ಶ್ರೀಲಂಕಾ ಸ್ಫೋಟಕ್ಕೆ 160 ಬಲಿ – ಸ್ಫೋಟಕ್ಕೆ ಮೇಲ್ಚಾವಣಿ ಹಾರಿತು, ಎಲ್ಲಿ ನೋಡಿದರಲ್ಲಿ ರಕ್ತ: ವಿಡಿಯೋ

Public TV
2 Min Read

ಕೊಲಂಬೋ: ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ ಮೂರು ಚರ್ಚ್, ಮೂರು ಫೈವ್‍ಸ್ಟಾರ್ ಹೋಟೆಲ್‍ಗಳು ಸೇರಿದಂತೆ ಒಟ್ಟು 6 ಕಡೆ ಸರಣಿ ಬಾಂಬ್ ಸ್ಫೋಟಕ್ಕೆ 160 ಮಂದಿ ಮಂದಿ ಮೃತಪಟ್ಟು, 400ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ.

ಈಸ್ಟರ್ ಶುಭ ಸಂದರ್ಭದಲ್ಲಿ ಪ್ರಾರ್ಥನೆಗೆ ಸೇರಿದ್ದವರನ್ನು ಗುರಿಯಾಗಿಸಿ ಭಾನುವಾರ ಬೆಳಗ್ಗೆ 8:45ಕ್ಕೆ ಬಾಂಬ್ ಸ್ಫೋಟಿಸಲಾಗಿದೆ. ಕೊಲಂಬೋ ಬಂದರು ಸಮೀಪದ ಸೆಬಾಸ್ಟಿಯನ್ ಚರ್ಚ್, ಕೊಚ್ಚಿಕೇಡ್‍ನ ಸೆಂಟ್ ಅಂಟೋನಿ ಚರ್ಚ್, ನೆಗೊಂಬೆ ಚರ್ಚ್ ನಲ್ಲಿ ಬಾಂಬ್ ಸ್ಫೋಟಗೊಂಡಿದೆ.

ಬಾಂಬ್ ಸ್ಫೋಟದ ತೀವ್ರತೆಗೆ ಚರ್ಚ್ ಗಳ ಮೇಲ್ಛಾವಣಿ ಕಿತ್ತು ಹಾರಿಹೋಗಿದೆ. ಚರ್ಚ್ ಒಳಗಡೆಯಿದ್ದ ಬೆಂಚ್‍ಗಳು ಮುರಿದು ಹೋಗಿದೆ. ಚರ್ಚ್ ಒಳಗಡೆ ಎಲ್ಲಿ ನೋಡಿದರಲ್ಲಿ ರಕ್ತವೇ, ಛಿದ್ರ ಛಿದ್ರ ಮೃತದೇಹಗಳೇ ಕಾಣಸಿಗುತ್ತಿದೆ. ಈ ನಡುವೆ ಗಾಯಳುಗಳ ನರಳಾಟ, ತಮ್ಮವರನ್ನು ಕಳೆದುಕೊಂಡ ಜನರ ಆಕ್ರಂಧನ ಮುಗಿಲು ಮುಟ್ಟಿದೆ.

ಶಾಂಗ್ರಿಲಾ ಹಾಗೂ ಸಿನಾಮೊನ್ ಗ್ರ್ಯಾಂಡ್ ಹೋಟೆಲ್‍ಗಳಲ್ಲಿ ಸ್ಫೋಟ ನಡೆದಿದೆ. ಭಾರತೀಯರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿರಬಹುದು ಎಂದು ಶಂಕಿಸಲಾಗಿದೆ.

ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಈ ದಾಳಿಯನ್ನು ಖಂಡಿಸಿದ್ದು, ಭಯಪಡಬೇಡಿ ನಾವು ನಿಮ್ಮೊಂದಿಗೆ ಇದ್ದೇವೆ. ಈ ಸಮಯದಲ್ಲಿ ನಮಗೆ ಸಹಕರಿಸಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಇಂದು ನಮ್ಮ ಜನರ ಮೇಲೆ ನಡೆದಿರುವ ಹೇಡಿತನದ ದಾಳಿಗಳನ್ನು ಬಲವಾಗಿ ಖಂಡಿಸುತ್ತಿದ್ದೇನೆ. ಈ ದುರ್ಘಟನೆಯ ಸಮಯದಲ್ಲಿ ಎಲ್ಲಾ ಶ್ರೀಲಂಕಾದ ನಾಗರಿಕರು ಒಟ್ಟಾಗಿದ್ದು ನಮಗೆ ಸಹಕರಿಸಬೇಕು. ದಯವಿಟ್ಟು ಸುಳ್ಳು ವರದಿಗಳು ಹಾಗೂ ಊಹಾಪೋಹಗಳನ್ನು ಪ್ರಚಾರ ಮಾಡುವುದನ್ನು ತಪ್ಪಿಸಿ, ಈ ಪರಿಸ್ಥಿತಿಯನ್ನು ಸರಿಪಡಿಸಲು ಸರ್ಕಾರ ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ” ಎಂದು ತಿಳಿಸಿದ್ದಾರೆ. ಅಲ್ಲದೆ ಸ್ಫೋಟ ಸಂಭವಿಸಿರುವ ಸ್ಥಳಗಳಲ್ಲಿ ರಕ್ಷಣಾ ಕಾರ್ಯಚರಣೆ ಮುಂದುವರಿದಿದ್ದು ಈ ಬಗ್ಗೆ ತುರ್ತು ಸಭೆಯನ್ನು ಕರೆಯಲಾಗಿದೆ ಎಂದು ಶ್ರೀಲಂಕಾ ಸರ್ಕಾರ ಟ್ವೀಟ್ ಮಾಡಿದೆ.

ಈ ಬಗ್ಗೆ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಟ್ವಿಟ್ ಮೂಲಕ ಪ್ರತಿಕ್ರಿಯಿಸಿದ್ದು, ಈ ದುರಂತಕ್ಕೆ ಸಂತಾಪ ಸೂಚಿಸಿದ್ದಾರೆ. ನಾನು ಕೊಲಂಬೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಡನೆ ನಿರಂತರ ಸಂಪರ್ಕದಲ್ಲಿದ್ದೇನೆ. ಅಲ್ಲಿನ ಸರ್ಕಾರ ಪರಿಸ್ಥಿತಿಯನ್ನು ನಿಭಾಯಿಸುತ್ತಿದೆ. ಶ್ರೀಲಂಕಾದಲ್ಲಿರುವ ಭಾರತೀಯರ ಬಗ್ಗೆ ಮಾಹಿತಿ ಬೇಕಾದಲ್ಲಿ ಅಲ್ಲಿನ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಸಹಾಯವಾಣಿ ಸಂಖ್ಯೆಯನ್ನು ಟ್ವೀಟ್ ಮಾಡಿದ್ದಾರೆ.

https://www.youtube.com/watch?v=Kp4p-WCXmmg

https://www.youtube.com/watch?v=toEBKqvDA3c&feature=youtu.be

Share This Article
Leave a Comment

Leave a Reply

Your email address will not be published. Required fields are marked *