ಗಣಿ ಕೋಟೆಯನ್ನು ಉಳಿಸಿಕೊಳ್ಳಲು ಟ್ರಬಲ್ ಶೂಟರ್ ಮಾಸ್ಟರ್ ಪ್ಲಾನ್

Public TV
1 Min Read

ಬಳ್ಳಾರಿ: ಲೋಕಸಭಾ ಚುನಾವಣೆ ಮುಗಿದ ಮೇಲೆ ರಾಜ್ಯ ಸರ್ಕಾರ ಇರಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದರೆ ಇತ್ತ ಬಳ್ಳಾರಿಯಲ್ಲಿ ಜಲಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಚುನಾವಣೆ ಮುಗಿದ ನಂತರ ಕೈ ಶಾಸಕರಿಗೆ ಸಚಿವ ಸ್ಥಾನದ ಆಫರ್ ನೀಡಿ ಮತ ಬೇಟೆ ಮಾಡುತ್ತಿದ್ದಾರೆ.

ಹೌದು. ಬಳ್ಳಾರಿ ಉಸ್ತುವಾರಿ ಸಚಿವರಾಗಿರುವ ಕಾಂಗ್ರೆಸ್‍ನ ಟ್ರಬಲ್ ಶೂಟರ್, ಕನಕಪುರದ ಬಂಡೆ ಡಿಕೆ ಶಿವಕುಮಾರ್ ತಾವಿಲ್ಲದಿದ್ದರೂ ಜಿಲ್ಲೆಯನ್ನು ಗೆಲ್ಲಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಅದಕ್ಕಾಗಿ ಅತೃಪ್ತ ಶಾಸಕರಿಗೆ ಆಮಿಷ ನೀಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದುಬಂದಿದೆ.

ಕಳೆದ ಉಪಚುನಾವಣೆಯಲ್ಲಿ ಉಸ್ತುವಾರಿ ವಹಿಸಿಕೊಂಡು ಹಗಲಿರುಳು ಶ್ರಮಿಸಿ ಬಿಜೆಪಿ ಕೋಟೆಯನ್ನು ಕಾಂಗ್ರೆಸ್ ತೆಕ್ಕೆಗೆ ಪಡೆದ ಡಿಕೆಶಿ ಈ ಬಾರಿ ತಮ್ಮ ಅನುಪಸ್ಥಿತಿಯಲ್ಲೂ ಕ್ಷೇತ್ರವನ್ನು ಉಳಿಸಿಕೊಳ್ಳಲು ಶತ ಪ್ರಯತ್ನ ನಡೆಸುತ್ತಿದ್ದಾರೆ. ಈ ಪ್ರಯತ್ನದ ಭಾಗವಾಗಿ ಅಭ್ಯರ್ಥಿ ಉಗ್ರಪ್ಪ ಗೆಲುವಿಗೆ ಜಿಲ್ಲೆಯ ಇಬ್ಬರೂ ಸಚಿವರಿಗೆ ಟಾಸ್ಕ್ ನೀಡಿದ್ದಾರೆ. ಇನ್ನುಳಿದ ಕಾಂಗ್ರೆಸ್ ಶಾಸಕರಿಗೆ ಸಚಿವ ಸ್ಥಾನದ ಆಮಿಷವೊಡ್ಡಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಉಪಚುನಾವಣೆಯಲ್ಲಿ ಹೆಚ್ಚು ಕಡಿಮೆ ಇಡೀ ಸರ್ಕಾರವೇ ಉಗ್ರಪ್ಪ ಅವರ ಪರವಾಗಿ ಕೆಲಸ ಮಾಡಿತ್ತು. ಇದರ ಜೊತೆಗೆ ಜಿಲ್ಲೆಯ 6 ಕಾಂಗ್ರೆಸ್ ಶಾಸಕರಿಗೆ ಸಚಿವ ಸ್ಥಾನದ ಆಮಿಷವೊಡ್ಡಿ ಉಗ್ರಪ್ಪರನ್ನು ಗೆಲ್ಲುವಂತೆ ಡಿಕೆಶಿ ನೋಡಿಕೊಂಡಿದ್ದರು. ಆದರೆ ಬೈ ಎಲೆಕ್ಷನ್ ನಂತರ ಸಚಿವ ತುಕಾರಾಂ ಹಾಗೂ ಪರಮೇಶ್ವರ ನಾಯ್ಕ್‍ಗೆ ಮಾತ್ರ ಸಚಿವ ಸ್ಥಾನ ಸಿಕ್ಕಿದ ಪರಿಣಾಮ ಉಳಿದ ಶಾಸಕರು ಅಸಮಾಧಾನಗೊಂಡಿದ್ದರು. ಕೈ ಶಾಸಕರ ಈ ಅಸಮಧಾನ ಉಗ್ರಪ್ಪ ಗೆಲುವಿಗೆ ಅಡ್ಡಿಯಾಬಹುದು ಎನ್ನುವ ವಿಚಾರ ತಿಳಿಯುತ್ತಿದ್ದಂತೆ ಡಿಕೆಶಿ ಸಚಿವರಿಗೆ ಟಾಸ್ಕ್ ನೀಡಿದ್ರೆ ಉಳಿದ ಶಾಸಕರಿಗೆ ಮತ್ತೆ ಸಚಿವ ಸ್ಥಾನದ ಆಮಿಷವೊಡ್ಡಿ ರಣತಂತ್ರ ರೂಪಿಸಿದ್ದಾರೆ.

ಪಕ್ಷದಿಂದ ದೂರವುಳಿದಿರುವ ಅತೃಪ್ತ ಶಾಸಕರ ಹೆಣ ಹೋರೋದು ನಾನೇ, ಪಲ್ಲಕ್ಕಿ ಹೊರೋದು ನಾನೇ ಎನ್ನುವ ಮೂಲಕ ಅವರ ಕಷ್ಟ ಸುಖಕ್ಕೆ ಭಾಗೀದಾರ ನಾನೇ ಎನ್ನುವ ಸಂದೇಶವನ್ನು ಡಿಕೆಶಿ ಈಗಾಗಲೇ ಪಾಸ್ ಮಾಡಿದ್ದು ಈ ರಣತಂತ್ರದಲ್ಲಿ ಯಶಸ್ವಿ ಆಗುತ್ತಾರಾ ಎನ್ನುವ ಪ್ರಶ್ನೆಗೆ ಮೆ 23 ರಂದು ಉತ್ತರ ಸಿಗಲಿದೆ.

Share This Article
Leave a Comment

Leave a Reply

Your email address will not be published. Required fields are marked *