ಭತ್ತವನ್ನು ಬೆಳೆಯುವ ಮೊದಲೇ ಬುಕ್ಕಿಂಗ್ – ಯಶಸ್ವಿಯಾಯ್ತು ಕೊಪ್ಪಳ ರೈತನ ಪ್ರಯೋಗ

Public TV
2 Min Read

– ಸಾವಯವ ಪದ್ಧತಿಯ ಭತ್ತಕ್ಕೆ ಭಾರೀ ಬೇಡಿಕೆ
– ಜನರಿಂದ, ವ್ಯಾಪಾರಿಗಳಿಂದ ಬುಕ್ಕಿಂಗ್

ಕೊಪ್ಪಳ: ಸಿನಿಮಾ ಟಿಕೆಟ್‍ಗಳನ್ನು ಮುಂಗಡ ಟಿಕೆಟ್ ಮಾಡುವುದು ನಿಮಗೆ ಗೊತ್ತಿರಬಹುದು. ಈಗ ಅದೇ ರೀತಿಯಾಗಿ ಭತ್ತಕ್ಕೂ ಮುಂಗಡ ಬುಕ್ಕಿಂಗ್ ಆರಂಭವಾಗಿದೆ. ಗಂಗಾವತಿ ರೈತರನಈ ಪ್ರಯೋಗ ಯಶಸ್ವಿಯಾಗಿದ್ದು ಗ್ರಾಹಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಹೌದು. ಕೊಪ್ಪಳದ ಗಂಗಾವತಿ ತಾಲೂಕಿನ ಹಗೆದಾಳ ಗ್ರಾಮದ ದೊಡ್ಡಪ್ಪ ದೇಸಾಯಿ ಕೃಷಿಯಲ್ಲಿ ಇಂತಹ ವಿಶೇಷ ಹೆಜ್ಜೆ ಇಟ್ಟಿದ್ದಾರೆ. ತಮ್ಮ 11 ಎಕ್ರೆ ಗದ್ದೆಯಲ್ಲಿ ರಾಸಾಯನಿಕ ಮುಕ್ತ ಭತ್ತ ಬೆಳೆದು ಎಲ್ಲರಿಗೂ ಮಾದರಿಯಾಗಿದ್ದಾರೆ.

ವಿಪರೀತ ಬುದ್ಧಿ ವಿನಾಶಕಾಲ ಎಂಬಂತೆ ಕೃಷಿ ಕ್ಷೇತ್ರದಲ್ಲಿಯೂ ರಾಸಾಯನಿಕಗಳ ಬಳಕೆಯಿಂದ ಆಹಾರ ವಿಷಕಾರಿಯಾಗುತ್ತಿದೆ. ಅದರಲ್ಲೂ ಅಕ್ಕಿಯಲ್ಲಿ ವಿಷದ ಪ್ರಮಾಣ ಹೆಚ್ಚಾಗಿ ಕಂಡುಬರುತ್ತದೆ. ಹೀಗಾಗಿ ರಾಸಾಯನಿಕ ಮುಕ್ತ (ಸಾವಯವ ಕೃಷಿ ಪದ್ಧತಿಯ) ಭತ್ತಕ್ಕೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ.

ಭತ್ತ ನಾಟಿ ಮಾಡಿ, ಕಟಾವು ಮಾಡುವವರೆಗೂ ನಾಲ್ಕರಿಂದ ಐದು ಬಾರಿ ರಾಸಾಯನಿಕಗಳನ್ನು ಗದ್ದೆಗೆ ಸಿಂಪಡಿಸಬೇಕು. ಇದಕ್ಕೆ ಸುಮಾರು 20 ರಿಂದ 25 ಸಾವಿರ ರೂ. ವೆಚ್ಚವಾಗುತ್ತದೆ. ಈ ರಾಸಾಯನಿಕಗಳು ಅತ್ಯಂತ ವಿಷಕಾರಿ ಎಂದು ಈಗಾಗಲೇ ಕೃಷಿ ವಿಜ್ಞಾನ ಕೇಂದ್ರ ದೃಢಪಡಿಸಿದೆ.

ಭಾರತಿಯ ಪ್ರಾಚೀನ ಕಾಲದಿಂದ ಬಂದಿರುವ ಸಾವಯವ ಕೃಷಿ ಪದ್ಧತಿಯಿಂದ ಬೆಳೆದ ಆಹಾರ ಸೇವನೆಯಿಂದ ಯಾವುದೇ ದುಷ್ಪರಿಣಾಮಗಳು ಬೀರವುದಿಲ್ಲ. ಅಷ್ಟೇ ಅಲ್ಲದೆ ಈ ಪದ್ಧತಿಯಿಂದ ಉತ್ತಮ ಇಳುವರಿ ಪಡೆಯಬಹುದು ಎಂದು ಸಾವಯವ ಪದ್ಧತಿಯಿಂದ ಭತ್ತ ಬೆಳೆದ ರೈತರು ಹೇಳುತ್ತಾರೆ.

ಬುಕ್ಕಿಂಗ್ ಹೇಗೆ?:
ಸಾವಯವ ಪದ್ಧತಿಯಿಂದ ಬೆಳೆದ ಭತ್ತಕ್ಕೆ ಗ್ರಾಹಕರು ಮೊದಲೇ ಬುಕ್ಕಿಂಗ್ ಮಾಡಿಸುತ್ತಾರೆ. ಬೆಳೆ ಬಂದ ನಂತರ ಮಾರುಕಟ್ಟೆಯ ಬೆಲೆ ನೀಡಿ ಖರೀದಿಸುತ್ತಾರೆ. ರೈತರಿಗೆ ಸಾವಯವ ಕೃಷಿ ಪದ್ಧತಿಯ ಬಗ್ಗೆ ಮಾಹಿತಿ ಇಲ್ಲ. ಹೀಗಾಗಿ ವಿದೇಶಿ ರಾಸಾಯನಿಕ ಕಂಪನಿಗಳು ನೀಡುವ ಭರವಸೆಗಳಿಗೆ ಮಾರುಹೋಗುತ್ತಿದ್ದಾರೆ. ಇದರಿಂದಾಗಿ ಇಳುವರಿ ಬಾರದೇ ಮತ್ತು ಬೆಳೆದ ಭತ್ತಕ್ಕೆ ಬೆಲೆಯೂ ಸಿಗದೆ ಸಾಲಗಾರರಾಗುತ್ತಿದ್ದಾರೆ ಎಂದು ರೈತ ದೊಡ್ಡಪ್ಪ ದೇಸಾಯಿ ತಿಳಿಸಿದ್ದಾರೆ.

ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು ಸಾವಯವ ಪದ್ಧತಿ ಬಗ್ಗೆ ರೈತರಿಗೆ ತಿಳಿಹೇಳುತ್ತಿಲ್ಲ. ಬದಲಾಗಿ ಒಂದೆರೆಡು ಗದ್ದೆಗಳಿಗೆ ಭೇಟಿ ನೀಡಿ ಫೋಟೋ ಕ್ಲಿಕ್ಕಿಸಿಕೊಂಡು ಮೇಲಾಧಿಕಾರಿಗಳಿಗೆ ಕಳುಹಿಸಿ ತಮ್ಮ ಕೆಲಸ ಮುಗಿಸುತ್ತಿದ್ದಾರೆ ಎಂದು ಕೃಷಿ ಅಧಿಕಾರಿಗಳ ನೆಡೆಗೆ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಗೆದಾಳ ಗ್ರಾಮದಲ್ಲಿ ದೇಸಾಯಿ ಅವರು ಈ ಬಾರಿ ಉತ್ತಮ ಬೆಳೆ ತೆಗೆದಿದ್ದಾರೆ. ಕಡಿಮೆ ವೆಚ್ಚದಲ್ಲಿ ಹೆಚ್ಚು ಇಳುವರಿ ಪಡೆದಿದ್ದಾರೆ. ಅವರನ್ನು ಕಂಡು ಅನೇಕರು ಸಾವಯವ ಪದ್ಧತಿ ಅಳವಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ ಎಂದು ರೈತರಾದ ಪವಾಡೆಪ್ಪ ಹಾಗೂ ಯಮನೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಿತಿಮೀರಿದ ರಸಗೊಬ್ಬರ ಬಳಕೆಯಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿದೆ. ಮಣ್ಣಿನ ಆರೋಗ್ಯ ರಕ್ಷಿಸಲು ರೈತರು ಸಾವಯವ ಕೃಷಿ ಪದ್ಧತಿ ಅನುಸರಿಸಬೇಕು. ಕೃಷಿ ಅಧಿಕಾರಿಗಳು ರೈತರ ಗದ್ದೆಗಳಿಗೆ ಭೇಟಿ ನೀಡಿ, ಸಾವಯವ ಕೃಷಿ ಬಗ್ಗೆ ಸರಿಯಾದ ಮಾಹಿತಿ ನೀಡಬೇಕಾಗಿದೆ ಎಂದು ರೈತ ದೊಡ್ಡಪ್ಪ ದೇಸಾಯಿ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *