ಪಾರಿವಾಳಗಳಿಗೆ ಆಶ್ರಯತಾಣವಾದ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನ!

Public TV
1 Min Read

ಚಿಕ್ಕಬಳ್ಳಾಪುರ: ವಿಧಾನಸೌಧವನ್ನೇ ಮೀರಿಸುವ ಹಾಗೆ ಸುಂದರವಾಗಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನ ನಿರ್ಮಾಣವಾಗಿದೆ. ಭವನದ ಒಳಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದರೆ, ಭವನದ ಮೇಲೆ ಸಾವಿರಾರು ಸಂಖ್ಯೆಯಲ್ಲಿ ಪಾರಿವಾಳಗಳು ಬೀಡುಬಿಟ್ಟಿವೆ.

ಸಿಬ್ಬಂದಿ ಬಂದು ಕಚೇರಿ ತೆರೆಯುತ್ತಿದ್ದಂತೆ ಹಾರಿಬಂದು ಭವನದ ಮೇಲೆ ಸದ್ದು ಮಾಡುತ್ತವೆ. ಭವನದ ಮೇಲೆ ಇರುವ ರಾಷ್ಟ್ರಲಾಂಛನದಿಂದ ಹಿಡಿದು ಗೋಪುರಗಳ ಮೇಲೆ ಹೂವು ಪೋಣಿಸಿ ಹಾರ ಹಾಕಿದಂತೆ ಸಾಲಾಗಿ ಕುಳಿತು ಮನ ಸೆಳೆಯುತ್ತಿವೆ ಎಂದು ಸ್ಥಳೀಯ ಚಂದ್ರಶೇಖರ್ ಹೇಳಿದ್ದಾರೆ.

ಸಾರ್ವಜನಿಕರ ಆಕರ್ಷಣೆಗೆ ಕಾರಣವಾಗಿರುವ ಪಾರಿವಾಳಗಳನ್ನು ಯಾರೂ ಸಾಕಿಲ್ಲ. ಕಚೇರಿಗಳಲ್ಲಿ ಅವರು ಬಂದಿಲ್ಲ ಇವರು ಬಂದಿಲ್ಲ ಎಂದು ಬೇಸರದಿಂದ ಕಾಲ ಕಳೆಯುವ ಸಾರ್ವಜನಿಕರು ಪಾರಿವಾಳಗಳ ಚಿತ್ತಾರದ ಹಾರಾಟ-ಗೂಯ್ ಗುಟ್ಟುವ ಸದ್ದನ್ನ ನೋಡಿ ಬೇಸರ ಕಳೆಯುತ್ತಾರೆ. ಮತ್ತೊಂದೆಡೆ ಮುಗಿಲೆತ್ತರದ ಕಟ್ಟಡಗಳ ಮೇಲೆ ಯಾರ ಕಿರಿಕಿರಿಯೂ ಇಲ್ಲದೆ ಇರುವುದರಿಂದ ಸ್ವಚ್ಛಂದ ಸ್ವತಂತ್ರವಾಗಿ ಆಶ್ರಯಿಸುತ್ತವೆ ಎಂದು ಪಶುವೈಧ್ಯ ಡಾ.ಜ್ಞಾನೇಶ್ ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಗುಬ್ಬಚ್ಚಿ, ಪಾರಿವಾಳಗಳು ನಗರ ಪ್ರದೇಶಗಳಿಂದ ಕಾಣೆಯಾಗುತ್ತಿವೆ. ಆದರೆ ನಗರಕ್ಕೆ ಹೊಂದಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಮೇಲೆ ಪಾರಿವಾಳಗಳ ಪರಿವಾರವೇ ಬಿಡಾರ ಹೂಡಿದ್ದು, ಭವನದ ಮೇಲೆ ಬಾನಾಡಿ ಪಾರಿವಾಳಗಳ ಕಲರವ ನೋಡುಗರ ಮನಸೂರೆಗೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *