ಯಾದಗಿರಿ: ಪ್ರಧಾನಿ ನರೇಂದ್ರ ಮೋದಿ ಕಲಬುರಗಿಗಾಗಿ ಏನು ಮಾಡಿಲ್ಲ, ಕೇವಲ ನಾನು ಮಾಡುವ ಅಭಿವೃದ್ಧಿ ಕೆಲಸಕ್ಕೆ ಅವರು ಅಡ್ಡಗಾಲು ಹಾಕಿದ್ದಾರೆ ಅಂತ ಮಲ್ಲಿಕಾರ್ಜುನ ಖರ್ಗೆ ಮೋದಿ ವಿರುದ್ಧ ಆರೋಪ ಮಾಡಿದ್ದಾರೆ.
ಯಾದಗಿರಿಯ ಸೈದಾಪುರದಲ್ಲಿ ಬೃಹತ್ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಹಾಗೂ ಮೋದಿ ವಿರುದ್ಧ ಕಿಡಕಾರಿದ್ದಾರೆ. ಮೋದಿ ಅವರು ಈಗಾಗಲೇ ಘೋಷಣೆ ಮಾಡಿರುವ ರೈಲ್ವೆ ಕೋಚ್ ಫ್ಯಾಕ್ಟರಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಇದೇ ಕಲಬುರಗಿಗೆ ಮೋದಿ ಅವರ ಕೊಡುಗೆ. ಪ್ರಧಾನಿ ನರೇಂದ್ರ ಮೋದಿ ಕಲಬುರಗಿಗಾಗಿ ಏನು ಮಾಡಿಲ್ಲ, ಕೇವಲ ನಾನು ಮಾಡುವ ಅಭಿವೃದ್ಧಿ ಕೆಲಸಕ್ಕೆ ಅವರು ಅಡ್ಡಗಾಲು ಹಾಕಿದ್ದಾರೆ. ಅದೇ ಅವರ ಕೊಡುಗೆ ಎಂದು ವ್ಯಂಗ್ಯವಾಡಿದರು.
ಉಮೇಶ್ ಜಾದವ್‍ಗೆ ಕಾಂಗ್ರೆಸ್ ಏನೂ ಅನ್ಯಾಯ ಮಾಡಿಲ್ಲ. ಆದ್ರೆ ಜಾದವ್ ನಮ್ಮನ್ನು ಯಾಕೆ ಬಿಟ್ಟು ಹೋದರು ಎನ್ನುವ ಕಾರಣ ಗೊತ್ತಿಲ್ಲ. ನಾನು ಜಾದವ್ ಕುಟುಂಬಕ್ಕೆ ಸಾಕಷ್ಟು ಸಹಾಯ ಮಾಡಿದ್ದೇನೆ. ಆದ್ರೆ ಜಾದವ್ ಕುಟುಂಬದವರು ಇವತ್ತು ಇಲ್ಲಸಲ್ಲದನ್ನು ಮಾತನಾಡುತ್ತಿದ್ದಾರೆ ಎಂದರು. ನನಗೆ ಯಾವ ಪುತ್ರ ವ್ಯಾಮೋಹವೂ ಇಲ್ಲ. ನಾನು ರಾಷ್ಟ್ರ ರಾಜಕೀಯಕ್ಕೆ ಹೋದ ಬಳಿಕ ನಮ್ಮ ಕುಟುಂಬದವರು ರಾಜ್ಯ ರಾಜಕೀಯಕ್ಕೆ ಬರುವಂತೆ ಆಗಲಿ ಎಂದು ನಮ್ಮ ಪಕ್ಷದ ನಾಯಕರು ಬಲವಂತ ಮಾಡಿದರು. ನನ್ನ ಮಗನಿಗೆ ಟಿಕೆಟ್ ನೀಡಿದ್ದು ನಮ್ಮ ಪಕ್ಷದ ನಾಯಕರು ಎಂದು ತಿಳಿಸಿ ಖರ್ಗೆ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದರು.