಮಹಾರಾಷ್ಟ್ರದಲ್ಲಿ ಬಿಜೆಪಿಯ ಮೈತ್ರಿ ಪಕ್ಷವಾದ ಶಿವಸೇನೆ ಆಗ್ರಹಿಸಿತ್ತು.

ತನ್ನ ಮುಖವಾಣಿ ಸಾಮ್ನಾದಲ್ಲಿ ಬರೆದ ಸಂಪಾದಕೀಯದಲ್ಲಿ, ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲಾ ಸಿರಿಸೇನಾ ಅವರು ತಮ್ಮ ದೇಶದಲ್ಲಿ ಬುರ್ಕಾವನ್ನು ನಿಷೇಧ ಮಾಡಿದ್ದಾರೆ. ಅದೇ ರೀತಿಯಲ್ಲಿ ಭಾರತದಲ್ಲೂ ಬುರ್ಕಾವನ್ನು ನಿಷೇಧಿಸಬೇಕೆಂದು ಒತ್ತಾಯಿಸಿದೆ.

ಬುರ್ಕಾ ಧರಿಸುವುದರಿಂದ ಉಗ್ರರು ತಮ್ಮ ಮುಖ ಮುಚ್ಚಿಕೊಂಡು ಸುಲಭವಾಗಿ ತಪ್ಪಿಸಿಕೊಳ್ಳುತ್ತಾರೆ. ಈ ರೀತಿಯ ಸಂಪೂರ್ಣ ಮುಖ ಮುಚ್ಚಿಕೊಳ್ಳುವ ಉಡುಪುಗಳನ್ನು ಧರಿಸುವುದರಿಂದ ರಾಷ್ಟ್ರೀಯ ಭದ್ರತೆಗೆ ಹಿನ್ನಡೆಯಾಗುತ್ತಿದೆ. ಭಾರತದ ಮೇಲೂ ಉಗ್ರರು ದಾಳಿ ಮಾಡುವ ಸಾಧ್ಯತೆ ಇರುವುದರಿಂದ ಭದ್ರತೆಯ ದೃಷ್ಟಿಯಿಂದ ನಮ್ಮ ದೇಶದಲ್ಲೂ ಬುರ್ಕಾವನ್ನು ನಿಷೇಧಿಸುವಂತೆ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಹೇಳಿತ್ತು.

ಈ ಬೆನ್ನಲ್ಲೇ ಕೇರಳದ ಅತಿದೊಡ್ಡ ಶಿಕ್ಷಣ ಸಂಸ್ಥೆಯಾದ ಕ್ಯಾಲಿಕಟ್‍ನ ಹೆಸರಾಂತ ಮುಸ್ಲಿಂ ಶಿಕ್ಷಣ ಸಂಸ್ಥೆ (ಎಂಇಎಸ್) ತನ್ನ ಕಾಲೇಜ್ ಕ್ಯಾಂಪಸ್‍ನಲ್ಲಿ ಬುರ್ಕಾ ವನ್ನು ನಿಷೇಧಿಸಿ ಸುತ್ತೋಲೆ ಹೊರಡಿಸಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಪಿ.ಎ.ಫಜಲ್ ಗಫೂರ್ ಅವರು, ಕೇರಳದಲ್ಲಿ ಇಸ್ಲಾಮ್ ಧರ್ಮವನ್ನು ಪಾಲಿಸೋಣ. ಆದರೆ ಮಧ್ಯಪ್ರಾಚ್ಯದ ಇಸ್ಲಾಂನಲ್ಲ ಎಂದು ತಿಳಿಸಿದ್ದರು.

ಸಂಪ್ರದಾಯವಾದಿ ಮುಸ್ಲಿಂ ಗುಂಪುಗಳು ಕಳೆದ ಐದು ವರ್ಷಗಳಿಂದ ಕೇರಳ ಸಂಸ್ಥೆಗಳಲ್ಲಿ ಇದೇ ರೀತಿಯ ಉಡುಪನ್ನು ಧರಿಸಬೇಕು ಎಂದು ಒತ್ತಾಯಿಸುತ್ತಿವೆ. ಇವರ ಒತ್ತಾಯಕ್ಕೆ ಮಣಿಯದೇ ನಾವು ನಮ್ಮ ಸಂಸ್ಥೆಯಲ್ಲಿ ಸಲ್ವಾರ್ ಕಮೀಝ್ ಡ್ರೆಸ್ ಕೋಡ್ ಜಾರಿ ಮಾಡಿದ್ದೇವೆ ಎಂದು ಗಫೂರ್ ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *