ವಿಶ್ವಕಪ್ ವೀಕ್ಷಣೆಗೆ ಈಗಷ್ಟೇ 3ಡಿ ಕನ್ನಡಕ ಆರ್ಡರ್ ಮಾಡಿದ್ದೇನೆ: ರಾಯುಡು ವ್ಯಂಗ್ಯ

Public TV
1 Min Read

ಬೆಂಗಳೂರು: ಏಕದಿನ ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾದ 15 ಮಂದಿ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲರಾಗಿರುವ ಅಂಬಾಟಿ ರಾಯುಡು,”ವಿಶ್ವಕಪ್ ವೀಕ್ಷಿಸಲು ಈಗಷ್ಟೇ 3ಡಿ ಕನ್ನಡಕವನ್ನು ಆರ್ಡರ್ ಮಾಡಿದ್ದೇನೆ” ಎಂದು ಟ್ವೀಟ್ ಮಾಡಿ ಆಯ್ಕೆ ನಿರ್ಧಾರವನ್ನು ವ್ಯಂಗ್ಯ ಮಾಡಿದ್ದಾರೆ.

ಟೀಂ ಇಂಡಿಯಾದ ನಂ 4ರ ಸ್ಥಾನದಲ್ಲಿ ಆಡುವ ಆಟಗಾರರ ಬಗ್ಗೆ ಆಯ್ಕೆ ಸಮಿತಿಯಲ್ಲಿ ಚರ್ಚೆ ನಡೆದಿತ್ತು. ಈ ವೇಳೆ ವಿಜಯ್ ಶಂಕರ್ ಮತ್ತು ಅಂಬಾಟಿ ರಾಯುಡು ಇಬ್ಬರ ಮಧ್ಯೆ ಯಾರನ್ನು ಆಯ್ಕೆ ಮಾಡಬೇಕು ಎನ್ನುವುದರ ಬಗ್ಗೆ ಸದಸ್ಯರು ಚರ್ಚೆ ನಡೆಸಿ ಅಂತಿಮವಾಗಿ ವಿಜಯ್ ಶಂಕರ್ ಅವರನ್ನು ಆಯ್ಕೆ ಮಾಡಿದ್ದರು.

ವಿಜಯ್ ಶಂಕರ್ ಅವರನ್ನು ಆಯ್ಕೆ ಮಾಡಿದ್ದಕ್ಕೆ ಟೀಂ ಇಂಡಿಯಾ ಆಯ್ಕೆ ಸಮಿತಿಯ ಮುಖ್ಯಸ್ಥ ಎಂಎಸ್‍ಕೆ ಪ್ರಸಾದ್, ಆಲ್‍ರೌಂಡರ್ 3 ಡೈಮೆನ್ಷನಲ್(ಮೂರು ಆಯಾಮ ಹೊಂದಿರುವ ಆಲ್‍ರೌಂಡರ್) ಅವರನ್ನು ಆಯ್ಕೆ ಮಾಡಬೇಕಿತ್ತು. ವಿಜಯ್ ಶಂಕರ್ ಬ್ಯಾಟಿಂಗ್ ಜೊತೆ ಬೌಲಿಂಗ್ ಮಾಡುತ್ತಾರೆ. ಜೊತೆಗೆ ಉತ್ತಮ ಫೀಲ್ಡರ್. ಹೀಗಾಗಿ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ ಎಂದು ಸಮಿತಿಯ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು.

ಎಂಎಸ್‍ಕೆ ಪ್ರಸಾದ್ ಸಮರ್ಥನೆಗೆ, ರಾಯುಡು ನಾನು 3ಡಿ ಕನ್ನಡಕವನ್ನು ಧರಿಸಿ 3 ಡೈಮೆನ್ಷನಲ್ ಆಟಗಾರನ ಆಟವನ್ನು ನೋಡುತ್ತೇನೆ ಎನ್ನುವ ಅರ್ಥವಿರುವ ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ.

ತಮಿಳುನಾಡಿನ 28 ವರ್ಷದ ವಿಜಯ್ ಶಂಕರ್ ಒಟ್ಟು 9 ಪಂದ್ಯಗಳ ಐದು ಇನ್ನಿಂಗ್ಸ್ ನಲ್ಲಿ 33.00 ಸರಾಸರಿಯಲ್ಲಿ 165 ರನ್ ಹೊಡೆದಿದ್ದಾರೆ. ಆಂಧ್ರಪ್ರದೇಶದ 33 ವರ್ಷದ ಅಂಬಾಟಿ ರಾಯುಡು 55 ಪಂದ್ಯಗಳ 50 ಇನ್ನಿಂಗ್ಸ್ ನಲ್ಲಿ 47.05 ಸರಾಸರಿಯಲ್ಲಿ 1,694 ರನ್ ಹೊಡೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *