ಯಾದಗಿರಿ: ಮತಯಂತ್ರಗಳ ಮಾಸ್ಟರಿಂಗ್ ವೇಳೆ ಶಾಲಾ ಶಿಕ್ಷಕರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಸುರಪುರದ ಎಸ್.ಪಿ ಕಾಲೇಜು ಮೈದಾನದಲ್ಲಿ ನಡೆದಿದೆ.
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ನಿವಾಸಿ ಶಿವಪುತ್ರ (50) ಮೃತ ಶಾಲಾ ಶಿಕ್ಷಕರು. ಶಿವಪುತ್ರ ಅವರು ಶಹಪುರ ತಾಲೂಕಿನ ಹಳೇಸಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು. ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದರು. ಇದನ್ನು ಓದಿ: ಫೋನಿನಲ್ಲಿ ಹೇಳಿದ್ದನ್ನು ಕೇಳಿ ಚುನಾವಣಾಧಿಕಾರಿ ಪ್ರಾಣ ಉಳಿಸಿದ ಯೋಧ
ಶಿವಪುತ್ರ ಅವರು ಚುನಾವಣಾ ಕರ್ತವ್ಯಕ್ಕೆ ಹಾಜರಾಗಲು ಇಂದು ಸುರಪುರದ ಎಸ್.ಪಿ ಕಾಲೇಜು ಮೈದಾನಕ್ಕೆ ಬಂದಿದ್ದರು. ಮತಯಂತ್ರಗಳ ಮಾಸ್ಟರಿಂಗ್ ವೇಳೆ ಎದೆ ನೋವು ಕಾಣಿಸಿಕೊಂಡಿದ್ದು, ಏಕಾಏಕಿ ಕುಸಿದು ಬಿದ್ದು ಸ್ಥಳಲ್ಲಿಯೇ ಮೃತಪಟ್ಟಿದ್ದಾರೆ.
ಬಳ್ಳಾರಿ ಸಿರಗುಪ್ಪದಲ್ಲಿ ಚುನಾವಣಾ ತರಬೇತಿ ವೇಳೆ (ಏಪ್ರಿಲ್ 11ರಂದು) ಕೆಕ್ಕಲಕೋಟೆ ಗ್ರಾಮದ ಶಿಕ್ಷಕ ಬಿ.ರಮೇಶ್ (46) ಸಾವನ್ನಪ್ಪಿದ್ದರು. ಬಿ.ರಮೇಶ್ ಅವರು ಸಿರಗುಪ್ಪದ ಆರನೇ ವಾರ್ಡಿನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದರು. ಲೋಕಸಭಾ ಚುನಾವಣಾ ಹಿನ್ನಲೆಯಲ್ಲಿ ಪೂಲಿಂಗ್ ಆಫೀಸರ್ ಆಗಿ ನೇಮಕವಾಗಿದ್ದರು.