ತೋಳ ಬಂತು ತೋಳ ಕಥೆ ಹೇಳ್ತಿದ್ದಾರೆ ರಮೇಶ್ ಜಾರಕಿಹೊಳಿ: ಲಕ್ಷ್ಮಿ ಹೆಬ್ಬಾಳ್ಕರ್

Public TV
2 Min Read

– ನಾಯಕರನ್ನು ಹುಟ್ಟು ಹಾಕುವ ಪಕ್ಷಕ್ಕೆ ಯಾರು ಅನಿವಾರ್ಯವಲ್ಲ
– ಇಂತಹ ನಾಯಕರು ಹೋದರೆ ಸೆಕೆಂಡ್ ಲೈನ್ ನಾಯಕರು ಮುಂದೆ ಬರ್ತಾರೆ

ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ತೋಳ ಬಂತು ತೋಳದ ಕಥೆಯನ್ನು ಹೇಳಿಕೊಂಡು ಬರುತ್ತಿದ್ದಾರೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವ್ಯಂಗ್ಯವಾಡಿದ್ದಾರೆ.

ರಮೇಶ್ ಜಾರಕಿಹೊಳಿ ಪಕ್ಷ ತೊರೆಯುವ ವಿಚಾರದ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ತೋಳ ಬಂತು ತೋಳ ಬಂತು ಎಂಬಂತೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡುತ್ತೇನೆ ಎಂದು ಹೇಳುತ್ತಿದ್ದಾರೆ. ನಾನು ಸೇರಿದಂತೆ ಪಕ್ಷಕ್ಕೆ ಯಾರು ಅನಿವಾರ್ಯ ಇಲ್ಲ. ರಾಷ್ಟ್ರೀಯ ಪಕ್ಷಗಳಿಗೆ ಯಾರು ಅನಿವಾರ್ಯ ಇಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

ಮತದಾನ ದಿನ ಅತ್ಯಂತ ಮಹತ್ವದ ದಿನವಾಗಿದ್ದು, ಇಂದು ಇಂತಹ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ. ಪಕ್ಷದಲ್ಲಿ ಬಹಳಷ್ಟು ಜನ ಬರ್ತಾರೆ, ಹೋಗುತ್ತಿರುತ್ತಾರೆ. ರಮೇಶ್ ಜಾರಕಿಹೊಳಿ ಒಬ್ಬರು ಪಕ್ಷದಿಂದ ಹೊರ ಹೋದರೆ ಕಾಂಗ್ರೆಸ್‍ಗೆ ಯಾವುದೇ ನಷ್ಟವಿಲ್ಲ. ಪಕ್ಷ ನಾಯಕರನ್ನು ಹುಟ್ಟಿಸುತ್ತದೆ. ಹೊಸ ನಾಯಕ, ನಾಯಕತ್ವವನ್ನು ಹುಟ್ಟಿಸುವ ಸಾಮಾರ್ಥ್ಯ ಕಾಂಗ್ರೆಸ್ ಹೊಂದಿದೆ. ಇಂತಹ ನಾಯಕರು ಹೋದರೆ ಸೆಕೆಂಡ್ ಲೈನ್ ನಾಯಕರು ಮುಂದೆ ಬರಲು ಸಾಧ್ಯವಾಗುತ್ತದೆ. ಪಕ್ಷದಲ್ಲಿ ಇರಬೇಕೋ ಅಥವಾ ಬಿಡಬೇಕೋ ಎಂಬುವುದು ರಮೇಶ್ ಜಾರಕಿಹೊಳಿ ಅವರ ವೈಯಕ್ತಿಕ ವಿಚಾರ ಎಂದರು.

ಮತದಾನ ಮಾಡಿ ಮಾಧ್ಯಮಗಳ ಜೊತೆ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ರಾಜಕೀಯಕ್ಕೆ ಬಂದಾಗಿನಿಂದ ಸಂಸದೆ ಅಗಬೇಕೆಂಬ ಆಸೆ ನನಗಿತ್ತು. ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಹಾಗಾಗಿ ಸಂಸದ ಚುನಾವಣೆಗೆ ನಾನೇ ಸ್ಪರ್ಧೆ ಮಾಡಿದ್ದೇನೆ ಎಂದು ತಿಳಿದುಕೊಂಡು ನನಗೆ ನೀಡಲಾಗಿದ್ದ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದೇನೆ. ಕಾಂಗ್ರೆಸ್ ಅಭ್ಯರ್ಥಿ ವಿರೂಪಾಕ್ಷಿ ಸಾಧುನವರ್ ಒಳ್ಳೆಯ ಕುಟುಂಬದಿಂದ ಬಂದ ನಾಯಕರಾಗಿದ್ದು, ಹೆಚ್ಚು ಮತಗಳಿಂದ ಗೆಲ್ಲಲಿ ಎಂದು ಶುಭ ಹಾರೈಸಿದರು.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪಕ್ಷದಿಂದ ಹೊರ ಹೋದ ಮೇಲೆ ಮಾತನಾಡುತ್ತೇನೆ. ಕಳೆದ 30 ರಿಂದ 35 ದಿನ ನನ್ನ ಪಕ್ಷದ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿಕೊಂಡಿದ್ದರಿಂದ ಹೆಚ್ಚಿನ ಮಾಹಿತಿ ನನಗಿಲ್ಲ. ಇಲ್ಲಿ ನಾನೇ ಅಭ್ಯರ್ಥಿ ಎಂದು ತಿಳಿದು ಪ್ರಚಾರ ಮಾಡಿದ್ದೇನೆ ಎಂದು ಹೆಬ್ಬಾಳ್ಕರ್ ತಿಳಿಸಿದರು.

ಸಮುದ್ರ ಮಥನವಾದಾಗ ಅಮೃತ ಮತ್ತು ವಿಷ ಎರಡೂ ಬರುತ್ತದೆ. ಎರಡನ್ನೂ ಸೇವಿಸಲು ಸಿದ್ಧವಾಗಬೇಕು. ಇಂತಹ ಸೂಕ್ಷ್ಮ ವಿಚಾರಗಳನ್ನು ಹೈಕಮಾಂಡ್ ಮತ್ತು ರಾಜ್ಯದ ನಾಯಕರು ನೋಡಿಕೊಳ್ಳುತ್ತಾರೆ. ನಮ್ಮ ಒಂದು ಹೇಳಿಕೆಯಿಂದ ಯಾವುದೇ ಬದಲಾವಣೆಗಳು ಆಗಲ್ಲ. ಹೈಕಮಾಂಡ್ ಎಲ್ಲರೂ ಗಣನೆಗೆ ತೆಗದುಕೊಂಡು ಸಾಧಕ-ಬಾಧಕಗಳನ್ನು ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ. ಅಷ್ಟು ಸುಲಭವಾಗಿ ಕಾಂಗ್ರೆಸ್ ಪಕ್ಷದ ಮೇಲೆ ದಾಳಿ (ರೇಡ್) ಮಾಡೋದಕ್ಕೆ ಸಾಧ್ಯವಿಲ್ಲ. ಪಕ್ಷವನ್ನೇ ಹಿಡಿತಕ್ಕೆ ತೆಗೆದುಕೊಳ್ಳುತ್ತೇನೆ ಅನ್ನೋದು ಮೂರ್ಖತನದ ಪರಮಾವಧಿ. ರಮೇಶ್ ಜಾರಕಿಹೊಳಿ ಅವರ ಬಗ್ಗೆ ಮಾಹಿತಿ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ತಿಳಿದುಕೊಂಡು ಮಾತನಾಡುತ್ತೇನೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *