ಮಂಡ್ಯ ರೆಬೆಲ್ಸ್ ಡಿನ್ನರ್: ಸಿಎಂಗೆ ಸೆಡ್ಡು ಹೊಡೆದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

Public TV
2 Min Read

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ರೆಬೆಲ್ ನಾಯಕರು ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾ ಅವರೊಂದಿಗೆ ಡಿನ್ನರ್ ಮಾಡಿದ ವಿಡಿಯೋ ವಿಚಾರವಾಗಿ ಸಿಎಂ ಕುಮಾರಸ್ವಾಮಿ ಅವರ ಪ್ರತಿಕ್ರಿಯೆಗೆ ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೆಡ್ಡು ಹೊಡೆದಿದ್ದಾರೆ.

ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು, ಮಂಡ್ಯ ರೆಬೆಲ್ಸ್ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸಿಎಂ ಕುಮಾರಸ್ವಾಮಿ ಅವರು ಹೇಳುತ್ತಾರೆ. ಆದರೆ ಒಟ್ಟಿಗೆ ಭೋಜನಕೂಟದಲ್ಲಿ ಭಾಗವಹಿಸಿದರೆ ಅದನ್ನು ತಪ್ಪು ಹೇಳಲು ಸಾಧ್ಯವಿಲ್ಲ. ನಮ್ಮವರು ತಪ್ಪು ಮಾಡಿದ್ದಾರೆ ಎನ್ನುವುದಕ್ಕೆ ಯಾವುದಾದರೂ ಸಾಕ್ಷಿ ಬೇಕಾಗುತ್ತದೆ. ಈಗಾಗಲೇ ನೋಡಿದರೆ ನಮ್ಮ ಪಕ್ಷದಲ್ಲಿ ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಪರೋಕ್ಷವಾಗಿ ರೆಬೆಲ್ಸ್ ನಾಯಕರಿಗೆ ಬೆಂಬಲ ವ್ಯಕ್ತಪಡಿಸಿದರು.

ನಾಯಕರು ಯಾವುದೇ ರಾಜಕೀಯ ವೇದಿಕೆಯಲ್ಲಿ ಭಾಗವಹಿಸಿಲ್ಲ. ಈ ಬಗ್ಗೆ ತನಿಖೆ ನಡೆಸುತ್ತೇವೆ, ತಪ್ಪು ನಡೆದಿದೆ ಎಂದರೆ ಕ್ರಮಕೈಗೊಳ್ಳುತ್ತೇವೆ. ಮಂಡ್ಯ, ಮೈಸೂರಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ ಎಂಬುವುದನ್ನು ಒಪ್ಪಿಕೊಳ್ಳುತ್ತೇನೆ. ಇದಕ್ಕೆ ಬೇರೆ ಬೇರೆ ಕಾರಣಗಳಿದ್ದು, ಅದನ್ನು ಮುಚ್ಚಿ ಹಾಕುವ ಕೆಲಸ ಮಾಡಲ್ಲ ಎಂದರು.

ಕೆಲ ಕ್ಷೇತ್ರಗಳಲ್ಲಿ ನಮಗೇ ಜೆಡಿಎಸ್ ನಾಯಕರು ಬೆಂಬಲ ಕೊಟ್ಟಿಲ್ಲ. ಕೆಲ ಕಡೆ ಬಿಜೆಪಿಯವರೇ ನಮಗೇ ಬೆಂಬಲ ಕೊಟ್ಟಿದ್ದಾರೆ. ರಾಜಕೀಯ ವಿಚಾರದಲ್ಲಿ ಒಂದೇ ಪಕ್ಷದ ನಾಯಕರು ಕೂಡ ಕೆಲ ಸಮಯದಲ್ಲಿ ಸಹಾಯ ಮಾಡಲ್ಲ. ಆದ್ದರಿಂದ ಯಾರೋ ಆರೋಪ ಮಾಡಿದ ತಕ್ಷಣ ನಾವು ಕ್ರಮಕೈಗೊಳ್ಳಲು ಆಗುವುದಿಲ್ಲ. ಆದರೆ ಈ ಬಗ್ಗೆ ಶಿಸ್ತು ಸಮಿತಿಗೆ ಮನವಿ ಮಾಡಿ, ಸಾಕ್ಷಿ ಲಭಿಸಿದರೆ ಕ್ರಮಕೈಗೊಳ್ಳಲಾಗುವುದು ಎಂದರು.

ಇದೇ ವೇಳೆ ಜಿಡಿಟಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿ, ಇದು ಜೆಡಿಎಸ್ ಪಕ್ಷದ ಶಿಸ್ತು ಕ್ರಮದ ಮೇಲೆ ನಿಂತಿದೆ. ಕೋಲಾರ ಕ್ಷೇತ್ರದಲ್ಲೂ ಕೂಡ ಜೆಡಿಎಸ್ ನಾಯಕರು ಬೆಂಬಲ ಕೊಟ್ಟಿಲ್ಲ. ಇದರ ಬಗ್ಗೆ ಅವರ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಕಾದು ನೀಡುತ್ತೇವೆ ಎಂದರು ಸ್ಪಷ್ಟಪಡಿಸಿದರು. ಅಲ್ಲದೇ ಸ್ಥಳೀಯ ಕಾರಣಗಳಿಗಾಗಿ ಮಂಡ್ಯ, ಮೈಸೂರಿನಲ್ಲಿ ಮೈತ್ರಿ ಯಶಸ್ವಿಯಾಗಿಲ್ಲ ಎಂದರು.

ನಮ್ಮ ಪಕ್ಷದಲ್ಲಿ ಸಾಕ್ಷಿ ಸಮೇತ ಬಂದ ದೂರುಗಳ ಅನ್ವಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಸೇರಿದಂತೆ ಹಲವು ಮಂದಿಯ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಸರಿ ತಪ್ಪು ಎರಡು ಪಕ್ಷದ ಕಡೆಯಿಂದ ಆಗಿರಬಹುದು. ಸದ್ಯ ಎರಡು ಉಪ ಚುನಾವಣೆ ಇದೆ. ಈ ಬಗ್ಗೆ ಹೆಚ್ಚಿನ ಗಮನ ಕೊಡುತ್ತೇವೆ. ನಾವೆಲ್ಲಾ ಒಂದಾಗಿ ಪ್ರಚಾರ ಮಾಡುತ್ತೇವೆ. ಈ ಬೆಳವಣಿಗೆ ಹಾಗೂ ಫಲಿತಾಂಶ ಸರ್ಕಾರದ ಮೇಲೆ ಯಾವುದೇ ಪ್ರಭಾವ ಬೀರಲ್ಲ ಏನು ಆಗುವುದಿಲ್ಲ ಎಂದರು.

Share This Article
Leave a Comment

Leave a Reply

Your email address will not be published. Required fields are marked *