ಟೆನ್ಶನ್.. ಟೆನ್ಶನ್.. ಮಾಧ್ಯಮಗಳ ಮೇಲೆ ಯಾಕಿಷ್ಟು ಕೋಪ ‘ಸ್ವಾಮಿ’?

Public TV
2 Min Read

– ಮಂಡ್ಯ – ಮೈಸೂರು ಬಗ್ಗೆ ಬಿಸಿ ಬಿಸಿ ಚರ್ಚೆ
– ರೆಸಾರ್ಟ್ ಒಳಗಿದ್ದವರು ಇಂದು ಕಾಣಿಸಿಕೊಳ್ಳಲೇ ಇಲ್ಲ

ಉಡುಪಿ: ಸಿಎಂ ಕುಮಾರಸ್ವಾಮಿ ಅವರಿಗೆ ಟೆನ್ಶನ್. ಸಿಎಂಗೆ ಭದ್ರತೆ ಕೊಡುವ ಪೊಲೀಸರಿಗೂ ಟೆನ್ಶನ್.. ಸುದ್ದಿಗೆಂದು ಹೋದ ಮಾಧ್ಯಮಗಳಿಗೂ ಟೆನ್ಶನ್. ಉಡುಪಿಯ ಕಾಪುವಿನ ಸಾಯಿರಾಧಾ ರೆಸಾರ್ಟ್ ಇವತ್ತು ಫುಲ್ ಟೆನ್ಶನ್‍ನಲ್ಲೇ ಕಳೆದುಹೋಗಿದೆ.

ಸಿಎಂ ಕುಮಾರಸ್ವಾಮಿ ಅವರಿಗೆ ಮಂಡ್ಯ ಗೆಲುವಿನ ಚಿಂತೆ. ಇನ್ನೊಂದು ಕಡೆ ಸಚಿವ ಜಿ.ಡಿ ದೇವೇಗೌಡ ಹೇಳಿಕೆಯ ಟೆನ್ಶನ್. ಇತ್ತ ಪೊಲೀಸರಿಗಂತು ಮಾಧ್ಯಮ ನಿರ್ಭಂದ ಬಗ್ಗೆಯೇ ಟೆನ್ಶನ್.

ರಾಜಕಾರಣ, ಯಾವುದೇ ಜಂಜಾಟ ಬೇಡ ಅಂತ ಉಡುಪಿಗೆ ಬಂದ ಸಿಎಂಗೆ ರೆಸಾರ್ಟಿನಲ್ಲಿಯೂ ಬರೀ ಮಂಡ್ಯದ್ದೇ ಚಿಂತೆಯಾಗಿದೆ. ತಡರಾತ್ರಿ ಸಚಿವ ಪುಟ್ಟರಾಜು ಅವರನ್ನು ಕರೆಸಿಕೊಂಡು ಚರ್ಚೆ ಮಾಡಿದ್ದಾರೆ. ಇದಾದ ಕೂಡಲೇ ಸಿಎಂ ಅವರನ್ನು ಕಂಗೆಡಿಸಿದ್ದು, ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ಮತ ಹಾಕಿದ್ದಾರೆ ಎಂಬ ಸಚಿವ ಜಿ.ಟಿ.ದೇವೆಗೌಡ ಅವರ ಹೇಳಿಕೆ.

ಸಚಿವರ ಮಾತು ಕೇಳಿದ ಕುಮಾರಸ್ವಾಮಿ ಅವರಿಗೆ ತಳಮಳ ಶುರುವಾಗಿದೆ. ಹೀಗಾಗಿ ಹೆಚ್ಚುವರಿ ಮೂರು ಟಿವಿಗಳನ್ನು ತರಿಸಿಕೊಂಡಿದ್ದಾರೆ. ಚಿಕಿತ್ಸೆಯ ನಡುವೆಯೂ ಪ್ರಸಕ್ತ ರಾಜಕೀಯ ಬೆಳವಣಿಗೆ ತಿಳಿದುಕೊಳ್ಳಲು ರೆಸಾರ್ಟಿನಲ್ಲಿ ಎಲ್ಲಾ ನ್ಯೂಸ್ ಚಾನೆಲ್‍ಗಳು ಆನ್ ಆಗಿವೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.

ಸಿಎಂಗೆ ಚಿಕಿತ್ಸೆಯ ನಡುವೆ ರಾಜಕೀಯದ ಬಗ್ಗೆಯೇ ಚಿಂತೆ. ಇನ್ನೊಂದು ಕಡೆ ಪೊಲೀಸರನ್ನು ಮಾಧ್ಯಮದವರನ್ನು ನಿರ್ಬಂಧಿಸುವುದೇ ಚಿಂತೆಯಾಗಿತ್ತು. ಸಾಯಿರಾಧಾ ರೆಸಾರ್ಟ್ ಮುಂದೆ ಮಾಧ್ಯಮದವರ ಮೇಲೆ ಪೊಲೀಸರು ದರ್ಪ ತೋರಿಸಿದ್ದಾರೆ. ಸಾರ್ವಜನಿಕ ರಸ್ತೆಯಲ್ಲಿ ನಿಂತು ಶೂಟಿಂಗ್ ಮಾಡಿದ್ದಕ್ಕೆ ಶಿರ್ವ ಠಾಣಾ ಎಸ್.ಐ ಅಬ್ಲುದ್ ಖಾದರ್ ಕ್ಯಾಮೆರಾಮೆನ್‍ಗಳನ್ನು ತಳ್ಳಿ ದರ್ಪ ಪ್ರದರ್ಶನ ಮಾಡಿದ್ದಾರೆ. ಕಾಪು ಠಾಣಾ ಎಸ್.ಐ ನವೀನ್ ಎಸ್ ನಾಯ್ಕ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿದ್ದಾರೆ.

ಪೊಲೀಸರಿಂದ ಸಾರ್ವಜನಿಕರ ಮೇಲೆ ಕೂಡಾ ದಬ್ಬಾಳಿಕೆ ನಡೆದಿದೆ. ರೆಸಾರ್ಟ್ ಸುತ್ತಲಿನ ಮನೆಯವರ ಮೇಲೆ ಪೊಲೀಸರು ಬೆದರಿಕೆ ಹಾಕಿದ್ದಾಕೆ. ಮಾಧ್ಯಮದವರಿಗೆ ಆಶ್ರಯ ನೀಡದಂತೆ ಒತ್ತಡ ಹಾಕಿದ್ದಾರೆ. ಒಂಟಿ ಮಹಿಳೆ ಇದ್ದ ಮನೆಗೆ ಬಂದು ನಿಮ್ಮ ಮನೆಯ ದಾಖಲೆ ಕೊಡಿ, ಮುಂದೆ ನಿಮ್ಮ ಮೇಲೂ ಕ್ರಮಕೈಗೊಳ್ಳಲಾಗುತ್ತದೆ ಎಂದು ಕಾಪು ಠಾಣಾ ಎಸ್‍ಐ ನವೀನ್ ಎಸ್.ನಾಯ್ಕ ಬೆದರಿಕೆ ಹಾಕಿದ್ದಾರೆ.

ಈ ನಡುವೆ ವಿಧಾನಪರಿಷತ್ ಸದಸ್ಯ ಬಿ.ಎಂ.ಫಾರೂಕ್, ಕಾಂಗ್ರೆಸ್ ಮಾಜಿ ಶಾಸಕ ಮೊಯ್ದೀನ್ ಬಾವಾ ರೆಸಾರ್ಟ್‍ಗೆ ದೌಡಾಯಿಸಿದ್ದಾರೆ. ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಶಾಸಕರು, ಸಿಎಂ ಕುಮಾರಸ್ವಾಮಿಯವರು ರಾಜಕೀಯ ಲೆಕ್ಕಾಚಾರ ಹಾಕುತ್ತಿದ್ದಾರೆ ಎಂದು ಬಾವಾ ಹೇಳಿದರು.

ರೆಸಾರ್ಟ್ ಒಳಗಿನ ಚಲನವಲನ ಹೊರಗಡೆ ಗೊತ್ತಾಗದ ಹಾಗೆ ಎರಡನೇ ಹಂತದಲ್ಲಿ ಪರದೆ ಅಳವಡಿಸಲಾಗಿದೆ. ಮಾಹಿತಿ ಹೊರ ಹೋಗದಂತೆ ಎಚ್ಚರಿಕೆ ವಹಿಸಿರುವ ಪೊಲೀಸರು, ರೆಸಾರ್ಟ್ ಒಳಗೆ ಮೊಬೈಲ್ ತೆಗೆದುಕೊಂಡು ಹೋಗದಂತೆ ಸಿಬ್ಬಂದಿಗೆ ನಿರ್ಬಂಧ ಹೇರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *