ಬೆಂಗಳೂರು: ಒಂಬತ್ತನೇ ಮಹಡಿಯಿಂದ ಕೆಳಗೆ ಬಿದ್ದು ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ರಾಮಕೃಷ್ಣಾಪುರದಲ್ಲಿನ ಅಶ್ವಿನಿ ಸಿತಾರ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.
ಪ್ರಿಯಾಂಕ ಪಾಲ್(17) ಮೃತ ವಿದ್ಯಾರ್ಥಿನಿ. ಪ್ರಿಯಾಂಕ ಹೆಬ್ಬಗೋಡಿ ಸಮೀಪದ ಸೆಂಟ್ ಫ್ರಾನ್ಸಿಸ್ ಡಿ ಸೇಲ್ಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದಳು. ಇಂದು ಬೆಳಗ್ಗೆ ಸುಮಾರು 8 ಗಂಟೆ ಸಮಯದಲ್ಲಿ ಅಪಾರ್ಟ್‌ಮೆಂಟ್ ಟೆರೆಸ್ ಮೇಲೆ ವ್ಯಾಯಾಮ ಮಾಡಲು ಹೋಗಿದ್ದಳು.
ಸ್ವಲ್ಪ ಸಮಯದ ನಂತರ ಅಕ್ಕಪಕ್ಕದ ನಿವಾಸಿಗಳಿಗೆ ದೊಡ್ಡ ಶಬ್ದ ಕೇಳಿಸಿದ್ದು, ಕೆಳಗೆ ನೋಡಿದರೆ ಪ್ರಿಯಾಂಕ ರಕ್ತದ ಮಡುವಿನಲ್ಲಿ ಬಿದ್ದು ಸಾವನ್ನಪ್ಪಿದ್ದಳು. ಅಪಾರ್ಟ್‌ಮೆಂಟ್ ಟೆರೆಸ್ ಮೇಲೆ ಇದ್ದ ನೀರಿನ ಪೈಪ್ ಗಳು ವ್ಯಾಯಾಮ ಮಾಡುವಾಗ ಕಾಲಿಗೆ ಸಿಕ್ಕಿ ಕೆಳಗೆ ಬಿದ್ದಿದ್ದಾಳೆ ಎಂದು ಮೃತಳ ತಂದೆ ಅಂಜನ್ ಕುಮಾರ್ ಪಾಲ್ ತಿಳಿಸಿದ್ದಾರೆ.
ಅಪಾರ್ಟ್‌ಮೆಂಟ್ ನಿವಾಸಿಗಳು ಮಾತ್ರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಟೆರೆಸ್ ಸುತ್ತ ನಾಲ್ಕು ಅಡಿ ತಡೆಗೋಡೆ ಇದೆ. ಹೀಗಾಗಿ ಪ್ರಿಯಾಂಕ ಪಾಲ್ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಘಟನೆ ನಡೆದ ಸ್ಥಳಕ್ಕೆ ಸೂರ್ಯನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.