ನವದೆಹಲಿ: ಸೇಡನ್ನು ತೀರಿಸಿಕೊಳ್ಳಲು 8 ವರ್ಷದ ಬಾಲಕನೊಬ್ಬ 1 ವರ್ಷದ ಮಗುವನ್ನು ಅಪಹರಿಸಿ ಕೊಲೆ ಮಾಡಿ, ವಿಕೃತಿ ಮೆರೆದ ಅಮಾನವೀಯ ಘಟನೆ ರಾಷ್ಟ್ರ ರಾಜಧಾನಿಯ ಮಂಡಿ ಗ್ರಾಮದಲ್ಲಿ ನಡೆದಿದ್ದು, ಜನರನ್ನು ಬೆಚ್ಚಿಬೀಳಿಸಿದೆ.
ಆರೋಪಿ ಹಾಗೂ ಕೊಲೆಯಾದ ಮಗುವಿನ ಮನೆ ಅಕ್ಕಪಕ್ಕದಲ್ಲೇ ಇದೆ. ಹಾಗೆಯೇ ಇಬ್ಬರ ತಂದೆ ದಿನ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಆರೋಪಿಯನ್ನು ಮಗುವಿನ ಅಕ್ಕ ತಳ್ಳಿದ್ದಳು. ಆದ್ದರಿಂದ ಬಾಲಕನ ತಲೆಗೆ ಕೊಂಚ ಪೆಟ್ಟಾಗಿತ್ತು. ಇದೇ ವಿಷಯಕ್ಕೆ ಮಗುವಿನ ಅಕ್ಕನ ಮೇಲೆ ಬಾಲಕನಿಗೆ ಕೋಪವಿತ್ತು. ಅದು ಸಮಯ ಕಳೆದಂತೆ ಸೇಡಿಗೆ ತಿರುಗಿತ್ತು. ಅಕ್ಕನ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾದ ಬಾಲಕ, ಆಕೆಯ 1 ವರ್ಷದ ತಮ್ಮನನ್ನು ಅಪಹರಿಸಿ ಕೊಲೆ ಮಾಡಿದ್ದಾನೆ.
ಬಾಲಕ ಶನಿವಾರ ರಾತ್ರಿ ಈ ಕೃತ್ಯವೆಸಗಿದ್ದಾನೆ. ಮನೆಯ ಮಹಡಿ ಮೇಲೆ ತಾಯಿ ಹಾಗೂ ಅಕ್ಕನ ಜೊತೆ ಮಲಗಿದ್ದ ಮಗುವನ್ನು ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಬಾಲಕ ಹೊತ್ತೊಯ್ದಿದ್ದಾನೆ. ಮರುದಿನ ಮನೆಯವರು ಮಗು ನಾಪತ್ತೆಯಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಇದೇ ವೇಳೆ ಆರೋಪಿ ಬಾಲಕ ಕೂಡ ಕಾಣೆಯಾಗಿದ್ದಾನೆ ಎಂದು ಆತನ ಮನೆಯವರು ಕೂಡ ದೂರು ನೀಡಿದ್ದರು. ಈ ಮಧ್ಯೆ ಮಗುವಿನ ಶವ ಆರೋಪಿ ಬಾಲಕನ ಮನೆ ಪಕ್ಕದಲ್ಲಿ ಪತ್ತೆಯಾಗಿದೆ.
ಮಗುವಿನ ತಲೆ, ಕಣ್ಣು, ಹೊಟ್ಟೆಗೆ ಗಾಯವಾಗಿದ್ದು, ಕಿವಿಯಿಂದ ರಕ್ತಸ್ರಾವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಳಿಕ ಆರೋಪಿಯನ್ನು ಕೂಡ ಪೊಲೀಸರು ಪತ್ತೆಮಾಡಿದ್ದು, ವಶಕ್ಕೆ ಪಡೆದು ಬಾಲಕನ ವಿಚಾರಣೆ ನಡೆಸುತ್ತಿದ್ದಾರೆ.