ತಮಿಳುನಾಡಲ್ಲಿ ಅಡಗಿದ್ದಾರೆ 19 ಮಂದಿ ಉಗ್ರರು – ರೈಲಿನಲ್ಲಿ ಕೃತ್ಯ ಎಸಗಲು ಪ್ಲಾನ್

Public TV
2 Min Read

– ಅಪರಿಚಿತ ಕರೆ ಬೆನ್ನಲ್ಲೇ ರಾಜ್ಯದಲ್ಲಿ ಹೈ ಅಲರ್ಟ್
– ಶುಕ್ರವಾರ ಸಂಜೆ ಕಂಟ್ರೋಲ್ ರೂಂಗೆ ಕರೆ

ಬೆಂಗಳೂರು: ಲಂಕಾದಲ್ಲಿ ಬಾಂಬ್ ಸ್ಫೋಟದಲ್ಲಿ 253 ಮಂದಿ ಬಲಿಯಾದ ಬೆನ್ನಲ್ಲೇ ದಕ್ಷಿಣ ಭಾರತದಲ್ಲಿ ಉಗ್ರ ದಾಳಿಯ ಆತಂಕ ಎದುರಾಗಿದೆ.  ದಕ್ಷಿಣದ 8 ರಾಜ್ಯಗಳಿಗೆ 19 ಮಂದಿ ಉಗ್ರರು ನುಸುಳಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಕರ್ನಾಟಕ, ತಮಿಳುನಾಡು, ಗೋವಾ, ಕೇರಳ, ಆಂಧ್ರ, ಮಹಾರಾಷ್ಟ್ರ, ತೆಲಂಗಾಣ, ಪುದುಚೆರಿಗಳು ಉಗ್ರರ ಟಾರ್ಗೆಟ್ ಆಗಿವೆ ಎನ್ನುವ ವಿಚಾರ ತಿಳಿದು ಬಂದಿದೆ.

ಶುಕ್ರವಾರ ಸಂಜೆ ಲಾರಿ ಡ್ರೈವರ್ ಸ್ವಾಮಿ ಸುಂದರ್ ಎಂಬಾತ ಬೆಂಗಳೂರಿನ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ರೈಲಿನಲ್ಲಿ ದಾಳಿ ನಡೆಸಲು ಉಗ್ರರು ಪ್ಲಾನ್ ಮಾಡಿದ್ದಾರೆ. 19 ಮಂದಿ ಉಗ್ರರು ರಾಮನಾಥಪುರಂನಲ್ಲಿದ್ದಾರೆ ಎಂದು ತಿಳಿಸಿದ್ದಾನೆ.

ಈ ಕರೆಯ ಬೆನ್ನಲ್ಲೇ ಎಲ್ಲಾ 8 ರಾಜ್ಯಗಳಿಗೆ ಪತ್ರ ಬರೆದಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು, ತಮಿಳುನಾಡಿನ ರಾಮನಾಥಪುರಂನಲ್ಲಿ 19 ಮಂದಿ ಉಗ್ರರು ಅಡಗಿದ್ದಾರೆ ಅಂತಾ ಎಚ್ಚರಿಸಿದ್ದಾರೆ. ಇತ್ತ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ಹೈ ಅಲರ್ಟ್ ಘೋಷಿಸಲಾಗಿದೆ. ಮಂದಿರ, ಮಸೀದಿ, ಚರ್ಚ್, ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.

ತಮಿಳುನಾಡಿಲ್ಲಿದೆ ಉಗ್ರರ ಜಾಲ:
ಭಾರತದಲ್ಲಿ ಐಸಿಸ್ ಸಂಘಟನೆಯ ಜೊತೆ ನಂಟು ಹೊಂದಿದ್ದ ಆರೋಪದ ಅಡಿಯಲ್ಲಿ ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ಹಲವು ಮಂದಿಯನ್ನು ಬಂಧಿಸಿದೆ. 2018ರ ಡಿ.19 ರಂದು ತಮಿಳುನಾಡಿನ ಕುಣಿಯಾಮುತ್ತೂರ್, ಉಕ್ಕಡಮ್, ಚೆನ್ನೈನ ಓಟೇರಿ, ವಿಲ್ಲಿಪುರಾಂ ಬಳಿಯ ತಿಂಡಿವಣಂ ಹಾಗು ಕೊಯಂಬತ್ತೂರಿನ ವೆರೈಟಿ ಹಾಲ್ ರಸ್ತೆಯಲ್ಲಿ ಶಂಕಿತ ಐಸಿಸ್ ಉಗ್ರರನ್ನು ಬಂಧಿಸಲಾಗಿತ್ತು.

ಬಂಧನಕ್ಕೆ ಒಳಗಾದ 6 ಮಂದಿಯ ವಿಚಾರಣೆ ವೇಳೆ ಹಿಂದೂ ನಾಯಕರನ್ನು ಮತ್ತು ದೇಶದ ಹಲವೆಡೆ ವಿಧ್ವಂಸಕಾರಿ ಕೃತ್ಯ ನಡೆಸಲು ಸಂಚು ರೂಪಿಸಿದ್ದ ವಿಚಾರ ಬೆಳಕಿಗೆ ಬಂದಿತ್ತು. ಅಷ್ಟೇ ಅಲ್ಲದೇ ತಮಿಳುನಾಡು, ಕೇರಳ ಹಾಗೂ ಶ್ರೀಲಂಕಾದಲ್ಲಿ ಇಸ್ಲಾಮಿಕ್ ಆಡಳಿತ ಜಾರಿ ಮಾಡಲು ನ್ಯಾಷನಲ್ ಥೌಹೀತ್ ಜಮಾತ್ (ಎನ್‍ಟಿಜೆ) ಮುಖ್ಯಸ್ಥ ಮೌಲ್ವಿ ಜಹ್ರಾನ್ ಬಿನ್ ಹಶೀಮ್ ಕರೆ ನೀಡಿದ್ದ ವಿಡಿಯೋ ಸಿಕ್ಕಿತ್ತು.

ಈ ವಿಡಿಯೋವನ್ನು ಸಿಡಿ, ಡಿವಿಡಿ, ಪೆನ್ ಡ್ರೈವ್ ಸೇರಿಂತೆ ವಿವಿಧ ಮಾದರಿಗಳಲ್ಲಿ ಸಂಗ್ರಹಿಸಿಡಲಾಗಿತ್ತು. ಹಶೀಮ್ ವಿಡಿಯೋ ತನಿಖೆ ನಡೆಸಿದ ವೇಳೆ ಶ್ರೀಲಂಕಾದಲ್ಲಿರುವ ಕೆಲ ಉಗ್ರರ ಜೊತೆ ಈತನಿಗೆ ಸಂಪರ್ಕ ಇರುವುದು ಸ್ಪಷ್ಟವಾಗಿತ್ತು. ಧರ್ಮದ ಹೆಸರಿನಲ್ಲಿ ಯುವಕರ ತಲೆಕೆಡಿಸಿ ಇಸ್ಲಾಮಿಕ್ ಉಗ್ರ ಸಂಘಟನೆಯತ್ತ ಯುವಕರನ್ನು ಈತ ಸೆಳೆಯುತ್ತಿದ್ದಾನೆ ಎನ್ನುವುದು ದೃಢಪಟ್ಟಿತ್ತು. ಶ್ರೀಲಂಕಾ, ಭಾರತ ಅಲ್ಲದೇ ಬಾಂಗ್ಲಾದೇಶದೊಂದಿಗೂ ಸಂಪರ್ಕ ಹೊಂದಿದ್ದ ವಿಚಾರ ಆತನ ಮೊಬೈಲ್ ಕರೆ ವಿವರಗಳಿಂದ ಮಾಹಿತಿ ಲಭ್ಯವಾಗಿತ್ತು. ಪರಿಣಾಮ ಬಾಂಗ್ಲಾದೇಶ ಕೂಡ ಈ ಬಗ್ಗೆ ಎಚ್ಚರಿಕೆ ವಹಿಸುವುದು ಸೂಕ್ತ ಎನ್ನುವ ಸಲಹೆಯನ್ನು ಭಾರತ ನೀಡಿತ್ತು.

Share This Article
Leave a Comment

Leave a Reply

Your email address will not be published. Required fields are marked *