ಕೆರೆಯಂತಾದ ರಸ್ತೆ, ಮನೆ – ದಕ್ಷಿಣದಲ್ಲಿ ಇನ್ನೆರೆಡು ದಿನ ಮಳೆ

Public TV
2 Min Read

ಬೆಂಗಳೂರು: ರಾಜ್ಯಾದ್ಯಂತ ವರುಣನ ಅಬ್ಬರ ಮುಂದುವರಿದಿದೆ. ಗುರುವಾರ ಚುನಾವಣೆ ಮುಗಿಯುತ್ತಿದ್ದಂತೆ ಸಂಜೆ ಹೊತ್ತಿಗೆ ಬೆಂಗಳೂರಿನ ಹಲವೆಡೆ ಧಾರಾಕಾರ ಮಳೆ ಸುರಿದಿದೆ.

ಕಳೆದ ದಿನ ಸುರಿದ ಮಳೆಗೆ ಸಿಲಿಕಾನ್ ಸಿಟಿ ಮಂದಿ ತತ್ತರಿಸಿ ಹೋಗಿದ್ದಾರೆ. ವಿಜಯನಗರ, ಮಾಗಡಿರೋಡ್, ಯಶವಂತಪುರ, ಹೆಬ್ಬಾಳ, ಮೆಜೆಸ್ಟಿಕ್, ಕಾರ್ಪೊರೇಷನ್ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿತ್ತು. ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ, ವಾಹನ ಸವಾರರು ಪರದಾಡಿದ್ದರು. ಜೊತೆಗೆ ಮಳೆಯಿಂದಾಗಿ ಸ್ಟ್ರಾಂಗ್ ರೂಮ್‍ಗೆ ಇವಿಎಂ ಯಂತ್ರಗಳನ್ನು ಸಾಗಿಸಲು ಚುನಾವಣಾ ಅಧಿಕಾರಿಗಳು ಪರದಾಡಿದ್ದರು.

ನೆಲಮಂಗಲ ಪಟ್ಟಣದಲ್ಲಿ ಬಿರುಗಾಳಿ ಸಹಿತ ಮಳೆಗೆ ಮರ ಬಿದ್ದು ಕಾರು ಜಖಂ ಆಗಿದೆ. ಬಿಹೆಚ್ ರಸ್ತೆಯ ಉಜ್ಜೀವನ್ ಬ್ಯಾಂಕ್ ಮುಂಭಾಗ ಈ ಘಟನೆ ನಡೆದಿದ್ದು, ಮಾರುತಿ ಓಮ್ನಿ ಕಾರಿನ ಮುಂಭಾಗ ಜಖಂ ಆಗಿದೆ. ಇನ್ನೂ ನೆಲಮಂಗಲ ಹೆದ್ದಾರಿ ಫ್ಲೈಓವರ್ ಬಳಿ ಮೇಲಿಂದ ಜಲಪಾತದ ರೀತಿಯಲ್ಲಿ ಮಳೆಯ ನೀರು ಸುರಿಯುತ್ತಿತ್ತು. ಪರಿಣಾಮ ತುಮಕೂರು ಬೆಂಗಳೂರು ಹೆದ್ದಾರಿಯಲ್ಲಿರುವ ನೆಲಮಂಗಲ ಗೊರಗುಂಟೆ ಪಾಳ್ಯದ ಫ್ಲೈಓವರ್ ಮೇಲೆ ಕಿಲೋಮೀಟರ್ ದೂರದವರೆಗೆ ಟ್ರಾಫಿಕ್ ಜಾಮ್ ಆಗಿತ್ತು. ಬಳಿಕ ಸರ್ವೀಸ್ ರಸ್ತೆಯಲ್ಲಿ ವಾಹನ ಸವಾರರು ಸಂಚಾರ ಮಾಡಿದ್ದರು.

ಬೆಂಗಳೂರು ಹೊಸೂರು ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಮಳೆಯಿಂದ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿತ್ತು. ಎಲೆಕ್ಟ್ರಾನಿಕ್ ಸಿಟಿ ಬಳಿಯ ವಿರಸಂದ್ರ ಸಿಗ್ನಲ್ ಬಳಿ ಸುಮಾರು ನಾಲ್ಕು ಅಡಿಯಷ್ಟು ಮಳೆನೀರು ನಿಂತಿದ್ದು, ವಾಹನ ಸವಾರರು ಪರದಾಡಿದ್ದರು. ಬೊಮ್ಮನಹಳ್ಳಿ ವ್ಯಾಪ್ತಿಯ ಬೇಗೂರಿನ ವಾರ್ಡಿನ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಮನೆಗಳಿಗೆ ನುಗ್ಗಿದ ಮಳೆಯ ನೀರನ್ನು ನಿವಾಸಿಗಳು ಹೊರ ಹಾಕಿದ್ದಾರೆ. ಇತ್ತ ಬಿಬಿಎಂಪಿ ಅಧಿಕಾರಿಗಳಿಗೆ ಹಾಗೂ ಕಾರ್ಪೊರೇಟರ್  ಗೆ ವಿಷಯ ತಿಳಿಸಿದರೂ ಸ್ಥಳಕ್ಕೆ ಅಧಿಕಾರಿಗಳು ಬರಲಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.

ಚಾಮರಾಜನಗರ, ರಾಮನಗರ, ಮಂಡ್ಯ, ತುಮಕೂರು ಮತ್ತು ಕೋಲಾರದಲ್ಲಿ ಬಿಸಿಲಿನಿಂದ ಕಂಗೆಟ್ಟ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ದಕ್ಷಿಣ ಒಳನಾಡಿನಲ್ಲಿ ಗಾಳಿಯ ಒತ್ತಡ ಕಡಿಮೆ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಮಂಡ್ಯ, ಮೈಸೂರು, ರಾಮನಗರ, ಕೋಲಾರ, ಬೆಂಗಳೂರಿನಲ್ಲಿ ಇನ್ನು ಎರಡು ದಿನಗಳ ಕಾಲ ಇದೆ ರೀತಿ ಮಳೆಯಾಗುವ ಸಾಧ್ಯತೆ ಎಂದು ಪ್ರಕೃತಿ ನೈಸರ್ಗಿಕ ವಿಕೋಪ ಇಲಾಖೆಯ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಮಾಹಿತಿ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *